ಚೀನಾ ಗಡಿ ತಂಟೆ: ಶುಕ್ರವಾರ ಸರ್ವ ಪಕ್ಷಗಳ ಸಭೆ ಕರೆದ ಕೇಂದ್ರ
ಚೀನಾ ಗಡಿ ವಿವಾದ, ಕಾಶ್ಮೀರ ಗಲಭೆ ವಿಚಾರಗಳನ್ನು ಚರ್ಚಿಸಲು ಕೇಂದ್ರ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದಿದೆ. ಶುಕ್ರವಾರ ಬೆಳಗ್ಗೆ ಈ ಸಭೆ ನವದೆಹಲಿಯಲ್ಲಿ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ನವದೆಹಲಿ, ಜುಲೈ 13: ಸಿಕ್ಕಿಂ ಗಡಿ ವಿಚಾರದಲ್ಲಿ ಹಾಗೂ ಕಾಶ್ಮೀರ ಗಲಭೆ ಕುರಿತಂತೆ ಕೇಂದ್ರ ಸರ್ಕಾರವು ಕೈಗೊಳ್ಳಬೇಕಿರುವ ನಿಲುವುಗಳ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಶುಕ್ರವಾರ ಸರ್ವಪಕ್ಷಗಳ ಸಭೆ ಕರೆಯಲಾಗಿದೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ಮರಾಜ್ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ಸೋಮವಾರದಿಂದ (ಜುಲೈ 17) ಸಂಸತ್ ಅಧಿವೇಶನ ಶುರುವಾಗಲಿದೆ. ಅಧಿವೇಶದಲ್ಲಿ ಚೀನಾ ಹಾಗೂ ಭಾರತ ನಡುವಿನ ಯುದ್ಧದ ಸನ್ನಿವೇಶ ಹಾಗೂ ಕಾಶ್ಮೀರ ಕಣಿವೆಯಲ್ಲಿ ಕೊನೆಯಿಲ್ಲದೆ ನಡೆಯುತ್ತಿರುವ ಹಿಂಸಾಚಾರಗಳನ್ನು ಹತ್ತಿಕ್ಕುವಲ್ಲಿ ಸರ್ಕಾರ ವಿಫಲವಾಗಿರುವ ಕುರಿತಾಗಿ ಚರ್ಚೆಗಳು ನಡೆಯುವ ಸಾಧ್ಯತೆಗಳಿವೆ.
ಅದರಲ್ಲೂ ಇತ್ತೀಚೆಗೆ ಅಮರನಾಥ್ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿ 7 ಯಾತ್ರಿಕರ ಸಾವಿಗೆ ಕಾರಣವಾಗಿದ್ದರು. ಈ ವಿಚಾರವನ್ನೇ ವಿಪಕ್ಷಗಳು ಅಸ್ತ್ರವನ್ನಾಗಿ ಉಪಯೋಗಿಸಲು ನಿರ್ಧರಿಸಿವೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ, ವಿಪಕ್ಷಗಳ ಮುಖಂಡರೊಂದಿಗೆ ಸಮಾಲೋಚನೆ ಸಭೆಯನ್ನು ನಡೆಸಿ ಒಂದು ನಿರ್ಧಾರಕ್ಕೆ ಬಂದರೆ, ಸದನದಲ್ಲಿ ಎದುರಾಗುವ ಭಾರೀ ವಿರೋಧವನ್ನು ಅಲ್ಪಮಟ್ಟಿಗಾದರೂ ತಗ್ಗಿಸುವ ಇರಾದೆಯೂ ಕೇಂದ್ರಕ್ಕಿದೆ ಎಂದು ಹೇಳಲಾಗಿದೆ.












Click it and Unblock the Notifications