ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು?
ನವದೆಹಲಿ: ಭಾರತೀಯ ರೈಲುಗಳಲ್ಲಿ ಮಾರಾಟ ಮಾಡುವ ಆಹಾರ ಗುಣಮಟ್ಟ, ಅದನ್ನು ಎಲ್ಲಿ ಮಾಡಲಾಗಿರುತ್ತದೆ, ಮಾರಾಟಗಾರರ ಮಾಹಿತಿ ಇದ್ಯಾವುದು ನಮಗೆ ತಿಳಿದಿರುವುದಿಲ್ಲ. ಅನಧಿಕೃತ ವ್ಯಾಪಾರಿಗಳು ಗುಣಮಟ್ಟ ಅಲ್ಲದ ಆಹಾರ ನೀಡಿ ಹಣ ಪಡೆಯುತ್ತಿದ್ದಾರೆ. ಅಂತಹ ಪದಾರ್ಥ ತಿಂದ ಪ್ರಯಾಣಿಕರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಬ್ರೇಕ್ ಹಾಕಿ ಗುಣಮಟ್ಟದ ಆಹಾರ ಪತ್ತೆಗೆ ಭಾರತೀಯ ರೈಲ್ವೆಯು ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತಂದಿದೆ.
ಹೌದು, ರೈಲಿನಲ್ಲಿ ಅನಧಿಕೃತ ಆಹಾರ ಮಾರಾಟ, ಮಾರಾಟಗಾರರನ್ನು ತಡೆಯಲು, ಗುಣಮಟ್ಟದ ಆಹಾರ ಪತ್ತೆಗೆ, ಅಧಿಕೃತ ವೆಂಡರ್ ಮಾಹಿತಿ ಸೇರಿ ವಿವಿಧ ಖಚಿತ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳಬಹುದು. ಅದಕ್ಕೆ ಅನುಕೂಲವಾಗುವಂತೆಯೇ ಈ ರೈಲುಗಳಲ್ಲಿ ಕ್ಯೂಆರ್ ಕೋಡ್ (OR) ವ್ಯವಸ್ಥೆ ಜಾರಿಗೆ ತರಲಾಗಿದೆ.

ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರ ಪ್ರದೇಶದಲ್ಲಿ ಅನಧಿಕೃತ ಬಿಡಿ ವ್ಯಾಪಾರ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಇದು ರೈಲ್ವೆ ಕಾಯ್ದೆ 1989ರ ಸೆಕ್ಷನ್ - 144ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ರೈಲುಗಳಲ್ಲಿ ಅನಧಿಕೃತ ಮಾರಾಟಗಾರರ ಪ್ರವೇಶವನ್ನು ಪರಿಶೀಲಿಸಲು ಮತ್ತು ತಡೆಯಲು ಗೊತ್ತುಪಡಿಸಿದ ಅಧಿಕಾರಿಗಳು ಮತ್ತ ಆರ್.ಟಿ.ಎಫ್. ನಿಯಮಿತ ತಪಾಸಣೆಗಳನ್ನು ನಡೆಸುತ್ತದೆ. ಕಾಲಕಾಲಕ್ಕೆ ರೈಲ್ವೆ ಆವರಣದಲ್ಲಿ ಅನಧಿಕೃತ ಮಾರಾಟವನ್ನು ತಡೆಯಲು ರೈಲ್ವೆ ಮತ್ತು ಐಆರ್ ಸಿಟಿಸಿ ಅಧಿಕಾರಿಗಳು ವಿಶೇಷ ದಾಳಿಗಳನ್ನು ಸಹ ನಡೆಸುತ್ತಾರೆ. ಹೀಗಿದ್ದರು ಮಾರಾಟ ಮುಂದುವರಿದಿದೆ.
