Ram Mandir: ರಾಮಮಂದಿರ ಪೂರ್ಣಕ್ಕೆ ಇನ್ನೂ ಎಷ್ಟು ವರ್ಷ ಬೇಕು? ಇಲ್ಲಿದೆ ಉತ್ತರ
ಅಯೋಧ್ಯೆ ಮಾರ್ಚ್ 4: ಅಯೋಧ್ಯೆಯಲ್ಲಿರುವ ರಾಮ ಮಂದಿರ ಈಗಾಗಲೇ ಉದ್ಘಾಟನೆಯಾಗಿದ್ದು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಆದರೆ ರಾಮ ಮಂದಿರದಲ್ಲಿ ಇನ್ನೂ ಕೆಲ ಪ್ರಮುಖ ಕೆಲಸಗಳು ಬಾಕಿ ಇದ್ದು ಇದರಿಂದ ಭಕ್ತರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹೀಗಾಗಿ ಈ ಎಲ್ಲಾ ಕಾಮಗಾರಿಗಳು ಯಾವಾಗ ಪೂರ್ಣಗೊಳ್ಳಲಿವೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಉತ್ತರ ಭಾರತದಲ್ಲಿ ಬಿಸಿಲಿನ ಝಳ ನಿಧಾನವಾಗಿ ಏರಿಕೆಯಾಗುತ್ತಿದೆ. ಶ್ರೀರಾಮನ ದರ್ಶನಕ್ಕೆ ಅಯೋಧ್ಯಗೆ ನಿತ್ಯ ಆಗಮಿಸುವ ಲಕ್ಷಾಂತರ ಮಂದಿಗೆ ವಸತಿ, ಲಾಕರ್, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿವೆ. ಆದರೆ ಕೆಲ ಕೆಲಸಗಳು ಪೂರ್ಣಗೊಳ್ಳಲು ಕೆಲ ವರ್ಷಗಳು ಬೇಕಾಗುತ್ತವೆ ಎಂದು ಶ್ರೀರಾಮ ಮಂದಿರ ನಿರ್ಮಾಣ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಿಶ್ವಹಿಂದು ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿರುವ ಗೋಪಾಲ್ ನಾಗರಕಟ್ಟೆ ಹೇಳಿದ್ದಾರೆ.

ಹೌದು... ಅಯೋಧ್ಯೆ ಶ್ರೀರಾಮ ಮಂದಿರ ಪೂರ್ತಿಗೊಳ್ಳಲು ಇನ್ನೂ ಎರಡು ವರ್ಷ ಬೇಕು. ಮಂದಿರ ನಿರ್ಮಾಣದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಇದೇ ವೇಳೆ ಮಂದಿರಕ್ಕೆ ಆಗಮಿಸುವವರಿಗೆ ಮೂಲಸೌಕರ್ಯ ಕಲ್ಪಿಸುವತ್ತಲೂ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗಮನ ಹರಿಸುತ್ತಿದೆ. ಸದ್ಯ ಅಯೋಧ್ಯೆಯಲ್ಲಿ ನಿತ್ಯ ಒಂದು ಲಕ್ಷ ಮಂದಿಗೆ ಸರತಿಯಲ್ಲಿ ಶ್ರೀರಾಮನ ದರ್ಶನಕ್ಕೆ ವ್ಯವಸ್ಥೆ ಇದೆ. ಇನ್ನೂ ಎರಡು ತಿಂಗಳಲ್ಲಿ ಇಲ್ಲಿ ಅಸಾಧ್ಯ ಬಿಸಿಲು. ಹಾಗಾಗಿ ತಲೆಗೂ ಬಿಸಿ ತಾಗಬಾರದು ಆ ರೀತಿ ಶ್ರೀರಾಮನ ದರ್ಶನಕ್ಕೆ ಆಗಮಿಸುವ ಹಾದಿಯಲ್ಲಿ ಶೆಲ್ಟರ್, ಕುಡಿಯುವ ನೀರು, ಶೌಚಾಲಯ, ಕೂರುವ ವ್ಯವಸ್ಥೆಯನ್ನು ಸಮರೋಪಾದಿಯಲ್ಲಿ ಮಾಡಲಾಗುತ್ತಿದೆ.
40 ಎಕರೆ ಜಾಗ ಅಭಿವೃದ್ಧಿ:
ಬಾಲರಾಮನ ದರ್ಶನಕ್ಕೆ ಬರುವವರ ಸಂಖ್ಯೆ ಆರಂಭದ ದಿನಗಳಲ್ಲಿ ಮೂರು ಲಕ್ಷವರೆಗೆ ತಲಪಿದ್ದೂ ಇದೆ. ಈಗ ಸರಾಸರಿ ದಿನಕ್ಕೆ 1 ರಿಂದ 1.50 ಲಕ್ಷ ಮಂದಿ ಬರುತ್ತಿದ್ದಾರೆ. ಇವರೆಲ್ಲರಿಗೆ ಸದ್ಯ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 15 ಸಾವಿರ ಯಾತ್ರಿಕರಿಗೆ ತೀರ್ಥಕ್ಷೇತ್ರ ಪುರಂ, ಕರಸೇವಕಪುರಂಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ.

