ಗುಜರಾತ್ ನ್ಯಾಯಾಲಯದಲ್ಲಿ ಅಪರಾಧ ಮತ್ತು ಶಿಕ್ಷೆಯ ತೀರ್ಪು ಪ್ರಶ್ನಿಸಲಿರುವ ರಾಹುಲ್ ಗಾಂಧಿ
ನವದೆಹಲಿ, ಏಪ್ರಿಲ್.02: 2019ರ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಇತ್ತೀಚೆಗೆ ಸಂಸತ್ತಿನಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಅಪರಾಧ ಮತ್ತು ಶಿಕ್ಷೆಯನ್ನು ನಾಳೆ (ಸೋಮವಾರ, ಏಪ್ರಿಲ್ 03) ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾನನಷ್ಟ ಮೊಕದ್ದಮೆಯಲ್ಲಿ ತನಗೆ ಶಿಕ್ಷೆ ವಿಧಿಸಿರುವ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸುವಂತೆ ರಾಹುಲ್ ಗಾಂಧಿ ಅವರು ತಮ್ಮ ಅರ್ಜಿಯಲ್ಲಿ ಸೆಷನ್ಸ್ ನ್ಯಾಯಾಲಯವನ್ನು ಕೋರಿದ್ದಾರೆ. ಈ ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾಲಯ ನೀಡಿರುವ ಶಿಕ್ಷೆಗೆ ಮಧ್ಯಂತರ ತಡೆ ನೀಡುವಂತೆಯೂ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

2019ರ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಸೂರತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ಜಾಮೀನು ನೀಡಲಾಯಿತು. ಅವರ ಶಿಕ್ಷೆಯನ್ನು 30 ದಿನಗಳ ಕಾಲ ಅಮಾನತುಗೊಳಿಸಲಾಯಿತು. ರಾಹುಲ್ ಗಾಂಧಿ ನ್ಯಾಯಾಲಯದ ತೀರ್ಪಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಲೋಕಸಭೆಯ ಸಚಿವಾಲಯವು ತ್ವರಿತವಾಗಿ ಅವರನ್ನು ಸಂಸತ್ ಸದಸ್ಯತ್ವದಿಂದ ಅಮಾನತುಗೊಳಿಸಿದೆ.
ರಾಹುಲ್ ಗಾಂಧಿಯವರ ಶಿಕ್ಷೆಯನ್ನು ಉಚ್ಚ ನ್ಯಾಯಾಲಯವು ತಡೆಹಿಡಿಯದ ಹೊರತು, ಚುನಾವಣಾ ಆಯೋಗವು ವಯನಾಡ್ ಲೋಕಸಭಾ ಸ್ಥಾನಕ್ಕೆ ವಿಶೇಷ ಚುನಾವಣೆಯನ್ನು ಘೋಷಿಸುತ್ತದೆ. ರಾಹುಲ್ ಗಾಂಧಿಗೆ ಮುಂದಿನ ಎಂಟು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ. ಹೀಗಾಗಿ ರಾಹಲ್ ಗಾಂಧಿ ನಾಳೆ ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪು ಪ್ರಶ್ನಿಸಲಿದ್ದಾರೆ.
ವಯನಾಡ್‌ನ ಮಾಜಿ ಲೋಕಸಭಾ ಸಂಸದರು 2019 ರ ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ, ದೇಶಬಿಟ್ಟು ಹೋಗಿರುವ ನೀರವ್ ಮೋದಿ ಮತ್ತು ಲಲಿತ್ ಮೋದಿ ಅವರನ್ನು ಉಲ್ಲೇಖಿಸುತ್ತಾ, "ಎಲ್ಲಾ ಕಳ್ಳರು ಮೋದಿ ಎಂಬ ಸಾಮಾನ್ಯ ಉಪನಾಮವನ್ನು ಹೊಂದಿರುವುದು ಹೇಗೆ?"ಎಂದಿದ್ದರು. ಇದಕ್ಕೆ ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇನ್ನು, ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ಕೆಲವು ದಿನಗಳ ನಂತರ, ರಾಹುಲ್ ಗಾಂಧಿಯವರು ತಮ್ಮ ಅಧಿಕೃತ ದೆಹಲಿ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. ಬಿಜೆಪಿ ಈ ಕ್ರಮವನ್ನು ಕಾನೂನುಬದ್ಧವಾಗಿದೆ ಎಂದು ಕರೆದಿದೆ ಮತ್ತು ವಿಪಕ್ಷ ನಾಯಕರು ಪಕ್ಷಾತೀತರಾಗಿ ರಾಹುಲ್ ಗಾಂಧಿ ವಿರುದ್ದದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications