'ಸಾವಿರಾರು ಸೊಳ್ಳೆ ಕಚ್ಚಿದ್ವು, ಲಾಡಿ ಹುಳಾನೂ ಬಿದ್ದಿತ್ತು'
ಸಾಗರ್ (ಮಧ್ಯಪ್ರದೇಶ), ಅ. 25: 'ನಮ್ಮಜ್ಜಿನ್ನ ಕೊಂದ್ರು. ಸಾಲದು ಅಂತ ನನ್ನಪ್ಪನನ್ನು ಕೊಂದ್ರು. ಮುಂದೆ ನನ್ನನ್ನೂ ಕೊಲ್ತಾರೆ' ಎಂದು ಮೊನ್ನೆಯಷ್ಟೇ ಪ್ರಲಾಪಿಸಿದ್ದ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರು ಮತ್ತೆ ಅದೇ ಧಾಟಿಯಲ್ಲೇ ಮಾತನಾಡಿದ್ದಾರೆ.
'ನಿಮ್ಗೊತ್ತಾ ನನಗೆ ಸಾವಿರಾರು ಸೊಳ್ಳೆಗಳು ಕಚ್ಚಿದವು. ಸಾಲದು ಅಂತ ಹೊಟ್ಟೆಯಲ್ಲಿ ಲಾಡಿ ಹುಳನೂ ಬಿದ್ದಿತ್ತು. ಆದರೆ ಅದನ್ನೆಲ್ಲಾ ನಾನು ಸಹಿಸಿಕೊಂಡೆ. ಯಾಕಾಗಿ ಹೇಳಿ. ಅದು ನಮ್ಮ ಜನತೆಗಾಗಿ. ನಾಯಕನಾಗಬೇಕಿಂದಿರುವವನು ಇದನ್ನೆಲ್ಲಾ ಸಹಿಸಿಕೊಳ್ಳಬೇಕು. ಆಗ್ಲೇ ಆತ ಗಟ್ಟಿ ಆಗೋದೊ' ಎಂದು ರಾಹುಲ್ ಬಾಬಾ ಹೇಳಿದ್ದಾರೆ.

ರಾಹುಲ್ ಸೊಳ್ಳೆಯಿಂದ ಯಾವಾಗ ಕಡಿಸಿಕೊಂಡಿದ್ದು?
ಯಾವಾಗ ಅಂತೀರಾ? 2009ರ ಲೋಕಸಭಾ ಚುನಾವಣಾ ಸಮಯ ಮಧ್ಯ ಪ್ರದೇಶದ ಬುಂದೇಲ್ ಖಂಡ್ ಪ್ರಾಂತ್ಯದಲ್ಲಿರುವ ಕುಗ್ರಾಮಕ್ಕೆ ಬಂದಿದ್ದಾಗ ಅಲ್ಲಿ ಬರೋಬ್ಬರಿ 25 ಸಾವಿರ ಸೊಳ್ಳೆಗಳು ಕಚ್ಚಿದ್ದವು ಕಣ್ರೀ ಎಂದು ನಿನ್ನೆ ಗುರುವಾರ ಮಧ್ಯ ಪ್ರದೇಶದಲ್ಲಿ ಅದೇ ಜನರ ಮಧ್ಯೆ ನಿಂತು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಜಕೀಯ AC ಕೊಠಡಿಗಳಲ್ಲಿ ವಾಸಿಸುವ ಜನರಿಗಲ್ಲ
ಬಿಜೆಪಿಯತ್ತ ಬೊಟ್ಟು ಮಾಡಿ ತೋರಿಸುತ್ತಾ 'ಭಾರತದ ರಾಜಕೀಯ ಎಂಬೋದು ಹವಾನಿಯಂತ್ರಿತ ಕೊಠಡಿಗಳಲ್ಲಿ ವಾಸಿಸುವ ಜನರಿಗಲ್ಲ' ಎಂದು ಕಟಕಿಯಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್, ನಾನೂ ಸೊಳ್ಳೆಗಳ ಕೈಯಲ್ಲಿ ಕಚ್ಚಿಸಿಕೊಂಡಾಕ್ಷಣ ಹೋಗಿ ಎಸಿ ಕೊಠಡಿಯಲ್ಲಿ ಕುಳಿತುಕೊಳ್ಳಲಿಲ್ಲ. ರಾಜಕಾರಣಿಯಾದವನಿಗೆ ಇಂತಹ ತಳಮಟ್ಟದ ಅನುಭವಗಳಾದಾದ ಮಾತ್ರ ನಮ್ಮ ಹಳ್ಳಿಗಳಲ್ಲಿರುವ ಶೋಚನೀಯ ಸ್ಥಿತಿ ಅರಿವಿಗೆ ಬರುತ್ತದೆ. ರಾಜಕಾರಣಿ ಜನರ ಸಮಸ್ಯೆ ಆಲಿಸಬೇಕು/ ಅರ್ಥ ಮಾಡಿಕೊಳ್ಳಬೇಕು ಅಂದರೆ ರಾಜಕೀಯ ನಾಯಕರು ಜನರೊಂದಿಗೆ ಬೆರೆಯಬೇಕು. ಪ್ರತ್ಯಕ್ಷವಾಗಿ ನೋಡಬೇಕು ಎಂದು ಅಲವತ್ತುಕೊಂಡಿದ್ದಾರೆ.

