ಪಕ್ಷದಲ್ಲಿ ಹಿಡಿತ ಕಳೆದುಕೊಳ್ಳುತ್ತಿದ್ದಾರೆಯೇ ಅಮಿತ್ ಶಾ, ಮೋದಿ?
ದೆಹಲಿ ಮತ್ತು ಬಿಹಾರ ಚುನಾವಣೆಯ ಹೀನಾಯ ಸೋಲಿನ ನಂತರದ ಬೆಳವಣಿಗೆಯನ್ನು ಗಮನಿಸಿದರೆ ಬಿಜೆಪಿಯ 'ಚಾಣಾಕ್ಷ' ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ತಮ್ಮ ಮುಖಂಡರ ಮೇಲೆ ಹೊಂದಿರುವ ಪ್ರಾಭ್ಯಲ್ಯ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆಯೇ ಎನ್ನುವ ಸಂಶಯ ಕಾಡುವುದು ಸಹಜ.
ಕಳೆದ ಒಂದು ವರ್ಷದಲ್ಲಿ ಅದಕ್ಕೆ ಕೊಡಬಹುದಾದ ಬೇಕಾದಷ್ಟು ಉದಾಹರಣೆಗಳು ನಮ್ಮ ಮುಂದಿವೆ, ದೆಹಲಿ ಕ್ರಿಕೆಟ್ ಮಂಡಳಿ ಭ್ರಷ್ಟಾಚಾರದ ವಿಚಾರದಲ್ಲಿ ಸ್ವಪಕ್ಷೀಯ ಸಂಸದರೊಬ್ಬರು ಲೋಕಸಭೆಯಲ್ಲೇ ಬಿಜೆಪಿ ವಿರುದ್ದ ತಿರುಗಿಬಿದ್ದದ್ದು ಈ ಮೇಲಿನ ಸಂಶಯಕ್ಕೆ ಪುಷ್ಟಿ ನೀಡುವಂತಹ ಲೇಟೆಸ್ಟ್ ರಾಜಕೀಯ ಪ್ರಹಸನ. (3 ನಿಮಿಷಕ್ಕಾಗಿ 25 ದಿನ ಹಾಳು ಮಾಡಿದ ಕಾಂಗ್ರೆಸ್)
ಮೋದಿ ಸರಕಾರ ಮಾಡುವ ತಪ್ಪನ್ನು ಜಾತಕಪಕ್ಷಿಯಂತೆ ಕಾಯುತ್ತಿರುವ ವಿರೋಧ ಪಕ್ಷಗಳಿಗೆ, ಬಿಜೆಪಿಯ ಮುಖಂಡರೇ ಆಹಾರ ನೀಡಿದ ಉದಾಹರಣೆಗಳು ಒಂದಾ.. ಎರಡಾ? ಪಕ್ಷದ ವರಿಷ್ಠರ ಕಟ್ಟುನಿಟ್ಟಿನ ಆದೇಶಕ್ಕೆ ಸ್ವಲ್ಪ ದಿನ ಸುಮ್ಮನಿದ್ದು, ನಂತರ ತಮ್ಮ ಬಾಯಿಚಪಲ ತೀರಿಸುವ ನಾಯಕರುಗಳ ಸಂಖ್ಯೆಗೆ ಬಿಜೆಪಿಯಲ್ಲಿ ಬರವಿಲ್ಲ.
