ರಾಹುಲ್ ಗಾಂಧಿ ಸುಳ್ಳುಗಳಿಂದ ದೇಶದ ಘನತೆಗೆ ಧಕ್ಕೆ; ಎಸ್ ಜೈಶಂಕರ್ ಆಕ್ರೋಶ
ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ಸಿಗುವಂತೆ ಮಾಡಲು ಭಾರತ ಸರ್ಕಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಕಳಿಸಿತ್ತು ಎನ್ನುವ ರಾಹುಲ್ ಗಾಂಧಿ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಹುಲ್ ಗಾಂಧಿ ಅವರ ಆರೋಪವನ್ನು ನಿರಾಕರಿಸಿರುವ ಎಸ್ ಜೈಶಂಕರ್, ಅವರ ಸುಳ್ಳು ಹೇಳಿಕೆಗಳಿಂದ ವಿಶ್ವ ಮಟ್ಟದಲ್ಲಿ ಭಾರತದ ಘನತೆಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.
2024ರಲ್ಲಿ ತಾವು ಅಮೆರಿಕಗೆ ಭೇಟಿ ನೀಡಿದ್ದ ಸಮಯದಲ್ಲಿ ಅಂತಹ ಆಹ್ವಾನದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದರು. ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಂತಹ ಸುಳ್ಳು ಹೇಳಿಕೆ ನೀಡಿದ ದೇಶದ ಘನತೆಗೆ ಧಕ್ಕೆ ತರಬಾರದು ಎಂದು ಹೇಳಿದೆ.

ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು 2024ರ ಡಿಸೆಂಬರ್ ತಿಂಗಳಿನಲ್ಲಿ ನನ್ನ ಅಮೆರಿಕ ಭೇಟಿಯ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದಾರೆ. ನಾನು ಜೋ ಬಿಡೆನ್ ಆಡಳಿತದ ವಿದೇಶಾಂಗ ಕಾರ್ಯದರ್ಶಿ ಮತ್ತು ಎನ್‌ಎಸ್‌ಎ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಇದರ ಜೊತೆಗೆ ನಮ್ಮ ಕಾನ್ಸುಲ್ ಜನರಲ್‌ಗಳ ಸಭೆಯ ಅಧ್ಯಕ್ಷತೆ ವಹಿಸಬೇಕಿತ್ತು, ನಾನು ಅಲ್ಲಿದ್ದ ಸಮಯದಲ್ಲಿ ಮುಂಬರುವ ಎನ್‌ಎಸ್‌ಎ-ನಿಯೋಜಿತರು ಭೇಟಿಯಾಗಿದ್ದರು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ಪಡೆಯಲು ಜೈಶಂಕರ್ ಅವರನ್ನು ಅಮೆರಿಕಕ್ಕೆ ಕಳಿಸಲಾಗಿತ್ತು ಎಂದು ಹೇಳಿದರು.
ನಮ್ಮಲ್ಲಿ ಉತ್ಪಾದನಾ ವ್ಯವಸ್ಥೆ ಇದ್ದರೆ, ತಂತ್ರಜ್ಞಾನಗಳ ಅಭಿವೃದ್ಧಿ ಮೇಲೆ ಕೆಲಸ ಮಾಡುತ್ತಿದ್ದರೆ, ಅಮೆರಿಕದ ಅಧ್ಯಕ್ಷರೇ ಇಲ್ಲಿಗೆ ಬಂದು ಪ್ರಧಾನಿಯನ್ನು ಆಹ್ವಾನಿಸುತ್ತಿದ್ದರು. ಹೀಗೆ ವಿದೇಶಾಂಗ ಸಚಿವರನ್ನು ಮೂರು-ನಾಲ್ಕು ಬಾರಿ ಕಳಿಸಬೇಕಾದ ಅಗತ್ಯವಿರಲಿಲ್ಲ ಎಂದು ಹೇಳಿದರು.
ನಾನು ಯುಎಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಮತ್ತು ಪ್ರಧಾನಿ ಮೋದಿ ಅಂತಹ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ ಭಾರತವನ್ನು ಸಾಮಾನ್ಯವಾಗಿ ವಿಶೇಷ ರಾಯಭಾರಿಗಳು ಪ್ರತಿನಿಧಿಸುತ್ತಾರೆ ಎಂದು ಹೇಳಿದರು.












Click it and Unblock the Notifications