ಚುನಾವಣೆಯಿಂದ ದೂರ ಉಳಿದ ಪ್ರಿಯಾಂಕಾ ಗಾಂಧಿ; ರಾಯ್ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ, ಅಮೇಥಿಯಲ್ಲಿ ಯಾರು?
ಲೋಕಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಹೊಸ ತಂತ್ರಗಾರಿಕೆಯನ್ನ ನಡೆಸಿದೆ. ಲೋಕಸಭಾ ಚುನಾವಣೆಯಲ್ಲಿ ಈಗಾಗಲೇ ವಯನಾಡಿನಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ರಾಯ್ಬರೇಲಿಯಿಂದಲೂ ಕಣಕ್ಕಿಳಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾ ಅವರ ಹೆಸರನ್ನ ಕಾಂಗ್ರೆಸ್ ಹೈಕಮಾಮಡ್ ಘೋಷಿಸಿದೆ. ಇಬ್ಬರ ಹೆಸರುಗಳ ಪಟ್ಟಿಯನ್ನ ಕಾಂಗ್ರೆಸ್ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿ ರಾಯ್ಬರೇಲಿ ಹೊರತಾಗಿ ಕೇರಳದ ವಯನಾಡಿನಿಂದಲೂ ಸ್ಪರ್ಧಿಸಿದ್ದು, ವಯನಾಡಿನಲ್ಲಿ ಏಪ್ರಿಲ್ 26ರಂದು ಚುನಾವಣೆ ನಡೆದಿತ್ತು. ರಾಯ್ ಬರೇಲಿಯಲ್ಲಿ ಮೇ 20ರಂದು ಮತದಾನ ನಡೆಯಲಿದೆ. ಇನ್ನೂ ಇಷ್ಟು ದಿನಗಳ ಕಾಲ ಸಾಕಷ್ಟು ಕುತೂಹಲ ಮೂಡಿಸಿದ್ದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ವಿಚಾರಕ್ಕೆ ಇಂದು ತೆರೆ ಬಿದಿದ್ದು, ಪ್ರಿಯಾಂಕಾ ಗಾಂಧಿ ಎಲ್ಲೂ ಸ್ಪರ್ಧಿಸುತ್ತಿಲ್ಲ ಎಂಬುದು ತಿಳಿದುಬಂದಿದೆ.

ಅಮೇಥಿ ಹಾಗೂ ರಾಯ್ಬರೇಲಿ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದು, ಬಿಜೆಪಿಯು ದಿನೇಶ್ ಪ್ರತಾಪ್ ಸಿಂಗ್ ಅವರನ್ನು ರಾಯ್ಬರೇಲಿಯಿಂದ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಇನ್ನೂ 2019 ರ ಲೋಕಸಭಾ ಚುನಾವಣೆಯಲ್ಲಿ ದಿನೇಶ್ ಪ್ರತಾಪ್ ಸಿಂಗ್ ಅವರು ಸೋನಿಯಾ ವಿರುದ್ಧ ಸೋತಿದ್ದರು. ಇನ್ನೂ ರಾಹುಲ್ ಗಾಂಧಿ 2004ರಿಂದ 2019ರವರೆಗೆ ಸತತ ಮೂರು ಅವಧಿಗೆ ಅಮೇಥಿಯನ್ನು ಪ್ರತಿನಿಧಿಸಿದ್ದರು. ಅವರು ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ಧ ಕೊನೆಗೆ ಸೋಲು ಅನುಭವಿಸಿದರು.
ರಾಹುಲ್ ಗಾಂಧಿಗಿಂತ ಮೊದಲು ಅವರು ತಾಯಿ ಸೋನಿಯಾ ಗಾಂಧಿ 1999-2004ರವರೆಗೆ ಅಮೇಥಿಯನ್ನು ಪ್ರತಿನಿಧಿಸಿದ್ದರು. ಸೋನಿಯಾಗಿಂತ ಮೊದಲು ಸಂಜಯ್ ಗಾಂಧಿ ಹಾಗೂ ರಾಜೀವ್ ಗಾಂಧಿ ಪ್ರತಿನಿಧಿಸಿದ್ದರು.
ಮತ್ತೊಂದೆಡೆ ರಾಯ್ ಬರೇಲಿಯನ್ನು 2004 ರಿಂದ 2024ರವರೆಗೆ ಸುಮಾರು ಎರಡು ದಶಕಗಳ ಕಾಲ ಸೋನಿಯಾ ಗಾಂಧಿ ಪ್ರತಿನಿಧಿಸಿದ್ದರು.
ಅಮೇಥಿಯ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಮತ್ತೊಮ್ಮೆ ಚುನಾವಣಾ ಕಣದಲ್ಲಿದ್ದಾರೆ. ಅಮೇಥಿಯಿಂದ ಶರ್ಮಾ ಅವರಿಗೆ ಟಿಕೆಟ್ ನೀಡಲಾಗಿದೆ, ಶರ್ಮಾ ಅವರು ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿದ್ದಾರೆ. ಇಲ್ಲಿಯವರೆಗೆ ರಾಯ್ ಬರೇಲಿಯಲ್ಲಿ ಸಂಸದ ಪ್ರತಿನಿಧಿಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು. ಏಳು ಹಂತದ ಸಾರ್ವತ್ರಿಕ ಚುನಾವಣೆಯ ಐದನೇ ಹಂತದಲ್ಲಿ ಮೇ 20 ರಂದು ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಎರಡೂ ಸ್ಥಾನಗಳನ್ನು ಸಾಂಪ್ರದಾಯಿಕವಾಗಿ ಗಾಂಧಿ-ನೆಹರು ಕುಟುಂಬದ ಸದಸ್ಯರು ಹೊಂದಿದ್ದಾರೆ. ಮೊದಲ ಬಾರಿಗೆ ಪಕ್ಷವು ಅಮೇಥಿಯಿಂದ ಗಾಂಧಿಯೇತರ ಕುಟುಂಬದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.












Click it and Unblock the Notifications