Rice Prices Rise: ಗೋಧಿ, ಅಕ್ಕಿ ಬೆಲೆಗಳಲ್ಲಿ ತೀವ್ರ ಏರಿಕೆ- ಸರ್ಕಾರ ತೆಗೆದುಕೊಂಡ ಕ್ರಮಗಳೇನು?
ಬೆಂಗಳೂರು, ಆಗಸ್ಟ್ 09: ಟೊಮೆಟೊ ಬಳಿಕ ಗೋಧಿ ಹಾಗೂ ಅಕ್ಕಿ ದರಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಮತ್ತೊಂದು ಸಂಕಷ್ಟ ಬಂದೊದಗಿದೆ. ಈ ಎರಡೂ ಅಗತ್ಯ ಆಹಾರ ಧಾನ್ಯಗಳ ಬೆಲೆಗಳನ್ನು ತಗ್ಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಮುಕ್ತ ಮಾರುಕಟ್ಟೆಗೆ ಹೆಚ್ಚುವರಿ 50 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿಯನ್ನು ಮಾರಾಟ ಮಾಡಲು ಸರ್ಕಾರ ಮುಂದಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ( ಆಗಸ್ಟ್ 7 ರ ಹೊತ್ತಿಗೆ ) ಗೋಧಿ ಬೆಲೆಯು ಚಿಲ್ಲರೆ ಮಾರುಕಟ್ಟೆಯಲ್ಲಿ ಶೇಕಡಾ 6.77 ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇಕಡಾ 7.37 ರಷ್ಟು ಏರಿಕೆಯಾಗಿದೆ. ಅದೇ ರೀತಿ ಚಿಲ್ಲರೆ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಶೇ 10.63 ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇ 11.12ರಷ್ಟು ಏರಿಕೆಯಾಗಿದೆ.

ಈ ವಿಚಾರವಾಗಿ ಮಾತನಾಡಿದ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ, ಅಕ್ಕಿಯ ಮೀಸಲು ಬೆಲೆಯನ್ನು ಕೆಜಿಗೆ 29 ರೂಪಾಯಿಗೆ ಇಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಸರ್ಕಾರವು ನೀಡಿದ ಒಟ್ಟು 5 ಲಕ್ಷ ಟನ್ ಅಕ್ಕಿಯಲ್ಲಿ ಕೇವಲ 0.38 ಪ್ರತಿಶತದಷ್ಟು (19,000 ಟನ್‌ಗಳು) ಅಕ್ಕಿಯನ್ನು ಮಾರಾಟ ಮಾಡಲಾಗಿದೆ.

ಒಎಂಎಸ್‌ಎಸ್ ಮೂಲಕ ನೀಡಲಾಗುವ ಒಟ್ಟು 55 ಪ್ರತಿಶತದಷ್ಟು ಗೋಧಿಯನ್ನು ಮಾರಾಟ ಮಾಡಲಾಗಿದೆ. ಜೂನ್ 23 ರಂದು ನೀಡಲಾದ 15 ಲಕ್ಷ ಟನ್ ಗೋಧಿಯಲ್ಲಿ ಇದುವರೆಗೆ ನಡೆದ ಏಳು ಇ-ಹರಾಜುಗಳಲ್ಲಿ 8.2 ಲಕ್ಷ ಟನ್ ಮಾರಾಟವಾಗಿದೆ.
ಜೂನ್ 28 ರಂದು ನಡೆದ ಮೊದಲ ಹರಾಜಿನಲ್ಲಿ ಗೋಧಿಯ ಸರಾಸರಿ ಮಾರಾಟ ಬೆಲೆ ಕ್ವಿಂಟಲ್‌ಗೆ 2,136 ರೂಪಾಯಿ ಆಗಿತ್ತು. ಇದು ಆಗಸ್ಟ್ 9 ರಂದು 2,254 ಕ್ಕೆ ಏರಿದೆ. ಜುಲೈ 5 ರಂದು ನಡೆದ ಹರಾಜಿನಲ್ಲಿ ಅಕ್ಕಿ ಪ್ರತಿ ಕ್ವಿಂಟಲ್‌ಗೆ 3,175 ರೂಪಾಯಿಗೆ ಮಾರಾಟವಾಗಿತ್ತು.
ಫೆಬ್ರವರಿ 2022 ರಲ್ಲಿ ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ಧಾನ್ಯಗಳ ಬೆಲೆಯಲ್ಲಿ ನಿರಂತರ ಮತ್ತು ತೀವ್ರ ಏರಿಕೆ ಕಂಡುಬಂದಿದೆ. ಪ್ರಮುಖ ಆಹಾರ ಪದಾರ್ಥಗಳ ಬೆಲೆಗಳ ಏರಿಕೆಯನ್ನು ಪರಿಶೀಲಿಸಲು ಭಾರತ ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದರೂ, ಏಕದಳ ಧಾನ್ಯಗಳ ಬೆಲೆಗಳು ಏರಿಕೆಯಾಗುತ್ತಲೇ ಇವೆ.

'ನಾವು ಬೆಲೆಗಳನ್ನು ನಿಯಂತ್ರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸರ್ಕಾರವು ಹಣದುಬ್ಬರವನ್ನು ತಗ್ಗಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆಮದು ಸುಂಕ ಕಡಿತ ಸೇರಿದಂತೆ ಹಲವು ಆಯ್ಕೆಗಳು ಪರಿಗಣನೆಯಲ್ಲಿವೆ' ಎಂದು ಚೋಪ್ರಾ ಮಾಹಿತಿ ನೀಡಿದ್ದಾರೆ.
ಮೇ 2022 ರಲ್ಲಿ ಘೋಷಿಸಲಾದ ಗೋಧಿ ರಫ್ತು ನಿಷೇಧವು ಜಾರಿಯಲ್ಲಿದೆ. ಗೋಧಿ ಸಂಗ್ರಹಣೆಯನ್ನು ತಡೆಗಟ್ಟಲು ಮತ್ತು ಬೆಲೆಗಳನ್ನು ತಗ್ಗಿಸಲು ಸರ್ಕಾರವು 15 ವರ್ಷಗಳಲ್ಲಿ ಮೊದಲ ಬಾರಿಗೆ ಗೋಧಿಯ ಮೇಲೆ ದಾಸ್ತಾನು ಮಿತಿಗಳನ್ನು ವಿಧಿಸಿದೆ. ಜುಲೈ 20 ರಂದು ಸರ್ಕಾರವು ಬಾಸುಮತಿ ಅಲ್ಲದ ಬಿಳಿ ಅಕ್ಕಿ ರಫ್ತು ನಿಷೇಧಿಸಿದೆ.












Click it and Unblock the Notifications