ರಾಹುಲ್ ಗಾಂಧಿ ಅನರ್ಹತ್ವ ರದ್ದು : ಸಂಸತ್ತಿನಲ್ಲಿ ಮಣಿಪುರದ ಧ್ವನಿಗೆ ಹೊಸ ಆಯಾಮ
ಮೋದಿ ಉಪನಾಮ ಹೇಳಿಕೆ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ನೀಡಿದ್ದ 2 ವರ್ಷಗಳ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಸುಪ್ರೀಂ ಆದೇಶದ ಬಳಿಕ ರಾಹುಲ್ ಗಾಂಧಿ ಅವರಿಗೆ ಸಂಸದ ಸ್ಥಾನ ಮರಳಿ ಸಿಕ್ಕಿದ್ದು, ಇಂದಿನಿಂದ ಸಂಸತ್ ಕಲಾಪದಲ್ಲಿ ಕೂಡ ಭಾಗವಹಿಸುತ್ತಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಂಸತ್ ಸ್ಥಾನದ ಅನರ್ಹತೆಯನ್ನ ಲೋಕಸಭೆಯ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ವಾಪಸ್ ಪಡೆದಿದ್ದಾರೆ. ನ್ಯಾಯಾಲಯದಲ್ಲಿ ಜೈಲು ಶಿಕ್ಷೆ ಪ್ರಕಟವಾದ ಬಳಿಕ, ಅವರ ಲೋಕಸಭೆ ಸದಸ್ಯತ್ವವನ್ನು ರದ್ದು ಮಾಡಲಾಗಿತ್ತು.

ರಾಹುಲ್ ಗಾಂಧಿ ಲೋಕಸಭೆಗೆ ವಾಪಸ್ ಬಂದ ಬಳಿಕ ಮಣಿಪುರ ವಿಚಾರವಾಗಿ ವಿಪಕ್ಷಗಳ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಇಂಡಿಯಾ ಹೆಸರಿನಲ್ಲಿ ವಿಪಕ್ಷಗಳ ಒಕ್ಕೂಟ ಆಡಳಿತಾರೂಢ ಎನ್‌ಡಿಎ ಸರ್ಕಾರದ ವಿರುದ್ಧ ಮಣಿಪುರ ಹಿಂಸಾಚಾರ ವಿಷಯದಲ್ಲಿ ಮುಗಿಬಿದ್ದಿವೆ. ಬಿಜೆಪಿ ಮಣಿಪುರ ಹಿಂಸಾಚಾರ ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ಕೂಡ ನಡೆಸಿವೆ.
ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆ
ಮಣಿಪುರ ಹಿಂಸಾಚಾರ ಕುರಿತಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ. ಅವಿಶ್ವಾಸ ನಿರ್ಣಯ ಕುರಿತು ಚರ್ಚೆಗೆ ಕಲಾಪ ಸಲಹಾ ಸಮಿತಿ 12 ಗಂಟೆಗಳಷ್ಟು ಅವಕಾಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಗುರುವಾರ ಈ ಬಗ್ಗೆ ಉತ್ತರ ಕೊಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿದೆ.
ಮಣಿಪುರ ಹಿಂಸಾಚಾರ ಕುರಿತಂತೆ ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದ್ದವು. ಆದರೆ ಸರ್ಕಾರ ವಿಪಕ್ಷಗಳ ಬೇಡಿಯನ್ನು ತಿರಸ್ಕರಿಸಿತ್ತು, ಇದಕ್ಕಾಗಿಯೇ ಮೋದಿಯನ್ನು ಮಾತನಾಡುವಂತೆ ಮಾಡಲು ವಿಪಕ್ಷಗಳು ಅವಿಶ್ವಾಸ ನಿರ್ಣಯ ಎನ್ನುವ ಅಸ್ತ್ರ ಪ್ರಯೋಗಿಸಿವೆ.
ರಾಹುಲ್ ಗಾಂಧಿ ಈಗ ಸಂಸದರ ಸ್ಥಾನ ಮರಳಿ ಪಡೆದುಕೊಂಡಿದ್ದು, ಸಂಸತ್ ಕಲಾಪದಲ್ಲಿ ಭಾಗವಹಿಸುವುದರಿಂದ ಮಣಿಪುರ ವಿಚಾರದಲ್ಲಿ ವಿಪಕ್ಷಗಳಿಗೆ ಮತ್ತಷ್ಟು ಬಲ ಬಂದಿದೆ. ರಾಹುಲ್ ಗಾಂಧಿ ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ್ದರು. ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗೆ ಇಂಡಿಯಾ ಪಕ್ಷಗಳ ಒಕ್ಕೂಟ ಶ್ರಮಿಸುತ್ತದೆ ಎಂದು ಹೇಳಿದ್ದರು.
ಹಲವು ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರ ಸವಾಲು ಹಾಕುವ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಧ್ವನಿ ಎತ್ತಲಿದ್ದಾರೆ. ವಿಪಕ್ಷಗಳ ಹೋರಾಟ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.
ರಾಹುಲ್ ಗಾಂಧಿ ಸಂಸತ್‌ಗೆ ಮರಳಿದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ, ಸತ್ಯಕ್ಕೆ ಸಂದ ಜಯ ಎಂದು ಕಾಂಗ್ರೆಸ್ ಹೇಳಿದೆ.












Click it and Unblock the Notifications