ಮುಂಬರುವ ಅಸೆಂಬ್ಲಿ ಚುನಾವಣೆ: ಕಾಂಗ್ರೆಸ್ ನಿಂದ ಬಹಿಷ್ಕಾರ?
ನವದೆಹಲಿ, ಜೂನ್ 24 : ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿ, ಖುದ್ದು ತಾನೂ ಅಮೇಥಿಯಲ್ಲಿ ಸೋತ ನಂತರ, ಇವಿಎಂ ಮೇಲೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶಂಕೆ ಇನ್ನಷ್ಟು ಹೆಚ್ಚಾಗಿದೆಯೇ?
ಕೆಲವೊಂದು ಮಾಧ್ಯಮಗಳ ವರದಿ ಪ್ರಕಾರ, ಇವಿಎಂ ಮೂಲಕ ಚುನಾವಣೆ ನಡೆಸುವುದನ್ನು ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಅಸಹಕಾರ ಚಳುವಳಿ ನಡೆಸುವ ಸಾಧ್ಯತೆಯಿದೆ.
ಜೊತೆಗೆ, ಹಲವು ವಿರೋಧಗಳ ನಡುವೆಯೂ, ಮುಂಬರುವ ಅಸೆಂಬ್ಲಿ ಚುನಾವಣೆಯನ್ನೂ ಬಹಿಷ್ಕರಿಸುವ ಬಗ್ಗೆ ರಾಹುಲ್ ಚಿಂತನೆ ನಡೆಸಿದ್ದಾರೆಂದು ವರದಿಯಾಗಿದೆ. ಆದರೆ, ರಾಹುಲ್ ಗಾಂಧಿಯವರ ಚುನಾವಣೆ ಬಹಿಷ್ಕರಿಸುವ ಹೋರಾಟಕ್ಕೆ ಕಾಂಗ್ರೆಸ್ ನಲ್ಲೇ ವಿರೋಧ ವ್ಯಕ್ತವಾಗಿದೆ.

ಕಳೆದ ಒಂದು ವರ್ಷದಲ್ಲಿ ಚುನಾವಣಾ ಆಯೋಗ ಖರೀದಿಸಿರುವ ಹೊಸ ಇವಿಎಂ ಮೆಷಿನ್ ಗಳನ್ನು ಬಿಜೆಪಿ ಹ್ಯಾಕ್ ಮಾಡಿದೆ ಎಂದು, ರಾಹುಲ್ ಗಾಂಧಿಗೆ, ಕಾಂಗ್ರೆಸ್ ಡೇಟಾ ವಿಭಾಗದಿಂದ ಬಂದಿದೆ ಎನ್ನಲಾಗುತ್ತಿರುವ ವರದಿಯ ಹಿನ್ನಲೆಯಲ್ಲಿ, ರಾಹುಲ್ ಗೆ ಇವಿಎಂ ಮೇಲೆ ಶಂಕೆ ಇನ್ನಷ್ಟು ಹೆಚ್ಚಿದೆ.
ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು ಎನ್ನುವ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ರಾಹುಲ್ ಚಾಲನೆ ನೀಡುವ ಸಾಧ್ಯತೆಯಿದೆ. ಆದರೆ, ಮತದಾನ ಬಹಿಷ್ಕರಿಸುವ ಬಗ್ಗೆ, ಪಕ್ಷದೊಳಗೆ ಗೊಂದಲವಿರುವುದುರಿಂದ, ಇನ್ನೂ, ಈ ಬಗ್ಗೆ ಅಂತಿಮ ನಿರ್ಧಾರ ಪಕ್ಷ ತೆಗೆದುಕೊಳ್ಳಬೇಕಷ್ಟೆ.
ಚುನಾವಣಾ ಬಹಿಷ್ಕಾರಕ್ಕೆ ಎಲ್ಲಾ ರಾಜ್ಯಗಳಿಂದಲೂ ವಿರೋಧ ವ್ಯಕ್ತವಾಗಿದೆ, ಇದು ಪಕ್ಷಕ್ಕೆ ಇನ್ನಷ್ಟು ಹಿನ್ನಡೆಯನ್ನು ತಂದೊಡ್ಡಲಿದೆ ಎಂದು ನಾಯಕರು ರಾಹುಲ್ ಗೆ ಎಚ್ಚರಿಸಿದ್ದಾರೆಂದು ವರದಿಯಾಗಿದೆ.












Click it and Unblock the Notifications