ಸೆಪ್ಟೆಂಬರ್ ತಿಂಗಳಿನಲ್ಲಿ ರಾಮಮಂದಿರ ಪ್ರಕರಣದ ತೀರ್ಪು!
ನವದೆಹಲಿ, ಜುಲೈ 21: ವಿವಾದಿತ ಸ್ಥಳದಲ್ಲಿ ಮುಸ್ಲಿಮರು ನಮಾಜು ಮಾಡುವ ಕುರಿತಂತೆ 1994ರ ಆದೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಿಂದ ಸೆಪ್ಟೆಂಬರ್ ನಲ್ಲಿ ತೀರ್ಪು ಹೊರ ಬೀಳುವ ಸಾಧ್ಯತೆಯಿದೆ.
1994ರ ಆದೇಶದಂತೆ, ಇಸ್ಲಾಂ ಪ್ರಕಾರ ಮಸೀದಿಯ ಮಹತ್ವ ಹಾಗೂ ನಮಾಜ್ ಮಾಡಲು ಅದೇ ಜಾಗ ಆಗಬೇಕೆಂದೇನಿಲ್ಲ, ಬಯಲು ಪ್ರದೇಶವೊಂದರಲ್ಲೂ ಪ್ರಾರ್ಥನೆ ಸಲ್ಲಿಸಬಹುದು ಎನ್ನಲಾಗಿತ್ತು.
ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಹಿರಿಯ ವಕೀಲ ರಾಜೀವ್ ಧವನ್ ಅವರು 1994ರ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿದ್ದರಿಂದ ಪೂರ್ವಭಾವಿ ವಿವಾದದ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ರಾಜೀವ್ ಅವರು ಹಿಂದೂ ತಾಲೀಬಾನ್ ಗಳು ಬಾಬ್ರಿ ಮಸೀದಿ ಧ್ವಂಸ ಮಾಡಿದರು ಎಂದು ಉಲ್ಲೇಖಿಸಿರುವುದಕ್ಕೆ ಹಿಂದೂಗಳ ಪರ ವಕೀಲ ಸಿಎಸ್ ವೈದ್ಯನಾಥನ್ ಅವರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು.
ಶಿಯಾ ಮುಸ್ಲಿಂ ಸಂಘಟನೆಯೊಂದು ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಲು ನಮ್ಮ ಅಭ್ಯಂತರವೇನು ಇಲ್ಲ ಎಂದು ಕೋರ್ಟಿಗೆ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.
ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಮ ಮಂದಿರ ನಿರ್ಮಾಣವು ಬಿಜೆಪಿಗೆ ಮಹತ್ವದ ವಿಷಯವಾಗಿದೆ. ಜಸ್ಟೀಸ್ ದೀಪಕ್ ಮಿಶ್ರಾ ಅವರು ನಿವೃತ್ತಿ ಹೊಂದುವುದಕ್ಕೂ ಮೊದಲು ಆಧಾರ್ ನ ಸಾಂವಿಧಾನಿಕ ಮಾನ್ಯತೆ, ಶಬರಿಮಲೆಗೆ ಮಹಿಳೆಯರ ಪ್ರವೇಶ, ರಾಮಮಂದಿರ ಪ್ರಕರಣ ಸೇರಿದಂತೆ ಪ್ರಮುಖ ಕೇಸುಗಳ ಆದೇಶ ನೀಡಲಿದ್ದಾರೆ.












Click it and Unblock the Notifications