ಹೋಮ್ ಗಾರ್ಡ್ ನೇಮಕಾತಿಯಲ್ಲಿ ಬರಿಗಾಲಿನಲ್ಲಿ ಸೀರೆಯುಟ್ಟು 1600 ಮೀಟರ್ ಓಡಿದ ಬಡ ಮಹಿಳೆ, Video Viral
ಸಾಧಿಸುವ ಛಲ ಮತ್ತು ಗುರಿ ತಲುಪುವ ಹಂಬಲವಿದ್ದರೆ, ಬಡತನ ಅಥವಾ ಯಾವುದೇ ಕಷ್ಟಗಳು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಜಾರ್ಖಂಡ್‌ನ ರಾಮ್‌ಗಢ್‌ನ ಮಹಿಳೆಯೊಬ್ಬರು ಸಾಬೀತುಪಡಿಸಿದ್ದಾರೆ. ಜಾರ್ಖಂಡ್‌ನ ರಾಮ್‌ಗಢ್‌ನಲ್ಲಿ ನಡೆಯುತ್ತಿರುವ ಹೋಮ್ ಗಾರ್ಡ್ ನೇಮಕಾತಿಯಓಟದ ಸ್ಪರ್ಧೆಯಲ್ಲಿ ಬಡ ಕುಟುಂಬದ ಈ ಮಹಿಳೆ ಮಾಡಿರುವ ಸಾಧನೆ ಅನೇಕರಿಗೆ ಸ್ಪೂರ್ತಿ.
ಕಾಲಿಗೆ ಹಾಕಲು ಕನಿಷ್ಠ ಚಪ್ಪಲಿ-ಶೂಗಳಿಲ್ಲ, ಧರಿಸಲು ಸ್ಪೋರ್ಟ್ಸ್ ಉಡುಪು ಅಥವಾ ಟ್ರ್ಯಾಕ್ ಪ್ಯಾಂಟ್ ಇಲ್ಲದಿದ್ದರೂ, ಪ್ರತಿದಿನ ಧರಿಸುವ ಸೀರೆಯುಟ್ಟುಕೊಂಡೇ ಬರಿಗಾಲಿನಲ್ಲಿ ಓಡಿ ಈಕೆ ತನ್ನ ಕನಸನ್ನು ನನಸು ಮಾಡಲು ಮುಂದಾಗಿದ್ದಾಳೆ. ಈಕೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸೀರೆಯಲ್ಲಿ ಓಡಿದ ಮಹಿಳೆ:
ಸುಡುವ ಬಿಸಿಲಿನ ಬೇಗೆಯನ್ನ ಲೆಕ್ಕಿಸದೆ, ಕಾಲಿಗೆ ಚಪ್ಪಲಿಯಾಗಲೀ ಅಥವಾ ಓಡಲು ಬೇಕಾದ ಯಾವುದೇ ಸೂಕ್ತ ಉಡುಪಾಗಲೀ ಇಲ್ಲದ ಆರ್ಥಿಕವಾಗಿ ಹಿಂದುಳಿದ ಈ ಮಹಿಳೆ ಮೈದಾನಕ್ಕಿಳಿದಿದ್ದರು. ಕೇವಲ ಸೀರೆಯನ್ನ ಉಟ್ಟುಕೊಂಡು, ಓಡಲು ಅಡ್ಡಿಯಾಗಬಾರದೆಂದು ಆ ಸೀರೆಯನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು 1600 ಮೀಟರ್ ಗುರಿಯನ್ನ ತಲುಪಲು ಆಕೆ ಓಡಿದ ಪರಿ ನೋಡಿದವರ ಕಣ್ಣಲ್ಲಿ ನೀರು ತರಿಸುವಂತಿತ್ತು.
ಇದು ಆಕೆಗೆ ಕೇವಲ ಒಂದು ಉದ್ಯೋಗ ಪಡೆಯುವ ಓಟವಾಗಿರಲಿಲ್ಲ, ಬದಲಾಗಿ ತನ್ನ ಇಡೀ ಕುಟುಂಬದ ಭವಿಷ್ಯವನ್ನ ಮುನ್ನಡೆಸಲು ಮತ್ತು ತನ್ನ ಕನಸುಗಳನ್ನ ಬೆನ್ನಟ್ಟುವ ಜೀವನದ ಓಟವಾಗಿತ್ತು. ಈಕೆಯ ದೃಢಸಂಕಲ್ಪದ ಮತ್ತು ಆತ್ಮವಿಶ್ವಾಸದ ಮುಂದೆ ಆಕೆಯ ಎಲ್ಲ ಆರ್ಥಿಕ ಸಂಕಷ್ಟಗಳು ಮಂಕಾಗಿ ಹೋಗಿದ್ದವು. ದುಬಾರಿ ಬೆಲೆಯ ಶೂಗಳು ಅಥವಾ ಆಧುನಿಕ ಸೌಲಭ್ಯಗಳಿಲ್ಲದಿದ್ದರೂ, ಎದೆಯಲ್ಲಿ ಉಕ್ಕಿನಂಥ ಇಚ್ಛಾಶಕ್ತಿ ಮತ್ತು ದಣಿವರಿಯದ ನಿರಂತರ ಪ್ರಯತ್ನವಿದ್ದರೆ ಯಶಸ್ಸು ಖಂಡಿತ ಒಲಿಯುತ್ತದೆ ಎಂಬುದನ್ನ ಈ ಸೀರೆಯಲ್ಲಿ ಓಡಿದ ಮಹಿಳೆ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾಳೆ.