ಏನಿದು ಕ್ಯೂಆರ್ ಕೋಡ್ ವ್ಯವಸ್ಥೆ
ರೈಲುಗಳಲ್ಲಿ ಅಧಿಕೃತ ಮಾರಾಟಗಾರರ ಗುರುತಿಸಲು ರೈಲು ಪ್ರಯಾಣ ಮಾಡುವಾಗ ಆಹಾರ, ಊಟ ನೀಡಲು ನಿಯೋಜಿಸಿದ ಮಾರಾಟಗಾರರು/ಸಹಾಯಕರು/ಸಿಬ್ಬಂದಿಗಳ ಹೆಸರಿನಲ್ಲಿ ಕ್ಯೂ ಆರ್ ಕೋಡ್ ಸಕ್ರಿಯಗೊಳಿಸಲಾಗಿದೆ. ಅವರಿಗೆ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ. ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಆಹಾರ ಮಾರಾಟಗಾರರ ಹೆಸರು, ಆಧಾರ್ ಸಂಖ್ಯೆ, ವೈದ್ಯಕೀಯ ಫಿಟ್‌ನೆಸ್, ಪೊಲೀಸ್ ಪರಿಶೀಲನೆ ವಿವರಗಳು ಇತ್ಯಾದಿ ಮಾಹಿತಿ ಪ್ರದರ್ಶನವಾಗುತ್ತದೆ. ನೀವು ಆಹಾರ ಕೊಳ್ಳುವಾಗ ಕ್ಯೂಆರ್ ಕೋಡ್ ಪರಿಶೀಲಿಸಿದರೆ ಎಲ್ಲ ಮಾಹಿತಿ ಸಿಗುತ್ತದೆ. ಈ ಮೂಲಕ ಅನಧಿಕೃತ ಮಾರಾಟವನ್ನು ತಡೆಯಬಹುದಾಗಿದೆ. ಪ್ರಯಾಣಿಕರು ಸ್ವಯಂ ಪ್ರೇರಿತವಗಿ ಉತ್ತಮ ಆಹಾರ, ವೆಂಡರ್ ಮಾಹಿತಿ ತಿಳಿಯಲು ಈ ವ್ಯವಸ್ಥೆ ಸಹಾಯವಾಗುತ್ತದೆ.
ಕ್ಯೂರ್ ಕೋಡ್ ಪತ್ತೆ ಹೇಗೆ?
ರೈಲುಗಳಲ್ಲಿ ಪ್ರಯಾಣಿಕರು ಖರೀದಿಸುವ ಆಹಾರ ಪ್ಯಾಕೆಟ್‌ಗಳ ಮೇಲೆ ಕ್ಯೂ ಆರ್ ಕೋಡ್ ಇರುತ್ತದೆ. ಪ್ಯಾಕೆಟ್ ನಿಮ್ಮ ಕೈ ಸೇರುತ್ತಿದ್ದಂತೆ ಅಡುಗೆಮನೆಯ ಹೆಸರು ಮತ್ತು ಉತ್ಪಾದನಾ ದಿನಾಂಕ, ಮಾರಾಟಗಾರರು, ಈ ಆಹಾರ ಅಧಿಕೃತ ವ್ಯಕ್ತಿಗಳಿಂದ ತಯಾರಿಸಿದ್ದಾ? ಅಲ್ಲವಾ? ಎಂಬಿತ್ಯಾದ ಎಲ್ಲ ಮಾಹಿತಿಗಳನ್ನು ನೀವು ಸ್ಕ್ಯಾನ್ ಮಾಡಿ ಮೊಬೈಲ್‌ನಲ್ಲೇ ವೀಕ್ಷಿಸಬಹುದಾಗಿದೆ.
ರೈಲಿನಲ್ಲಿ ಆಹಾರ ಗುಣಮಟ್ಟ, ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಯನ್ನು ಸುಧಾರಿಸಲು ಕೈಗೊಂಡ ಕ್ರಮಗಳ ಕುರಿತು ಕಳೆದ ವಾರ ಲೋಕಸಭೆಯಲ್ಲಿ ಖುದ್ದು ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ. ಯಾವೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರ ಇಲ್ಲಿದೆ.
ಕೈಗೊಂಡ ಕ್ರಮಗಳ ಪಟ್ಟಿ
* ಗೊತ್ತುಪಡಿಸಿದ ಬೇಸ್ ಕಿಚನ್‌ಗಳಿಂದ ಊಟದ ಪೂರೈಕೆ.
* ಗುರುತಿಸಲಾದ ಸ್ಥಳಗಳಲ್ಲಿ ಆಧುನಿಕ ಬೇಸ್ ಕಿಚನ್‌ಗಳನ್ನು ನಿಯೋಜಿಸುವುದು.
* ಆಹಾರ ತಯಾರಿಕೆಯ ಉತ್ತಮ ಮೇಲ್ವಿಚಾರಣೆಗಾಗಿ ಬೇಸ್ ಕಿಚನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಸ್ಥಾಪನೆ.
