ರಾಜಸ್ಥಾನದಲ್ಲಿ ಬಿಜೆಪಿ ತೊರೆದ ಮಾಜಿ ಸಚಿವನಿಂದ ಹೊಸ ಪಕ್ಷ ಘೋಷಣೆ
ಜೈಪುರ, ಜೂನ್ 25: ಬಿಜೆಪಿಯ ವಸುಂಧರಾ ರಾಜೇ ಮುಖ್ಯಮಂತ್ರಿಯಾಗಿರುವ ರಾಜಸ್ಥಾನದಲ್ಲಿ ಈ ವರ್ಷದ ಅಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅಲ್ಲೀಗ ಬಿರುಸಿನ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.
ಹಾಲಿ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದ್ದು, ಈಗಾಗಲೇ ನಡೆದ ಉಪಚುನಾವಣೆಗಳಲ್ಲಿ ಈ ಅಂಶಗಳು ಸಾಬೀತಾಗಿವೆ. ಇದೀಗ ಬಿಜೆಪಿ ಮತ್ತು ರಾಜೇಗೆ ತಲೆನೋವು ತರಲು ಮತ್ತೊಂದು ಬೆಳವಣಿಗೆ ನಡೆದಿದೆ.
ಇಲ್ಲಿ ಬಿಜೆಪಿ ವಿರುದ್ಧ ಶಾಸಕ ಮತ್ತು ಮಾಜಿ ಸಚಿವ ಘನಶ್ಯಾಮ್ ತಿವಾರಿ ಬಂಡಾಯವೆದ್ದಿದ್ದರು. ಅವರೀಗ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ತಿವಾರಿ ಹಿರಿಯ ಬಿಜೆಪಿ ನಾಯಕರಾಗಿದ್ದು, ಹಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದರು.
ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಕಳೆದ ಬಾರಿ ಶೇಕಡಾ 60ಕ್ಕೂ ಹೆಚ್ಚು ಮತಗಳನ್ನು ಗಳಿಸಿ, 60,000 ಕ್ಕೂ ಅಧಿಕ ಮತಗಳ ಅಂತರದಿಂದ ತಿವಾರಿ ಗೆದ್ದಿದ್ದರು. ರಾಜಸ್ತಾನದಲ್ಲೇ ಅತೀ ಹೆಚ್ಚು ಅಂತರದಿಂದ ಗೆದ್ದಿದ್ದ ಶಾಸಕರು ಅವರಾಗಿದ್ದರು. ಐದು ಬಾರಿ ಶಾಸಕರಾಗಿರುವ ಅವರ ಬಂಡಾಯ ಬಿಜೆಪಿ ಪಕ್ಷಕ್ಕೆ ಮೊದಲೇ ಗೊತ್ತಿತ್ತು. ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಬಗ್ಗೆ ನಾಯಕರು ಚಿಂತಿಸಿದ್ದರು.
ಇದೀಗ ಪಕ್ಷಕ್ಕೆ ಗುಡ್ ಬೈ ಹೇಳಿ ಹೊಸ ಪಕ್ಷ ಸ್ಥಾಪಿಸುವ ಆಘಾತದ ಸುದ್ದಿಯನ್ನು ಪಕ್ಷದ ನಾಯಕರಿಗೆ ತಿವಾರಿ ನೀಡಿದ್ದಾರೆ.












Click it and Unblock the Notifications