ಕರ್ನಾಟಕದಲ್ಲಿ ಇದಕ್ಕೆ ಕೊಡಬಹುದಾದ ಉದಾಹರಣೆಯೆಂದರೆ ಕೆ ಎಸ್ ಈಶ್ವರಪ್ಪ. ಇವರು ನೀಡುವ ಹೇಳಿಕೆಯಿಂದ ಅದೆಷ್ಟೋ ಬಾರಿ ಪಕ್ಷಕ್ಕೆ ಮುಜುಗರವಾಗಿದ್ದರೂ, ಹಿರಿಯ ನಾಯಕರಾದ ಈಶ್ವರಪ್ಪ ಬೇಕಾಬಿಟ್ಟಿ ಹೇಳಿಕೆ ನೀಡುವುದು, ನಂತರ ಕ್ಷಮೆ ಕೇಳುವುದು ಇವರ ರಾಜಕೀಯ ಹವ್ಯಾಸದಂತೆ ಆಗಿದೆ, ಮುಂದುವರಿಯುತ್ತಲೂ ಇದೆ. (ಡಿಡಿಸಿಎ ಭ್ರಷ್ಟಾಚಾರ: ವಿಡಿಯೋ ಸಾಕ್ಷ್ಯ)
ಪಕ್ಷದ 'ಟ್ರಬಲ್ ಶೂಟರ್' ಎಂದೇ ಬಿಂಬಿತವಾಗಿದ್ದ ಮತ್ತು ಮೋದಿ ಸರಕಾರದ ಪ್ರಭಾವಿ ಸಚಿವ ಅರುಣ್ ಜೇಟ್ಲಿ ಹೆಸರು ಖುದ್ದು ಭ್ರಷ್ಟಾಚಾರದ ಹಗರಣದ ಸುಳಿಯಲ್ಲಿ ಸಿಲುಕಿಕೊಂಡ ನಂತರದ ವಿದ್ಯಮಾನಗಳನ್ನು ಅವಲೋಕಿಸಿದಾಗ ಪಕ್ಷಕ್ಕೆ RSS ಸಂಘಟನೆಯ ಶಿಸ್ತಿನ ಪಾಠದ ಅವಶ್ಯಕತೆ ತುರ್ತಾಗಿ ಆಗಬೇಕಿದೆ ಎಂದರೆ ತಪ್ಪಾಗುವುದಿಲ್ಲ.
ಪಕ್ಷದ ನಾಯಕರ ಮೇಲೆ ಶಾ, ಮೋದಿ ಹಿಡಿತ ಕಳೆದುಕೊಳ್ಳುತ್ತಿದ್ದಾರೆಯೇ ಎಂದು ಶಂಕೆ ಮೂಡಲು ಕೊಡಬಹುದಾದ ಕೆಲವೊಂದು ಉದಾಹರಣೆಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ದೆಹಲಿ ಕ್ರಿಕೆಟ್ ಸಂಸ್ಥೆ
ದೆಹಲಿ ಕ್ರಿಕೆಟ್ ಸಂಸ್ಥೆಯ ಭ್ರಷ್ಟಾಚಾರದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಭಾಗಿಯಾಗಿದ್ದಾರೆಂದು ಅರವಿಂದ್ ಕೇಜ್ರಿವಾಲ್ ಜೊತೆ ಧ್ವನಿಗೂಡಿಸಿದ್ದ ಬಿಜೆಪಿಯ ಸಂಸದ ಕೀರ್ತಿ ಆಜಾದ್, ಎರಡು ದಿನಗಳ ಹಿಂದೆ ಲೋಕಸಭೆಯಲ್ಲಿ ಅವ್ಯವಹಾರದ ತನಿಖೆ ಆಗಬೇಕೆಂದು ಪ್ರತಿಭಟನೆ ನಡೆಸಿ ಪಕ್ಷಕ್ಕೆ ತೀವ್ರ ಮುಜುಗರ ತಂದಿದ್ದರು.

