ಚುನಾವಣಾ ನಿಯಮಗಳ ತಿದ್ದುಪಡಿ: ಕಾಂಗ್ರೆಸ್‌ನಿಂದ ಸುಪ್ರೀಂನಲ್ಲಿ ಕಾನೂನು ಹೋರಾಟ
ನವದೆಹಲಿ, ಡಿಸೆಂಬರ್ 24: ಕೇಂದ್ರ ಸರ್ಕಾರ ಚುನಾವಣಾ ನಿಯಮಗಳಿಗೆ ತಿದ್ದುಪಡಿಗಳನ್ನು ತಂದಿದೆ. ಸಾರ್ವಜನಿಕರಿಗೆ ಈ ಹಿಂದೆ ಸಿಗುತ್ತಿದ್ದ ಚುನಾವಣೆ ಕುರಿತ ಕೆಲವು ದಾಖಲೆ, ಕಡತಗಳನ್ನು ಪರಿಶೀಲನೆ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಇದನ್ನು ವಿರೋಧಿಸಿರುವ ಪ್ರತಿಪಕ್ಷ ಕಾಂಗ್ರೆಸ್ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟವನ್ನು ಆರಂಭಿಸಿದೆ.
ಕೇಂದ್ರದ ಎನ್‌ಡಿಎ ಸರ್ಕಾರ 1961ರ ಚುನಾವಣಾ ನಿಯಮದ 93 (2) (ಎ) ನಿಯಮಗಳಿಗೆ ಕೆಲವು ತಿದ್ದುಪಡಿ ತಂದಿದೆ. ಆದ್ದರಿಂದ ಚುನಾವಣೆ ಸಂಬಂಧಿತ ಎಲ್ಲಾ ದಾಖಲೆಗಳು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿಲ್ಲ. ಕೆಲವು ದಾಖಲೆಗಳನ್ನು ಮಾತ್ರ ಪಡೆಯಬಹುದಾಗಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, '1961ರ ಚುನಾವಣಾ ನಿಯಮದ ತಿದ್ದುಪಡಿ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ' ಎಂದು ಹೇಳಿದ್ದಾರೆ.
ಡಿಸೆಂಬರ್ 21ರಂದು ಕೇಂದ್ರ ಸರ್ಕಾರ 1961ರ ಚುನಾವಣಾ ನಿಯಮದ 93 (2) (ಎ) ನಿಯಮಗಳಿಗೆ ತಿದ್ದುಪಡಿ ತಂದಿತ್ತು. ಇದರ ಅನ್ವಯ ಚುನಾವಣೆ ಕುರಿತ ಕೆಲವು ದಾಖಲೆ, ಕಡತಗಳನ್ನು ಪರಿಶೀಲನೆ ಮಾಡದಂತೆ ನಿರ್ಬಂಧ ಹೇರಲಾಗಿತ್ತು. ಆಗಲೇ ಕಾಂಗ್ರೆಸ್ ಪಕ್ಷ ಈ ಕುರಿತು ಕಾನೂನು ಹೋರಾಟ ನಡೆಸುತ್ತೇವೆ ಎಂದು ಘೋಷಣೆ ಮಾಡಿತ್ತು.
ಜೈರಾಮ್ ರಮೇಶ್ ಹೇಳಿದ್ದೇನು?: ಚುನಾವಣಾ ನಿಯಮದ ತಿದ್ದುಪಡಿಗೆ ಜೈರಾಮ್ ರಮೇಶ್ ವಿರೋಧ ವ್ಯಕ್ತಪಡಿಸಿದ್ದು, "ಚುನಾವಣಾ ಆಯೋಗ ಸಂವಿಧಾನಿಕ ಸಂಸ್ಥೆಯಾಗಿದೆ. ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ಹೊಣೆಗಾರರಾಗಿದ್ದು, ಸಾರ್ವಜನಿಕ ಸಲಹೆ ಇಲ್ಲದೆ, ಏಕಪಕ್ಷೀಯವಾಗಿ ಇಂತಹ ಪ್ರಮುಖ ಕಾನೂನನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗದು" ಎಂದು ಹೇಳಿದ್ದಾರೆ.
ತಿದ್ದುಪಡಿ ನಿಯಮಗಳ ಪ್ರಕಾರ ಅಭ್ಯರ್ಥಿ ನಾಮಪತ್ರ, ಚುನಾವಣಾ ಏಜೆಂಟ್‌ಗಳ ನೇಮಕ, ಫಲಿತಾಂಶ ಮತ್ತು ಚುನಾವಣಾ ಖರ್ಚಿನ ವಿವರ ಮುಂತಾದ ಮಾಹಿತಿಯನ್ನು ಜನರು ಪರಿಶೀಲಿಸಬಹುದು. ಆದರೆ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳು, ವೆಬ್ ಕಾಸ್ಟಿಂಗ್ ದೃಶ್ಯಾವಳಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಅಭ್ಯರ್ಥಿಗಳ ವಿಡಿಯೋ ರೆಕಾರ್ಡ್ ಸೇರಿ ಇನ್ನೂ ಹಲವು ದಾಖಲೆಗಳ ಪರಿಶೀಲಿಸುವಂತಿಲ್ಲ.
ಜೈರಾಮ್ ರಮೇಶ್ ಮಾತನಾಡಿ, "ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸುವ ಅಗತ್ಯವಿದೆ. ಅದಕ್ಕಾಗಿ ಹಲವು ಮಾಹಿತಿ ಸಾರ್ವಜನಿಕರಿಗೆ ಲಭ್ಯವಿರಬೇಕು. ತಿದ್ದುಪಡಿಯ ಮೂಲಕ ಜನರನ್ನು ಇವುಗಳಿಂದ ದೂರವಿಡಲಾಗುತ್ತಿದೆ. ತಿದ್ದುಪಡಿಯನ್ನು ತಡೆಯಲು ಸುಪ್ರೀಂಕೋರ್ಟ್ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ" ಎಂದು ಹೇಳಿದ್ದಾರೆ.
ಈ ತಿದ್ದುಪಡಿಗಳನ್ನು ತರುವ ಮೊದಲು 1961ರ ಚುನಾವಣಾ ನಿಯಮದ 93 (2) (ಎ) ಅನ್ವಯ ಚುನಾವಣೆ ಸಂಬಂಧಿತ ಎಲ್ಲಾ ದಾಖಲೆಗಳು ಸಾರ್ವಜನಿಕರಿಗೆ ಮುಕ್ತವಾಗಿತ್ತು. ಆದರೆ ಈಗ ಕೆಲವು ಉಲ್ಲೇಖಿತ ದಾಖಲೆಗಳು ಮಾತ್ರ ಲಭ್ಯವಿದೆ. ಆದ್ದರಿಂದ ಈ ತಿದ್ದುಪಡಿಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ.












Click it and Unblock the Notifications