ಬಜರಂಗ್ ಪುನಿಯಾ ಜೊತೆ ಕುಸ್ತಿ ಆಡಿದ ರಾಹುಲ್ ಗಾಂಧಿ
ಬೆಂಗಳೂರು, ಡಿಸೆಂಬರ್ 27: ಹರಿಯಾಣದ ಜಜ್ಜರ್‌ನಲ್ಲಿ ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಸ್ತಿ ಆಡಿ ಖುಷಿಪಟ್ಟರು.
ಬ್ರಿಜ್ ಭೂಷಣ್ ಶರಣ್ ಸಿಂಗ್ ನಿಷ್ಠಾವಂತ ಸಂಜಯ್ ಸಿಂಗ್ ಅವರನ್ನು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬಳಿಕ ಆಕ್ರೋಶ ವ್ಯಕ್ತಪಡಿಸಿರುವ ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಮತ್ತು ಇತರ ಕುಸ್ತಿಪಟುಗಳನ್ನು ರಾಹುಲ್ ಭೇಟಿ ಮಾಡಿ ಅಳಲು ಆಲಿಸಿದರು.

ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ವೀರೇಂದ್ರ ಅಖಾಡಾದಲ್ಲಿ ಕುಸ್ತಿಪಟುಗಳನ್ನು ಭೇಟಿಯಾಗಿ ಸಂವಾದ ನಡೆಸಿದರು. "ರಾಹುಲ್ ಗಾಂಧಿ ಅವರು ನಮ್ಮ ತರಬೇತಿ ನೋಡಲು ಬಂದರು. ಅವರು ನನ್ನೊಂದಿಗೆ ಕುಸ್ತಿ ಮತ್ತು ವ್ಯಾಯಾಮ ಮಾಡಿದರು. ಅವರು ಕುಸ್ತಿಪಟುವಿನ ದೈನಂದಿನ ಜೀವನ ಏನೆಂದು ನೋಡಲು ಬಂದರು" ಎಂದು ಬಜರಂಗ್ ಸುದ್ದಿಗಾರರಿಗೆ ತಿಳಿಸಿದರು.
ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು ಸಂಜಯ್ ಅವರ ಆಯ್ಕೆಯನ್ನು ವಿರೋಧಿಸಿ ಸರ್ಕಾರಕ್ಕೆ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಹಿಂದಿರುಗಿಸಿದ ಒಂದು ದಿನದ ನಂತರ ಸಭೆ ನಡೆಯಿತು. ಗುರುವಾರ ಬ್ರಿಜ್ ಭೂಷಣ್ ಅವರ ನಿಷ್ಠಾವಂತ ನೇತೃತ್ವದ ಸಮಿತಿಯು 15 ಹುದ್ದೆಗಳಲ್ಲಿ 13 ಅನ್ನು ಗೆದ್ದಿದ್ದರಿಂದ ಸಂಜಯ್ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾದರು.
ಬ್ರಿಜ್ ಭೂಷಣ್ ಅವರ ಯಾವುದೇ ಆಪ್ತರು ಡಬ್ಲ್ಯುಎಫ್‌ಐ ಆಡಳಿತಕ್ಕೆ ಪ್ರವೇಶಿಸಬಾರದು ಎಂದು ಕುಸ್ತಿಪಟುಗಳು ಒತ್ತಾಯಿಸಿದ್ದರು. ಅಧ್ಯಕ್ಷರ ಚುನಾವಣೆಯ ನಂತರ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಕ್ರೀಡೆಯನ್ನು ತ್ಯಜಿಸುವುದಾಗಿ ಘೋಷಿಸಿದರು.
ಆದಾಗ್ಯೂ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತನ್ನದೇ ಆದ ಸಂವಿಧಾನದ ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ಕ್ರೀಡಾ ಸಚಿವಾಲಯವು ನಂತರ ಹೊಸದಾಗಿ ಆಯ್ಕೆಯಾದ ಸಮಿತಿಯನ್ನು ಅಮಾನತುಗೊಳಿಸಿತು. ಕ್ರೀಡಾ ಸಂಸ್ಥೆಯ ವ್ಯವಹಾರಗಳನ್ನು ನಿರ್ವಹಿಸಲು ತಾತ್ಕಾಲಿಕ ಸಮಿತಿಯನ್ನು ರಚಿಸುವಂತೆ ಸೂಚಿಸಿತು.












Click it and Unblock the Notifications