Rajeev Chandrasekhar: '18 ವರ್ಷಗಳ ಸುದೀರ್ಘ ಸಾರ್ವಜನಿಕ ಸೇವೆ ಅಂತ್ಯ' ರಾಜೀವ್ ಚಂದ್ರಶೇಖರ್ ಭಾವುಕ ಪೋಸ್ಟ್
ತಿರುವನಂತಪುರಂ, ಜೂನ್. 10: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ದಿನವೇ, ಬರೋಬ್ಬರಿ 18 ವರ್ಷಗಳ ಸುದೀರ್ಘ ಸಾರ್ವಜನಿಕ ಸೇವೆ ಅಂತ್ಯಗೊಂಡಿದೆ ಎಂದು ಕೇಂದ್ರದ ಮಾಜಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಭಾನುವಾರ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಳೆದ ನರೇಂದ್ರ ಮೋದಿ ಸರ್ಕಾರದಲ್ಲಿ ರಾಜೀವ್ ಚಂದ್ರಶೇಖರ್ ಅವರು ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಜಲಶಕ್ತಿ ರಾಜ್ಯ ಸಚಿವರಾಗಿದ್ದರು. 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಸೋಲು ಕಂಡಿದ್ದಾರೆ. ಇದಾದ ಬಳಿಕ ತಮ್ಮ ರಾಜಕೀಯ ಜೀವನದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಅವರು, ಚುನಾವಣೆಯಲ್ಲಿ ಸೋತ ಅಭ್ಯರ್ಥಿಯಾಗಿ ತಮ್ಮ 18 ವರ್ಷಗಳ ಸಾರ್ವಜನಿಕ ಸೇವೆಯನ್ನು ಕೊನೆಗೊಳಿಸುವ ಉದ್ದೇಶವನ್ನು ಎಂದಿಗೂ ಹೊಂದಿಲ್ಲ. ಆದರೆ, ಅದು ಹಾಗೆಯೇ ನಡೆದಿದೆ ಎಂದು ಹೇಳಿದ್ದಾರೆ. ಜೊತೆಗೆ ಪ್ರಧಾನಿ ಮೋದಿಯವರೊಂದಿಗೆ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸುವ ಭಾಗ್ಯ ನನಗಿದೆ ಎಂದೂ ಸೇರಿಸಿದ್ದಾರೆ.
"ಸಾರ್ವಜನಿಕ ಸೇವೆಯಲ್ಲಿ ನನ್ನ 18 ವರ್ಷಗಳ ಸೇವೆಗೆ ಇಂದು ತೆರೆ ಬಿದ್ದಿದೆ, ಅದರಲ್ಲಿ ಮೂರು ವರ್ಷಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಟೀಂ ಮೋದಿ2.0 ನೊಂದಿಗೆ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿತು" ಎಂದು ಹೇಳಿದ್ದಾರೆ.

"ಚುನಾವಣೆಯಲ್ಲಿ ಸೋತ ಅಭ್ಯರ್ಥಿಯಾಗಿ ನನ್ನ 18 ವರ್ಷಗಳ ಸಾರ್ವಜನಿಕ ಸೇವೆಯನ್ನು ಕೊನೆಗೊಳಿಸಲು ನಾನು ಖಂಡಿತವಾಗಿಯೂ ಉದ್ದೇಶಿಸಿರಲಿಲ್ಲ, ಆದರೆ ಅದು ಹಾಗೆಯೇ ನಡೆಯುತ್ತಿದೆ" ಎಂದು ರಾಜೀವ್ ಚಂದ್ರಶೇಖರ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಜೊತೆಗೆ ಇಷ್ಟು ದಿನ ತಮ್ಮನ್ನು ಬೆಂಬಲಿಸಿದವರಿಗೆ, ವಿಶೇಷವಾಗಿ ಕಾರ್ಯಕರ್ತರು ಮತ್ತು ನಾಯಕರಿಗೆ ಧನ್ಯವಾದ ಹೇಳಿದ್ದಾರೆ.
"ಕಳೆದ ಮೂರು ವರ್ಷಗಳಿಂದ ಸರ್ಕಾರದಲ್ಲಿರುವ ನನ್ನ ಸಹೋದ್ಯೋಗಿಗಳಿಗೂ ಧನ್ಯವಾದಗಳು. ಬಿಜೆಪಿ ಕಾರ್ಯಕರ್ತನಾಗಿ, ನಾನು ಪಕ್ಷಕ್ಕೆ ಬೆಂಬಲ ಮತ್ತು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ" ಎಂದು ಕೇಂದ್ರದ ಮಾಜಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.












Click it and Unblock the Notifications