ಸುಖದೇವ್ ಸಿಂಗ್ ಹತ್ಯೆ: ಇಂದು ರಾಜಸ್ಥಾನ ಬಂದ್, ಕೊಂದದ್ದು ನಮ್ಮವರೇ ಎಂದ ಗ್ಯಾಂಗ್!
ಪ್ರಮುಖ ರಜಪೂತ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಜೈಪುರದ ಮನೆಯಲ್ಲಿ ಗುಂಡಿಕ್ಕಿ ಕೊಂದ ನಂತರ ಅವರ ಬೆಂಬಲಿಗರು ಇಂದು ರಾಜಸ್ಥಾನ ಬಂದ್‌ಗೆ ಕರೆ ನೀಡಿದ್ದಾರೆ.
ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಫ್ರಿಂಜ್ ಪಡೆಯ ನಾಯಕತ್ವ ವಹಿಸಿದ್ದ ಗೊಗಮೇಡಿ ಅವರನ್ನು ಅವರ ಮನೆಯಲ್ಲಿ ಹತ್ಯೆ ಮಾಡಲಾಗಿದೆ. ಪರಿಚಿತರಂತೆ ಮನೆಗೆ ಬಂದು ಚಹಾ ಸೇವಿಸಿದ ಬಳಿಕ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ, ಈ ದೃಶ್ಯಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ದರೋಡೆಕೋರ ರೋಹಿತ್ ಗೋಡಾರಾ ಫೇಸ್‌ಬುಕ್ ಪೋಸ್ಟ್‌ನಲ್ಲಿ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.
ಇಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು
ದಾಳಿಯಲ್ಲಿ ಸುಖದೇವ್ ಸಿಂಗ್ ಗೊಗಮೆಡಿ ಮತ್ತು ಅವರ ಇಬ್ಬರು ಸಹಚರರಿಗೆ ಗುಂಡಿನ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ಚಕಮಕಿಯಲ್ಲಿ ಗೊಗಮೆಡಿ ಅವರ ಸಹಾಯಕರು ದಾಳಿಕೋರರಲ್ಲಿ ಒಬ್ಬನನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಅನ್ನು ಸೋಲಿಸಿದ ನಂತರ ಆಡಳಿತ ಬದಲಾವಣೆಯ ಪ್ರಕ್ರಿಯೆಯಲ್ಲಿರುವ ರಾಜಸ್ಥಾನದಲ್ಲಿ ರಜಪೂತ ನಾಯಕನ ಹತ್ಯೆಯು ತೀವ್ರ ಸಂಚಲನ ಮೂಡಿಸಿದ್ದು, ಪ್ರತಿಭಟನೆಯ ಬೆಂಕಿ ಹೊತ್ತಿದೆ.
ಆರೋಪಿಗಳ ಬಂಧನಕ್ಕೆ ಆಗ್ರಹ
ಸುಖದೇವ್ ಸಿಂಗ್ ಬೆಂಬಲಿಗರು ಆಸ್ಪತ್ರೆಯ ಹೊರಭಾಗದಲ್ಲಿ ಶಿಪ್ರಾ ಪಥ ರಸ್ತೆ ತಡೆದು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಜೈಪುರ ಅಲ್ಲದೆ, ಚುರು, ಉದಯಪುರ, ಅಲ್ವಾರ್ ಮತ್ತು ಜೋಧ್‌ಪುರ ಜಿಲ್ಲೆಗಳಲ್ಲಿಯೂ ಪ್ರತಿಭಟನೆಗಳು ಭುಗಿಲೆದ್ದಿವೆ.
ರಾಜಸ್ಥಾನದಲ್ಲಿ ಉದ್ವಿಗ್ನ ವಾತಾವರಣವಿದೆ. ರಜಪೂತ ಸಮುದಾಯದ ಜನರು ಬೀದಿಗಿಳಿದು ಹಲವೆಡೆ ಟೈರ್ ಸುಟ್ಟರು. ರಜಪೂತ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಮಹಿಪಾಲ್ ಸಿಂಗ್ ಮಕ್ರಾನಾ ಸುಖದೇವ್ ಹಂತಕರನ್ನು ಎನ್‌ಕೌಂಟರ್ ಮಾಡುವಂತೆ ಒತ್ತಾಯಿಸಿದ್ದಾರೆ. ಗೊಗಾಮೆಡಿಯ ಹಂತಕರನ್ನು ನ್ಯಾಯಾಂಗಕ್ಕೆ ತರುವವರೆಗೆ, ಗೊಗಮೆಡಿಯ ದೇಹವನ್ನು ಸುಡುವುದಿಲ್ಲ ಅಥವಾ ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭವನ್ನು ನಡೆಸಲು ಬಿಡುವುದಿಲ್ಲ ಎಂದು ಮಕ್ರಾನಾ ಬೆದರಿಕೆ ಹಾಕಿದ್ದಾರೆ.
2015ರಲ್ಲಿ ಲೋಕೇಂದ್ರ ಸಿಂಗ್ ಕಲ್ವಿ ನೇತೃತ್ವದ ರಜಪೂತ ಕರ್ಣಿ ಸೇನೆಯಿಂದ ಬೇರ್ಪಟ್ಟ ನಂತರ ಗೊಗಮೇಡಿ ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯನ್ನು ರಚಿಸಿದ್ದರು. ರಜಪೂತ ಸಮುದಾಯದ ಬಗ್ಗೆ ಐತಿಹಾಸಿಕ ಸಂಗತಿಗಳನ್ನು ತಿರುಚಿದ ಆರೋಪದ ಮೇಲೆ ಎರಡೂ ಸಂಘಟನೆಗಳು 2018 ರ ಚಲನಚಿತ್ರ 'ಪದ್ಮಾವತ್' ವಿರುದ್ಧ ಪ್ರತಿಭಟನೆ ನಡೆಸಿದ್ದವು.












Click it and Unblock the Notifications