ಬಿಜೆಪಿ ಮೋಸ ಬಯಲು ಮಾಡಿದ ಸುಪ್ರೀಂ : ರಾಹುಲ್ ಗಾಂಧಿ
ಬೆಂಗಳೂರು, ಮೇ 18 : "ರಾಜ್ಯಪಾಲ ವಜುಭಾಯಿ ವಾಲಾ ಅವರು ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ ಎಂಬ ನಮ್ಮ ವಾದಕ್ಕೆ, ಇಂದು ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದಿಂದ ಪುಷ್ಟಿ ಸಿಕ್ಕಿದೆ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ತಮ್ಮ ಬಳಿ 116 ಶಾಸಕರ ಬೆಂಬಲವಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಪತ್ರ ಸಲ್ಲಿಸಿದ್ದರೂ, ರಾಜ್ಯಪಾಲರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಸರಕಾರ ರಚಿಸಲು ಆಹ್ವಾನ ನೀಡಿದ್ದರು.
ಈ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್ ಸರ್ವೋಚ್ಚ ನ್ಯಾಯಾಲಯದ ಕದವನ್ನು ಬುಧವಾರ ಮಧ್ಯರಾತ್ರಿ ತಟ್ಟಿತ್ತು. ರಾಜ್ಯಪಾಲರ ನಿರ್ಣಯಕ್ಕೆ ತಡೆಯೊಡ್ಡಲು ನ್ಯಾಯಮೂರ್ತಿಗಳು ನಿರಾಕರಿಸಿದ್ದರೂ, ಶನಿವಾರ ವಿಶ್ವಾಸಮತ ಯಾಚನೆ ಆಗಲೇಬೇಕು ಎಂದು ಶುಕ್ರವಾರ ಆದೇಶ ನೀಡಿದ್ದಾರೆ.

ತಮ್ಮ ಬಳಿ ಬಹುಮತಕ್ಕೆ ಬೇಕಾದ ಸಂಖ್ಯೆಗಳು ಇಲ್ಲದಿದ್ದರೂ ಮೋಸದಿಂದ ಸರಕಾರ ರಚಿಸಲು ಹೊರಟಿರುವ ಭಾರತೀಯ ಜನತಾ ಪಕ್ಷದ ಹುನ್ನಾರ ಸರ್ವೋಚ್ಚ ನ್ಯಾಯಾಲಯದ ಆದೇಶದಿಂದ ಬಯಲಾಗಲಿದೆ ಎಂದು ರಾಹುಲ್ ಗಾಂಧಿ ಅವರು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Today’s Supreme Court order, vindicates our stand that Governor Vala acted unconstitutionally.
— Rahul Gandhi (@RahulGandhi) May 18, 2018
The BJP’s bluff that it will form the Govt., even without the numbers, has been called out by the court.
Stopped legally, they will now try money & muscle, to steal the mandate.
ಕಾನೂನಿನ ಪ್ರಕಾರ ಅವರಿಗೆ ತಡೆಯೊಡ್ಡಲಾಗಿದೆ. ಆದರೆ, ಬಿಜೆಪಿ ನಾಯಕರು ಹಣಬಲ ಮತ್ತು ತೋಳ್ಬಲದಿಂದ ಜನಾದೇಶವನ್ನು ಕಸಿದುಕೊಳ್ಳಲು ಎಲ್ಲ ಯತ್ನ ನಡೆಸಲಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಆತಂಕ ವ್ಯಕ್ತಪಡಿಸಿದರು. ತಾವು ಬಹುಮತ ಸಾಬೀತುಪಡಿಸಿಯೇ ತೀರುತ್ತೇವೆ ಎಂದು ಯಡಿಯೂರಪ್ಪನವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೇಗೆ ಮಾಡುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಇದೇ ಸಂದರ್ಭದಲ್ಲಿ, 85ನೇ ವರ್ಷಕ್ಕೆ ಕಾಲಿಟ್ಟಿರುವ ಹಿರಿಯ ರಾಜಕೀಯ ಮುತ್ಸದ್ದಿ ಎಚ್ ಡಿ ದೇವೇಗೌಡ ಅವರ ಹುಟ್ಟುಹಬ್ಬದಂದು ಅವರಿಗೆ ರಾಹುಲ್ ಗಾಂಧಿ ಶುಭಾಶಯ ಕೋರಿದ್ದು, ಅವರಿಗೆ ದೇವರು ಆರೋಗ್ಯ ಮತ್ತು ಆನಂದ ದಯಪಾಲಿಸಲಿ ಎಂದು ಹಾರೈಸಿದ್ದಾರೆ.












Click it and Unblock the Notifications