ರಾಮ್‌ಗಢ್ ಹೋಮ್ ಗಾರ್ಡ್ ನೇಮಕಾತಿ: ಮಹಿಳೆಯರಿಗೆ ಒಲಿದ ಅವಕಾಶ
ರಾಮ್‌ಗಢ್ ಜಿಲ್ಲೆಯಲ್ಲಿ ಒಟ್ಟು 284 ಹೋಮ್ ಗಾರ್ಡ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಅಭ್ಯರ್ಥಿಗಳ ಸಾಮರ್ಥ್ಯ ಪರೀಕ್ಷಿಸಲು ದೈಹಿಕ ಪರೀಕ್ಷೆಗಳನ್ನ ಆಯೋಜಿಸಲಾಗಿತ್ತು. ವಿಶೇಷವೆಂದರೆ, ಈ ಬಾರಿಯ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಇದರ ಜೊತೆಗೆ ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಯರಿಗೆ ಆಸರೆಯಾಗುವ ನಿಟ್ಟಿನಲ್ಲಿ ಶೇಕಡಾ 5ರಷ್ಟು ಪ್ರತ್ಯೇಕ ಮೀಸಲಾತಿಯನ್ನ ಒದಗಿಸಲಾಗಿದೆ.
रामगढ़ जिला में होमगार्ड की बहाली की 1600 मीटर दौड़ का ट्राइल हो रहा था। उसमें इस महिला ने न सिर्फ लोगों को प्रेरित किया बल्की हार न मानने का संदेश भी दिया।आपकी संकल्प, आपकी संघर्ष को सलाम शुभकामनायें आपकी संघर्ष सफल हो। https://t.co/x1ebWid3Bl
— Tiger jairam mahto - inquilabi (@JairamTiger) October 6, 2026
ಮಹಿಳೆಯರಿಗೆ 1600 ಮೀಟರ್ ಓಟವನ್ನ ಯಶಸ್ವಿಯಾಗಿ ಪೂರ್ಣಗೊಳಿಸಲು 10 ನಿಮಿಷಗಳ ಕಾಲಾವಕಾಶ ನೀಡಲಾಗಿದ್ದು, 8 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದರೆ ಅವರನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಈ ಕಠಿಣ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಹಲವಾರು ಮಹಿಳೆಯರು ಟ್ರ್ಯಾಕ್ ಸೂಟ್ ಇಲ್ಲದೆ ಕೇವಲ ಸೀರೆಯುಟ್ಟು ಓಡಿ ಆಯ್ಕೆಯಾಗಿರುವುದು ಆಯೋಜಕರಿಗೂ ಅಚ್ಚರಿ ಮೂಡಿಸಿದೆ.
ಬಡ ಹೆಣ್ಣುಮಕ್ಕಳಿಗೆ ಭರವಸೆ ಮೂಡಿಸಿದ ಕಥೆ
ಇದು ಕೇವಲ ಜಾರ್ಖಂಡ್‌ನ ಒಬ್ಬ ಬಡ ಕುಟುಂಬದ ಮಗಳ ಕಥೆಯಲ್ಲ, ಬದಲಾಗಿ ಬಡವರು ಸಮಾಜದಲ್ಲಿ ದೊಡ್ಡ ಕನಸುಗಳನ್ನ ಕಾಣುವ ಮತ್ತು ಅದನ್ನ ನನಸು ಮಾಡಲು ಹಗಲಿರುಳು ಹೋರಾಡುವ ಲಕ್ಷಾಂತರ ಹೆಣ್ಣುಮಕ್ಕಳಿಗೆ ಇದೊಂದು ಭರವಸೆಯ ಬೆಳಕಾಗಿದೆ. ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ, ಬರಿಗಾಲಲ್ಲಿ ಸೀರೆಯುಟ್ಟು ಮೈದಾನದಲ್ಲಿ ಓಡಿದ ಈಕೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ಈಕೆಯ ಜವಾಬ್ದಾರಿ, ಮತ್ತು ಛಲಕ್ಕೆ ಸಲಾಂ ಹೇಳುತ್ತಿದ್ದಾರೆ.


Click it and Unblock the Notifications
