ಬಿಲ್ಕಿಸ್ ಅತ್ಯಾಚಾರಿಗಳ ಬಿಡುಗಡೆ ಪ್ರಕರಣ: ಮೋದಿಯಿಂದ ಮಹಿಳೆಯರಿಗೆ ವಂಚನೆ ಎಂದ ರಾಹುಲ್
ಅಹಮದಾಬಾದ್, ಅಕ್ಟೋಬರ್ 18: ಗುಜರಾತ್‌ನ ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆಗೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿತ್ತು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಬಿಲ್ಕಿಸ್ ಬಾನೊ ಪ್ರಕರಣದ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿರುವ ಗುಜರಾತ್ ಸರ್ಕಾರ ಈ ಮಾಹಿತಿ ನೀಡಿದೆ. ಈ ವಿಚಾರವಾಗಿ ಟ್ವೀಟ್ ಮೂಲಕ ಹರಿಹಾಯ್ದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಟ್ವೀಟ್ ಮಾಡಿರುವ ಅವರು, 'ದೆಹಲಿಯ ಕೆಂಪು ಕೋಟೆಯ ಮೇಲೆ ಮಹಿಳೆಯರನ್ನು ಗೌರವಿಸಬೇಕೆಂದು ಪ್ರಧಾನಿ ಮೋದಿ ಭಾಷಣ ಮಾಡುತ್ತಾರೆ. ಆದರೆ, ಅವರು ವಾಸ್ತವದಲ್ಲಿ ಅತ್ಯಾಚಾರಿಗಳನ್ನು ಬೆಂಬಲಿಸುತ್ತಾರೆ' ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿಯವರ ಭರವಸೆ ಹಾಗೂ ಉದ್ದೇಶಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಅವರು ಮಹಿಳೆಯರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ರಾಹುಲ್ ಹರಿಹಾಯ್ದಿದ್ದಾರೆ.

ಅತ್ಯಾಚಾರಗಳ ಬಿಡುಗಡೆ ಸಮರ್ಥಿಸಿಕೊಂಡ ಗುಜರಾತ್ ಸರ್ಕಾರ
ಬಿಲ್ಕಿಸ್ ಬಾನೊ ಅತ್ಯಾಚಾರಗಳ ಬಿಡುಗಡೆಯನ್ನು ಗುಜರಾತ್‌ನ ಬಿಜೆಪಿ ಸರ್ಕಾರ ಸಮರ್ಥಿಸಿಕೊಂಡಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
'ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆಯನ್ನು ಪ್ರಶ್ನಿಸಿರುವ ಅರ್ಜಿದಾರರು ಅಧಿಕ ಪ್ರಸಂಗಿಗಳು ಹಾಗೂ ತಂಟೆಕೋರರು' ಎಂದು ಹೇಳಿದೆ.
'ಬಿಲ್ಕಿಸ್ ಬಾನೊ ಅತ್ಯಾಚಾರಗಳ ಬಿಡುಗಡೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿತ್ತು' ಎಂದು ತಿಳಿಸಿದೆ.

