Rain Alert: ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಸುರಿಯಲಿದೆ ಮಳೆ- ಯೆಲ್ಲೋ ಅಲರ್ಟ್ ಘೋಷಣೆ, ಮಾಹಿತಿ, ವಿವರ
ತಮಿಳುನಾಡು ಹಾಗೂ ಕೇರಳದಲ್ಲಿ ಅಕ್ಟೋಬರ್ 30ರ ಸೋಮವಾರ ಮಳೆ ಬೀಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಇದಲ್ಲದೆ, ಅಕ್ಟೋಬರ್ 31ರಂದು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಕೇರಳ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಮುಂದಿನ ಐದು ದಿನಗಳ ಕಾಲ ಅಂದರೆ ಶುಕ್ರವಾರದ ವರೆಗೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹಮಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.

ಕೇರಳ, ಕೊಂಕಣ ಗೋವಾ, ಮಧ್ಯ ಮಹಾರಾಷ್ಟ್ರ, ಕರಾವಳಿ ಮತ್ತು ದಕ್ಷಿಣ ಒಳ ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.
ಈ ಆರಂಭವಾಗಿರುವ ಈಶಾನ್ಯ ಮಾನ್ಸೂನ್ ದಕ್ಷಿಣ ಭಾರತದಲ್ಲಿ ಹೆಚ್ಚು ಮಳೆಯನ್ನು ತರಬಹುದು ಎಂದು ಹೇಳಲಾಗಿದೆ. ಇದರಿಂದಾಗಿ ತಮಿಳುನಾಡಿನ ಕೆಲವು ಭಾಗಗಳಲ್ಲಿ ಹವಾಮಾನವು ತೇವವಾಗಿದೆ.
ತಮಿಳುನಾಡು ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆಯು ಹೆಚ್ಚಾಗಿದೆ. ಇದು ರಾಜ್ಯದ ದಕ್ಷಿಣ ಭಾಗಗಳಲ್ಲಿ ಮಳೆಯನ್ನು ತರಿಸಲಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ಬಲವಾದ ಈಶಾನ್ಯ ಮಾರುತಗಳು ದಕ್ಷಿಣ ಪೆನಿನ್ಸುಲಾರ್ ಕಡೆಗೆ ಬೀಸುತ್ತಿವೆ ಎಂದು ಐಎಂಡಿ ಹೇಳಿಕೆ ನೀಡಿದೆ.

ಮುಂದಿನ ಎರಡು ದಿನಗಳ ಕಾಲ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್ ಅನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ತಮಿಳುನಾಡು ಮತ್ತು ಕೇರಳದ ಎಲ್ಲಾ ಜಿಲ್ಲೆಗಳಲ್ಲಿಯೂ ಎಚ್ಚರಿಕೆ ನೀಡಲಾಗಿದೆ.
ವಿಶೇಷವಾಗಿ ತಮಿಳುನಾಡಿನ ಶಿವಗಂಗಾ, ಥೇಣಿ, ದಿಂಡಿಗಲ್, ತೆಂಕಶಿ, ನೀಲಗಿರಿ, ಕೊಯಮತ್ತೂರು, ತಿರುನಲ್ವೇಲಿ, ವಿರುಧುನಗರ, ಮಧುರೈ, ತೂತುಕುಡಿ, ಕನ್ಯಾಕುಮಾರಿ, ರಾಮನಾಥಪುರಂ ಮತ್ತು ತಿರುಪುರ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಕೇರಳದ ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶ್ಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್ ಮತ್ತು ವಯನಾಡ್‌ನಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ.

ಕರಾವಳಿಯಲ್ಲಿ ಬಿರುಗಾಳಿ ಬೀಸುವ ಕಾರಣ, ಮೀನುಗಾರರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಸಮುದ್ರಕ್ಕೆ ಇಳಿಯುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಈ ತಿಂಗಳು ಬಿದ್ದ ಮಳೆಗೆ ಸಂಬಂಧಿಸಿದಂತೆ, ಕೇರಳದಲ್ಲಿ ಈ ವರೆಗೆ 283.4 ಮಿಮೀ ಮಳೆಯಾಗಿದೆ. ಶೇ 5 ರಷ್ಟು ಹೆಚ್ಚುವರಿ ಮಳೆ ದಾಖಲಿಸಿದೆ. ತಮಿಳುನಾಡಿನಲ್ಲಿ 81.3 ಮಿಮೀ ಮಳೆಯಾಗಿದೆ. ಶೇ 44 ರಷ್ಟು ಮಳೆ ಕೊರತೆಯಾಗಿದೆ. ಕರ್ನಾಟಕದಲ್ಲಿ ಕೇವಲ 42.5 ಮಿ.ಮೀ ಮಳೆಯಾಗಿದ್ದು, ಈ ಅವಧಿಯಲ್ಲಿ ಶೇ.64 ರಷ್ಟು ಕೊರತೆಯಾಗಿದೆ.












Click it and Unblock the Notifications