'ಭಾರತ ಪ್ರಜ್ವಲಿಸುತ್ತಿದೆ' ಎಂದಿದ್ದ ಬಿಜೆಪಿ
'ಭಾರತ ಪ್ರಜ್ವಲಿಸುತ್ತಿದೆ' ಎಂದು ಹೇಳಿಕೊಂಡು 2003ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮಧ್ಯ ಪ್ರದೇಶದಲ್ಲಿ ಇನ್ನೂ ಆಡಳಿತದ ಚುಕ್ಕಾಣಿ ಹಿಡಿದಿದೆ. ಆದರೆ ಬುಂದೇಲ್ ಖಂಡದಲ್ಲಿ ಅಂದು ನಾನು ಅನುಭವಿಸಿದ ಪರಿಸ್ಥಿತಿ ಇನ್ನೂ ಹಾಗೇ ಇದೆ' ಎಂದು ರಾಹುಲ್ ವ್ಯಥೆಪಟ್ಟರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ
ಆದರೆ ಮಧ್ಯ ಪ್ರದೇಶದ ಜನ ಇನ್ನು ಅಂತಹ ದುರ್ಗತಿಯಲ್ಲೇ ಬದುಕುವ ಜರೂರತ್ತು ಇಲ್ಲ. ರಾಜ್ಯದಲ್ಲಿ ತಮ್ಮ ಕಾಂಗ್ರೆಸ್ ನಾಯಕರು ಒಟ್ಟಾಗಿ ಚುನಾವಣೆಯನ್ನು ಎದುರಿಸಿ, ಅಧಿಕಾರಕ್ಕೆ ಬರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ವೇದಿಕೆಯಲ್ಲಿ ವಿರಾಜಮಾನರಾಗಿದ್ದ ಯುವಸಾಮ್ರಾಟ ಜ್ಯೋತಿರಾದಿತ್ಯ ಸಿಂಧ್ಯಾ, ಕಮಲ್ ನಾಥ್ ಮತ್ತು ದಿಗ್ವಿಜಯ್ ಸಿಂಗ್ ಅವರತ್ತ ಕೈತೋರಿಸಿ ರಾಹುಲ್ ಹೇಳಿದರು.

ಮುಜಫ್ಫರನಗರ ಗಲಭೆಯಲ್ಲಿ ವಿದೇಶಿ ಕೈವಾಡ
ಇತ್ತೀಚೆಗೆ ಮುಜಫ್ಫರನಗರದಲ್ಲಿ ತಾಂಡವವಾಡಿದ ಗಲಭೆಯಲ್ಲಿ ನೊಂದುಹೋದ ಹತಾಶ ಯುವಕರನ್ನು ತನ್ನ ದುಷ್ಕೃತ್ಯಗಳಿಗೆ ಬಳಸಿಕೊಳ್ಳಲು ISI ಹವಣಿಸುತ್ತಿದೆ. ಈ ಪ್ರದೇಶದ ಕೆಲ ಯುವಕರನ್ನು ಸಂಪರ್ಕಿಸಲು ISI ಪ್ರಯತ್ನ ನಡೆಸುತ್ತಿರುವುದನ್ನು ಗುಪ್ತಚರ ಸಂಸ್ಥೆಗಳು ದೃಢಪಡಿಸಿವೆ. ನಿಜಕ್ಕೂ ಇದು ಗಂಭೀರ ವಿಷಯ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಬಹಿರಂಗವಾಗಿ ಹೇಳಿದರು.

ಬುಂದೇಲ್ ಖಂಡ್ ಭಾರತದ ನಟ್ಟನಡುವಿನ ಪ್ರದೇಶ
ವಾಸ್ತವವಾಗಿ ಮಧ್ಯ ಪ್ರದೇಶದ ಬುಂದೇಲ್ ಖಂಡ್ ಪ್ರಾಂತ್ಯವು ಭಾರತದ ನಟ್ಟನಡುವಿನ ಪ್ರದೇಶ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಕೆಲ ಭೂಭಾಗ ಸೇರಿ ಬುಂದೇಲ್ ಖಂಡ್ ಆಗಿದೆ. 2007-08ರಲ್ಲಿ ತೀವ್ರ ಕ್ಷಾಮ ಈ ಭಾಗವನ್ನು ಆವರಿಸಿತ್ತು.












Click it and Unblock the Notifications