ಆಗಸ್ಟ್ 12-13 ರಂದು ವಯನಾಡ್‌ಗೆ ಭೇಟಿ ನೀಡಲಿರುವ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರು ತಮ್ಮ ಮತಕ್ಷೇತ್ರ ವಯನಾಡ್‌ಗೆ ಭೇಟಿ ನೀಡಲಿದ್ದಾರೆ. ಕೇರಳದ ವಯನಾಡ್‌ಗೆ ಆಗಸ್ಟ್ 12 ರಿಂದ ಆಗಸ್ಟ್ 13 ರವರೆಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮಂಗಳವಾರ ಮಾಹಿತಿ ನೀಡಿದ್ದಾರೆ. ಸೋಮವಾರ ಲೋಕಸಭೆ ಸದಸ್ಯರಾಗಿ ಮರುಸೇರ್ಪಡೆಗೊಂಡ ನಂತರ ತಮ್ಮ ಕ್ಷೇತ್ರಕ್ಕೆ ಇದು ಅವರ ಮೊದಲ ಭೇಟಿಯಾಗಿದೆ.
ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಟ್ವಿಟ್ ಮಾಡಿದ್ದು, "ಆಗಸ್ಟ್ 12-13 ರಂದು ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರವಾದ ವಯನಾಡ್‌ಗೆ ಭೇಟಿ ನೀಡಲಿದ್ದಾರೆ! ಪ್ರಜಾಪ್ರಭುತ್ವವು ಗೆದ್ದಿದೆ ಮತ್ತು ಸಂಸತ್ತಿಗೆ ತಮ್ಮ ಧ್ವನಿ ಮರಳಿದೆ ಎಂದು ವಯನಾಡಿನ ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ರಾಹುಲ್ ಕೇವಲ ಸಂಸದರಲ್ಲ ಅವರ ಕುಟುಂಬದ ಸದಸ್ಯ!" ಎಂದು ಸಂತಸ ಹಂಚಿಕೊಂಡಿದ್ದಾರೆ.

'ಮೋದಿ' ಉಪನಾಮ ಟೀಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆಗಸ್ಟ್ 4 ರಂದು ರಾಹುಲ್ ಗಾಂಧಿಯವರ ದೋಷಾರೋಪಣೆಗೆ ತಡೆ ನೀಡಿದ ನಂತರ ಲೋಕಸಭೆಯ ಸೆಕ್ರೆಟರಿಯೇಟ್ ಸೋಮವಾರ ಅವರ ಸದಸ್ಯತ್ವವನ್ನು ಮರುಸ್ಥಾಪಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಸಂಸದರಾಗಿ ವಾಪಸ್
ಮಾರ್ಚ್ 2023 ರಲ್ಲಿ ಕೆಳಮನೆಯಿಂದ ಅನರ್ಹಗೊಂಡ ಕಾಂಗ್ರೆಸ್ ನಾಯಕನನ್ನು ವಯನಾಡ್ ಸಂಸದರಾಗಿ ಮರುಸ್ಥಾಪಿಸಲಾಗಿದೆ. 'ಮೋದಿ ಉಪನಾಮ' ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗಾಂಧಿಯವರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಆದೇಶದಲ್ಲಿ ತಡೆಹಿಡಿದಿದೆ.
ಗುಜರಾತ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕನ ಮೇಲ್ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಜುಲೈನಲ್ಲಿ ಗುಜರಾತ್ ಸರ್ಕಾರಕ್ಕೆ ನೋಟಿಸ್ ನೀಡಿದೆ. ಗುಜರಾತ್ ಹೈಕೋರ್ಟ್, ಈ ಹಿಂದೆ ತನ್ನ ಆದೇಶದಲ್ಲಿ, 'ಮೋದಿ ಉಪನಾಮ' ಹೇಳಿಕೆಗಾಗಿ ಸೂರತ್ ನ್ಯಾಯಾಲಯವು ರಾಹುಲ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಅವರ ಅಪರಾಧವನ್ನು ತಡೆಯಲು ನಿರಾಕರಿಸಿತ್ತು. ಪ್ರಕರಣದಲ್ಲಿ ಅಪರಾಧ ಸಾಬೀತಾದ ನಂತರ, ಮಾರ್ಚ್ 24 ರಂದು ಕೇರಳದ ವಯನಾಡ್ ಸಂಸದರಾಗಿ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿತ್ತು.
ರಾಹುಲ್ ಗಾಂಧಿ ವಿರುದ್ಧದ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿ ಆದೇಶ ನೀಡಿದ ನಂತರ ಕಾಂಗ್ರೆಸ್ ಕಾರ್ಯಕರ್ತರು ದೇಶಾದ್ಯಂತ ಸಂಭ್ರಮಾಚರಣೆ ನಡೆಸಿದ್ದರು. ಸಂಸದರಾಗಿ ಅವರು ಮರಳಿದ ನಂತರ ಖಾಲಿ ಮಾಡಿದ್ದ ಸರ್ಕಾರಿ ಬಂಗಲೆ ಕೂಡ ವಾಪಸ್ ಸಿಕ್ಕಿದೆ. ಸಂಸತ್ ಅಧಿವೇಶನದಲ್ಲಿ ಕೂಡ ಅವರು ಭಾಗವಹಿಸಿದ್ದರು.












Click it and Unblock the Notifications