ಅಮಿತ್ ಶಾ ಎಚ್ಚರ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಎರಡೆರಡು ಬಾರಿ ಕೀರ್ತಿ ಆಜಾದ್ ಅವರನ್ನು ಕರೆಸಿ ಮಾತುಕತೆ ನಡೆಸಿ, ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಸಿದ್ದರು. ಆದರೆ ಇದ್ಯಾವುದಕ್ಕೂ ಕ್ಯಾರೇ ಅನ್ನದ ಕೀರ್ತಿ ಆಜಾದ್, ಬೇಕಿದ್ದರೆ ನನ್ನ ಮೇಲೂ ಮಾನನಷ್ಟ ಮೊಕದ್ದಮೆ ಹೂಡಿ ಎಂದು ಬಿಜೆಪಿ ವರಿಷ್ಠರಿಗೆ ಸವಾಲು ಎಸೆದಿರುವುದು ನಮ್ಮ ಮುಂದಿದೆ.

ಶತ್ರುಘ್ನ ಸಿನ್ಹಾ
ಬಿಜೆಪಿ ಮತ್ತೋರ್ವ ಹಿರಿಯ ಮುಖಂಡ, ಸಂಸದ ಶತ್ರುಘ್ನ ಸಿನ್ಹಾ, ಹಲವು ಎಚ್ಚರಿಕೆಯ ನಡುವೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಬಹಿರಂಗವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಬಿಹಾರ ಚುನಾವಣೆ ಘೋಷಣೆಯಾದ ನಂತರ, ತಮ್ಮದೇ ಪಕ್ಷದ ಮುಖಂಡರ ವಿರುದ್ದ ಹರಿಹಾಯುತ್ತಲೇ ಬಂದಿದ್ದ ಶತ್ರುಘ್ನ ಸಿನ್ಹಾ, ಬಿಹಾರ ಚುನಾವಣೆ ಸೋಲಿಗೆ ಮೋದಿ ಮತ್ತು ಶಾ ಕಾರಣವೆಂದು ಹೇಳಿಕೆ ನೀಡಿ, ವಿರೋಧದ ನಡುವೆಯೂ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ನಾಲ್ವರು ಹಿರಿಯರು
ಬಿಹಾರದ ಚುನಾವಣೆಯ ಸೋಲಿನ ನಂತರ ಪಕ್ಷದ ಹಿರಿಯರಾದ ಎಲ್ ಕೆ ಅಡ್ವಾಣಿ, ಮರಳಿ ಮನೋಹರ್ ಜೋಷಿ, ಯಶವಂತ್ ಸಿನ್ಹಾ ಮತ್ತು ಶಾಂತಕುಮಾರ್, ಬಿಹಾರದ ಸೋಲಿನ ಬಗ್ಗೆ ಜಂಟಿ ಹೇಳಿಕೆ ನೀಡಿ ಪಕ್ಷಕ್ಕೆ ಮತ್ತಷ್ಟು ಮುಜುಗರ ತಂದಿದ್ದರು.

ಬಿಹಾರದ ಬಿಜೆಪಿ ಮುಖಂಡರು
ಚುನಾವಣೆಯ ವೇಳೆ ನಮ್ಮ ಸಲಹೆಗಳಿಗೆ ಮನ್ನಣೆ ನೀಡಿಲ್ಲ. ಅಮಿತ್ ಶಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆಂದು ಬಿಹಾರ ಬಿಜೆಪಿ ರಾಜ್ಯ ಘಟಕದ ಹಲವು ಸದಸ್ಯರು ರಾಷ್ಟ್ರಾಧ್ಯಕ್ಷ ಶಾ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಬಿಹಾರದ ಏಳು ಜನ ಸಂಸದರು ಕೂಡಾ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದ್ದರು.

ಎಚ್ಚರಿಕೆ ನೀಡಿದರೂ ಕೇಳದ ಬಿಜೆಪಿ ಮುಖಂಡರು
ಇನ್ನು ಬಿಜೆಪಿ ಸಂಸದ ಯೋಗಿ ಆದಿತ್ಯಾನಂದ, ಸಾಧ್ವಿ ರಿತಾಂಬರ, ಸಾಧ್ವಿ ಪ್ರಾಚಿ, ಸಾಕ್ಷಿ ಮಹಾರಾಜ್ ಮುಂತಾದವರು ಪಕ್ಷದ ಲಕ್ಷಣರೇಖೆ ಉಲ್ಲಂಘಿಸಿ, ವರಿಷ್ಠರ ಮಾತಿಗೆ ಬೆಲೆಕೊಡದೇ ಹಲವು ಬಾರಿ ಪಕ್ಷದ ಇಮೇಜ್ ಹಾಳಾಗುವ ಹೇಳಿಕೆ ನೀಡುತ್ತಲೇ ಬರುತ್ತಿದ್ದಾರೆ.












Click it and Unblock the Notifications