* ಆಹಾರ ಉತ್ಪಾದನೆಗಾಗಿ ಅಡುಗೆ ಎಣ್ಣೆ, ಗೋಧಿ, ಅಕ್ಕಿ, ಬೇಳೆ ಕಾಳುಗಳು, ಮಸಾಲಾ ವಸ್ತುಗಳು, ಪನೀರ್, ಡೈರಿ ಉತ್ಪನ್ನಗಳು ಮುಂತಾದ ಜನಪ್ರಿಯ ಮತ್ತು ಬ್ರಾಂಡ್ ಕಚ್ಚಾ ವಸ್ತುಗಳ ಕಿರುಪಟ್ಟಿ ಮತ್ತು ಬಳಕೆ.
* ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ಮೇಲ್ವಿಚಾರಣೆ ಮಾಡಲು ಬೇಸ್ ಕಿಚನ್‌ಗಳಲ್ಲಿ ಆಹಾರ ಸುರಕ್ಷತಾ ಮೇಲ್ವಿಚಾರಕರ ನಿಯೋಜನೆ
* ರೈಲುಗಳಲ್ಲಿ ಆನ್-ಬೋರ್ಡ್ ಐ.ಆರ್.ಸಿ.ಟಿ.ಸಿ. ಮೇಲ್ವಿಚಾರಕರ ನಿಯೋಜನೆ.
* ಬೇಸ್ ಕಿಚನ್ ಗಳು ಮತ್ತು ಪ್ಯಾಂಟ್ರಿ ಕಾರ್ ಗಳಲ್ಲಿ ನಿಯಮಿತ ಆಳವಾದ ಶುಚಿಗೊಳಿಸುವಿಕೆ ಮತ್ತು ನಿಯತಕಾಲಿಕ ಕೀಟ ನಿಯಂತ್ರಣ.
* ಆಹಾರ ಸುರಕ್ಷತಾ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು, ಪ್ರತಿ ಕ್ಯಾಟರಿಂಗ್ ಘಟಕದ ಗೊತ್ತುಪಡಿಸಿದ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ.) ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲಾಗಿದೆ.
* ರೈಲುಗಳಲ್ಲಿ ಆಹಾರದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ತಪಾಸಣೆ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನದ ಭಾಗವಾಗಿ ನಿಯಮಿತ ಆಹಾರ ಮಾದರಿ ಸಂಗ್ರಹಣೆ.
* ಪ್ಯಾಂಟ್ರಿ ಕಾರ್ ಗಳು ಮತ್ತು ಬೇಸ್ ಕಿಚನ್ ಗಳಲ್ಲಿ ನೈರ್ಮಲ್ಯ ಮತ್ತು ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಮೂರನೇ ವ್ಯಕ್ತಿಯ ಲೆಕ್ಕಪರಿಶೋಧನೆಯನ್ನು ಮಾಡಲಾಗುತ್ತದೆ. ಗ್ರಾಹಕ ತೃಪ್ತಿ ಸಮೀಕ್ಷೆಯನ್ನು ಸಹ ನಡೆಸಲಾಗುತ್ತದೆ.
* ಆಹಾರ ಸುರಕ್ಷತಾ ಅಧಿಕಾರಿಗಳಿಂದ ಅನಿರೀಕ್ಷಿತ ತಪಾಸಣೆ.
* ಗ್ರಾಹಕ ಸೇವಾ ಕ್ಷೇತ್ರಗಳಾದ ಸಂವಹನ, ವಿನಯಶೀಲ ನಡವಳಿಕೆ, ಸೇವಾ ಮಾನದಂಡಗಳು, ವೈಯಕ್ತಿಕ ಅಂದಗೊಳಿಸುವಿಕೆ ಮತ್ತು ನೈರ್ಮಲ್ಯದ ಮೇಲೆ ಕೇಂದ್ರೀಕರಿಸುವ ಅಡುಗೆ ಸಿಬ್ಬಂದಿಯ ಕೌಶಲ್ಯಗಳನ್ನು ಹೆಚ್ಚಿಸಲು ಐ.ಆರ್.ಸಿ.ಟಿ.ಸಿ.ಯಿಂದ ನಿಯಮಿತ ತರಬೇತಿಯನ್ನು ನಡೆಸಲಾಗುತ್ತದೆ.












Click it and Unblock the Notifications