ಬಾನೊ ಪ್ರಕರಣ ತನಿಖೆಯನ್ನು ಸಿಬಿಐಗೆ ನೀಡಲಾಗಿತ್ತು. ಅತ್ಯಾಚಾರಿಗಳನ್ನು ಬಿಡುಗಡೆ ಮಾಡಲು ಸಿಬಿಐಗೆ ಕೇಂದ್ರ ಸರ್ಕಾರವೇ ಒಪ್ಪಿಗೆ ನೀಡಿತ್ತು ಎಂದು ಗುಜರಾತ್ ಸರ್ಕಾರ ಸ್ಪಷ್ಟವಾಗಿ ಹೇಳಿದೆ.
'ಈ ಪ್ರಕರಣದ ಅಪರಾಧಿಗಳು ಈಗಾಗಲೇ 14 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದಾರೆ. ಹೀಗಾಗಿ, ಪ್ರಕರಣದಲ್ಲಿ ಭಾಗಿಯಾದ 11 ಅಪರಾಧಿಗಳಿಗೆ ಶಿಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಇದನ್ನು ಪ್ರಶ್ನಿಸಿರುವ ಅರ್ಜಿದಾರರಿಗೂ, ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇವೆರೆಲ್ಲರೂ ತಂಟೆಗೋರರು. ಹೀಗಾಗಿ, ಅವರ ಅರ್ಜಿಯನ್ನು ವಜಾಗಳಿಸಬೇಕು' ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.
ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ 6 ಸಾವಿರಕ್ಕೂ ಅಧಿಕ ನಾಗರಿಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ ಕೇಂದ್ರ ಹಾಗೂ ಗುಜರಾತ್ ಸರ್ಕಾರಗಳಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೇಳಿತ್ತು.

ಕೋಮುಗಲಭೆಯಲ್ಲಿ ಬಿಲ್ಕಿನ್ ಬಾನೊ ಅತ್ಯಾಚಾರ
ಗೋಧ್ರಾ ಹತ್ಯಾಕಾಂಡದ ಬಳಿಕ ಗುಜರಾತ್‌ನಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಆಗ ಬಿಲ್ಕಿನ್ ಬಾನೊ ಅವರ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಆಕೆಯ ಪರಿವಾರದ ಏಳು ಸದಸ್ಯರನ್ನು ದುರುಳರು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಅಪರಾಧಿಗಳೆಂದು ತೀರ್ಮಾನಿಸಲಾಗಿತ್ತು. 2008ರ ಜ.21 ರಂದು ವಿಶೇಷ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಅತ್ಯಾಚಾರ ಅಪರಾಧಿಗಳಿಗೆ ಸನ್ಮಾನ
ದುರಂತವೆಂದರೆ, ಬಿಲ್ಕಿನ್ ಬಾನೊ ಅತ್ಯಾಚಾರಿಗಳನ್ನು ಆಗಸ್ಟ್ 15ರಂದು ಗುಜರಾತ್ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿತ್ತು. ಆ ನಂತರ ಅಪರಾಧಿಗಳಿಗೆ ಸನ್ಮಾನವನ್ನೂ ಮಾಡಲಾಗಿತ್ತು. ಇದು ದೇಶದಾದ್ಯಂತ ಜನರ ಆಕ್ರೋಶಕ್ಕೆ ಗುರಿಯಾದರೂ, ಗುಜರಾತ್‌ನ ಬಿಜೆಪಿ ಸರ್ಕಾರ ಮಾತ್ರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ನ್ಯಾಯದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ: ಬಿಲ್ಕಿಸ್ ಬಾನೊ
ಅತ್ಯಾಚಾರಿಗಳ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ್ದ ಸಂತ್ರಸ್ತೆ ಬಿಲ್ಕಿತ್ ಬಾನೊ, 'ನನ್ನ ಬದುಕನ್ನೇ ಹಾಳುಮಾಡಿದವರು ಹಾಗೂ ಮೂರು ವರ್ಷದ ಮಗುವನ್ನು ನನ್ನಿಂದ ಕಸಿದುಕೊಂಡ ರಕ್ಕಸರು ಈ ರೀತಿಯಾಗಿ ಹೊರಬರುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಈ ಘಟನೆ ಬಳಿಕ ನನಗೆ ನ್ಯಾಯದ ಮೇಲಿನ ನಂಬಿಕೆ ಹೋಗಿದೆ. ಗುಜರಾತ್ ಸರ್ಕಾರದ ನಿರ್ಧಾರದಿಂದ ನನಗೆ ತೀವ್ರ ನೋವಾಗಿದೆ. ನಾನೀಗ ಅಸಹಾಯಕಳು' ಎಂದು ತಿಳಿಸಿದ್ದರು.












Click it and Unblock the Notifications