ಟಿಕೆಟ್ ಬುಕ್ಕಿಂಗ್ ವೇಳೆ ಎಂ-ಆಧಾರ್ ಗೆ ಮಾನ್ಯತೆ: ರೈಲ್ವೆ ಇಲಾಖೆ
ನವದೆಹಲಿ, ಸೆಪ್ಟೆಂಬರ್ 13: ರೈಲು ಟಿಕೆಟ್ ಗಳನ್ನು ಮುಂಗಡವಾಗಿ ಕಾಯ್ದಿರಿಸುವ ವೇಳೆ ಎಂ-ಆಧಾರ್ ಕಾರ್ಡ್ ಅನ್ನು ನಾಗರಿಕರ ಗುರುತಿನ ಪತ್ರವನ್ನಾಗಿ ಮಾನ್ಯತೆ ಮಾಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಟಿಕೆಟ್ ಮುಂಗಡ ಬುಕ್ಕಿಂಗ್ ವೇಳೆ, ತಮ್ಮ ಮೊಬೈಲ್ ನಲ್ಲಿರುವ ಎಂ-ಆಧಾರ್ ಕಾರ್ಡ್ ಅನ್ನು ತೋರಿದರೆ, ಅದನ್ನು ಆ ಪ್ರಯಾಣಿಕರ ನಾಗರಿಕತ್ವದ ಗುರುತಿನ ಪತ್ರವನ್ನಾಗಿ ಪರಿಗಣಿಸಬೇಕು. ಭಾರತೀಯ ರೈಲ್ವೆಯ ಯಾವುದೇ ವರ್ಗಗಳ ಅಡಿಯಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡುವಾಗ ಎಂ-ಆಧಾರ್ ಅನ್ನು ಗುರುತಿನ ಪತ್ರವನ್ನಾಗಿ ಪರಿಗಣಿಸಬೇಕೆಂದು ರೈಲ್ವೆ ಸಚಿವಾಲಯವು ಸೆಪ್ಟೆಂಬರ್ 13ರಂದು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ದಿನಗಳೆದಂತೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವಾರು ಸೇವೆಗಳನ್ನು ಹಾಗೂ ಯೋಜನೆಗಳ ಲಾಭವನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗುತ್ತಿರುವ ಹಿನ್ನೆಲೆಯಲ್ಲಿ, ನಾಗರಿಕರಿಗೆ ಅನುಕೂಲವಾಗಲು ಭಾರತೀಯ ವಿಶೇಷ ಗುರುತಿನ ಪತ್ರ ಪ್ರಾಧಿಕಾರವು (ಯುಐಡಿಎಐ) ಇತ್ತೀಚೆಗೆ ಎಂ- ಆಧಾರ್ ಎಂಬ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಸದ್ಯಕ್ಕೆ ಈ ಮೊಬೈಲ್ ಅಪ್ಲಿಕೇಷನ್ ಕೇವಲ ಆ್ಯಂಡ್ರಾಯ್ಡ್ ಆಪರೇಟಿಂಗ್ ವ್ಯವಸ್ಥೆಯುಳ್ಳ ಫೋನ್ ಗಳಲ್ಲಿ ಮಾತ್ರವೇ ಲಭ್ಯವಿದೆ. ರೈಲ್ವೆ ಟಿಕೆಟ್ ಬುಕಿಂಗ್ ವೇಳೆ, ನಾಗರಿಕರು ಈ ಆ್ಯಪ್ ಚಾಲನೆಗೊಳಿಸಿ, ಆನಂತರ ತಾವು ನೀಡಿರುವ ಪಾಸ್ ವರ್ಡ್ ದಾಖಲಿಸಬೇಕು. ಇದಾದ ನಂತರ, ಆಯಾ ನಾಗರಿಕರಿಗೆ ಸಂಬಂಧಪಟ್ಟ ಆಧಾರ್ ಕಾರ್ಡ್ ಮೊಬೈಲ್ ಪರದೆ ಮೇಲೆ ಡಿಸ್ ಪ್ಲೇ ಆಗುತ್ತದೆ. ಇದನ್ನೇ, ಎಂ- ಆಧಾರ್ ಎಂದು ಹೇಳಲಾಗುತ್ತದೆ.












Click it and Unblock the Notifications