ಇಲ್ಲೇ ಪ್ರಾಥಮಿಕ ಚಿಕಿತ್ಸಾಲಯ ತೆರೆಯಲಾಗಿದೆ. ಹೆಚ್ಚಿನ ಯಾತ್ರಿಗಳಿಗೆ ವಸತಿ ಅವಕಾಶ ಕಲ್ಪಿಸುವ ದಿಸೆಯಲ್ಲಿ ಅಯೋಧ್ಯಾ ಧಾಮ್ ರೈಲು ನಿಲ್ದಾಣ ಹಿಂಭಾಗ ತೀರ್ಥಕ್ಷೇತ್ರ ಪುರಂನಲ್ಲಿ ಟ್ರಸ್ಟ್‌ನ 40 ಎಕರೆ ಜಾಗ ಇದೆ. ಅದನ್ನು ಅಭಿವೃದ್ಧಿಗೊಳಿಸುವ ಚಿಂತನೆ ಇದೆ ಎಂದರು.
ಒಂದು ಲಕ್ಷ ಮಂದಿಗೆ ಲಾಕರ್ ವ್ಯವಸ್ಥೆ:
ಪ್ರಸಕ್ತ ಸುಮಾರು ಒಂದು ಲಕ್ಷ ಜನತೆಗೆ ಚಪ್ಪಲಿ, ಲಗೇಜು, ಮೊಬೈಲ್ ಇಡುವ ಲಾಕರ್ ವ್ಯವಸ್ಥೆ ಇದೆ. ಅದನ್ನು ಇನ್ನೂ ಒಂದು ಲಕ್ಷಕ್ಕೆ ವಿಸ್ತರಿಸಲಾಗುತ್ತಿದೆ. ಸುಗ್ರಿಲ್ ಕಿಲಾ, ರಾಮ ಬುಲೇಲಾಗಳಲ್ಲಿ ಲಾಕರ್ ವ್ಯವಸ್ಥೆ ಇದೆ. ಹೊಸದಾಗಿ ನಿರ್ಮಿಸಿರುವ ಪಬ್ಲಿಕ್ ಫೆಸಿಲಿಟಿ ಸೆಂಟರ್ (ಪಿಎಫ್‌ಸಿ)ನಲ್ಲಿ ಆರು ಸಾವಿರ ಲಾಕರ್ ವ್ಯವಸ್ಥೆ ಮಾಡಲಾಗಿದೆ.
30 ಬೆಡ್‌ನ ಆಸ್ಪತ್ರೆ ಇದೆ. ಸುಗ್ರಿಲ್ ಕಿಲಾದಲ್ಲಿ ಕುಡಿವ ನೀರು, ಶೌಚಾಲಯ, ಬ್ಯಾಗ್ ರ್ಯಾಕ್ ಸಿದ್ದವಾಗಲಿದೆ. ಮುಂದೆ ರಾತ್ರಿ ವಸತಿ ವ್ಯವಸ್ಥೆ, ಭೋಜನಾಯಲವೂ ರೂಪಗೊಳ್ಳಲಿದೆ ಎನ್ನುತ್ತಾರೆ ಲಾಕರ್‌ಗಳ ಉಸ್ತುವಾರಿ ಹೊಂದಿರುವ ಪುತ್ತೂರಿನ ಅಶೋಕ್ ಅವರು.












Click it and Unblock the Notifications