ಖ್ಯಾತ ಕ್ರಾಂತಿಕಾರಿ ಗಾಯಕ ಗದ್ದರ್ ನಿಧನ
ಖ್ಯಾತ ಕ್ರಾಂತಿಕಾರಿ ಗಾಯಕ ಬಲ್ಲಾದೀರ್ ಗದ್ದರ್ ಇಂದು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಗುಮ್ಮಡಿ ವಿಟ್ಟಲ್ ರಾವ್ (ಜನನ 1949), ಗದ್ದರ್ ಎಂದೇ ಚಿರಪರಿಚಿತರಾಗಿದ್ದರು. ಇವರು ಕ್ರಾಂತಿಕಾರಿ ಕವಿ ಮತ್ತು ಮಾಜಿ ನಕ್ಸಲೈಟ್ ನಾಯಕ. 2010ರವರೆಗೆ ನಕ್ಸಲ್ ಚಳವಳಿಯಲ್ಲಿ ಸಕ್ರೀಯವಾಗಿದ್ದ ಅವರು ನಂತರ ತೆಲಂಗಾಣ ರಾಜ್ಯ ರಚನೆಗಾಗಿ ಚಳವಳಿಯಲ್ಲಿ ಸೇರಿಕೊಂಡರು.

ಗದ್ದರ್ ಅನೇಕ ಯುವಕರನ್ನು ಕ್ರಾಂತಿಕಾರಿ ಚಳುವಳಿಗಳಲ್ಲಿ ಸೇರಲು ಪ್ರೇರೇಪಣೆ ನಿಡಿದ್ದಾರೆ. ಇತ್ತೀಚೆಗೆ ಖಮ್ಮಂನಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದ ಕಾಂಗ್ರೆಸ್ ಸಾರ್ವಜನಿಕ ಸಭೆಯಲ್ಲಿ ಗದ್ದರ್ ಭಾಗವಹಿಸಿದ್ದರು.
ಗದ್ದರ್ ಮಧ್ಯಾಹ್ನ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಅಪೋಲೋ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. "77 ವರ್ಷ ವಯಸ್ಸಿನ ಗುಮ್ಮಡಿ ವಿಟ್ಟಲ್ ಅಲಿಯಾಸ್ ಗದ್ದರ್ ಅವರು ಭಾನುವಾರ ಮಧ್ಯಾಹ್ನ 3 ಗಂಟೆಗೆ ಅಮೀರ್‌ಪೇಟೆಯ ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆಯಲ್ಲಿ ಶ್ವಾಸಕೋಶ ಮತ್ತು ಮೂತ್ರದ ತೊಂದರೆ ಮತ್ತು ವಯಸ್ಸಾದ ಕಾರಣ ನಿಧನರಾದರು." ಎಂದು ಪ್ರಕಟಣೆ ತಿಳಿಸಿದೆ.
ಗದ್ದರ್ ತೀವ್ರ ಹೃದ್ರೋಗದಿಂದ ಬಳಲುತ್ತಿದ್ದರು ಮತ್ತು ಜುಲೈ 20 ರಂದು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ. "ಅವರು ತೀವ್ರ ಹೃದ್ರೋಗದಿಂದ ಬಳಲುತ್ತಿದ್ದರು ಮತ್ತು ಜುಲೈ 20, 2023 ರಂದು ದಾಖಲಾಗಿದ್ದರು. ಅವರು ಆಗಸ್ಟ್ 3, 2023 ರಂದು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು" ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ರಾಹುಲ್ ಗಾಂಧಿ ಸಂತಾಪ
"ತೆಲಂಗಾಣದ ಅಪ್ರತಿಮ ಕವಿ, ಬಲ್ಲಾಳರು ಮತ್ತು ಹೋರಾಟಗಾರ ಗುಮ್ಮಡಿ ವಿಟ್ಟಲ್ ರಾವ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ತೆಲಂಗಾಣದ ಜನರ ಮೇಲಿನ ಅವರ ಪ್ರೀತಿಯು ಅವರನ್ನು ಅವಿರತವಾಗಿ ಹೋರಾಡಲು ಪ್ರೇರೇಪಿಸಿತು. ಅವರ ಪರಂಪರೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ." ಎಂದು ಟ್ವೀಟ್ ಮಾಡಿದ್ದಾರೆ.
ಗದ್ದರ್ ಮರಣದ ಬಳಿಕ ಹೇಳಿಕೆ ನೀಡಿರುವ ಕಾಂಗ್ರೆಸ್, "ದಶಕಗಳಿಂದ ಜನರಿಗಾಗಿ ಅವಿರತ ಹೋರಾಟ ನಡೆಸುತ್ತಿರುವ ಗದ್ದರ್ ಅವರ ನಿಧನ ತೆಲಂಗಾಣ ಜನತೆಗೆ ತುಂಬಲಾರದ ನಷ್ಟವಾಗಿದೆ. ಗದ್ದರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ರೇವಂತ್ ರೆಡ್ಡಿ, ಎಲ್ಲಾ ಮಂಡಲ ಕೇಂದ್ರಗಳ ಪ್ರಮುಖ ರಸ್ತೆಗಳಲ್ಲಿ ಗದ್ದರ್ ಅವರ ಭಾವಚಿತ್ರವನ್ನು ಹಾಕುವ ಮೂಲಕ ಕಾಂಗ್ರೆಸ್ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಬೇಕು ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಗೆ ಕರೆ ನೀಡಿದರು."
ಬಿಜೆಪಿ ನಾಯಕ ಈಟಾಲ ರಾಜೇಂದರ್ ಕೂಡ ಗದ್ದರ್ ನಿಧನಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಅವರ ಸಾವು ತೆಲಂಗಾಣಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ. "ತೆಲಂಗಾಣಕ್ಕಾಗಿ ಅವರ ಹೋರಾಟ ಅವಿಸ್ಮರಣೀಯ. ಅವರು ಭೌತಿಕವಾಗಿ ಇಲ್ಲದಿದ್ದರೂ ಅವರ ಹಾಡು ಶಾಶ್ವತವಾಗಿ ಉಳಿಯುತ್ತದೆ" ಎಂದು ಈಟಾಲ ರಾಜೇಂದರ್ ಹೇಳಿದರು.












Click it and Unblock the Notifications