SCO Summit India: ಪ್ರಧಾನಿ ಮೋದಿ ಎದುರಲ್ಲೇ ಅಮೆರಿಕ ವಿರುದ್ಧ ಗುಡುಗಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್!
ಭಾರತ ಮತ್ತು ರಷ್ಯಾದ ನಡುವೆ ಹಲವು ಶತಮಾನಗಳ ಸ್ನೇಹವಿದೆ. ಅದೇ ರೀತಿ ಆಧುನಿಕ ಜಗತ್ತಿನಲ್ಲಿ ರಷ್ಯಾ & ಭಾರತ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿವೆ. ಆದರೆ ರಷ್ಯಾ ಶತ್ರು ಅಮೆರಿಕ ಕೂಡ ಭಾರತದ ಸ್ನೇಹಿತ. ಪರಿಸ್ಥಿತಿ ಹೀಗಿದ್ದಾಗ ಭಾರತ ಎರಡೂ ದೇಶದ ಜೊತೆ ಸ್ನೇಹ ಉಳಿಸಿಕೊಂಡಿದೆ. ಇಷ್ಟೆಲ್ಲದರ ನಡುವೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ, ರಷ್ಯಾ ಅಧ್ಯಕ್ಷ ಪುಟಿನ್ ಅಮೆರಿಕ ವಿರುದ್ಧ ಗುಡುಗಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಆದರೆ ಅಮೆರಿಕ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ ಪರ ನಿಂತಿವೆ. ಹೀಗೆ ರಷ್ಯಾ ವಿರುದ್ಧ ಸಾಕಷ್ಟು ಒತ್ತಡ ಹೇರುತ್ತಿರುವ ಆರೋಪ ಇದೆ. ಈ ಆರೋಪಗಳಿಗೆ ತಕ್ಕ ಉತ್ತರ ನೀಡಲು ರಷ್ಯಾದ ಅಧ್ಯಕ್ಷ ಪುಟಿನ್ ಬಳಸಿಕೊಂಡಿದ್ದು ಭಾರತ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು. ಶಾಂಘೈ ಸಹಕಾರ ಸಂಘಟನೆ ಸಭೆ ಅಧ್ಯಕ್ಷತೆಯನ್ನ ಭಾರತ ಮೊದಲ ಬಾರಿ ವಹಿಸಿಕೊಂಡಿದ್ದು, ಈ ಸಭೆಯಲ್ಲೇ ಪರೋಕ್ಷವಾಗಿ ಅಮೆರಿಕಗೆ ಎಚ್ಚರಿಕೆ ನೀಡಿದಂತೆ ಪುಟಿನ್ ಮಾತನಾಡಿದ್ರು. ಹಾಗಾದರೆ ವಿಶ್ವದ ದೊಡ್ಡಣ್ಣನಿಗೆ ಪುಟಿನ್ ಕೊಟ್ಟ ಮೆಸೇಜ್ ಏನು? ಮುಂದೆ ಓದಿ.

ಏಟಿಗೆ ಎದಿರೇಟು ಕೊಡೋದು ಪಕ್ಕಾ!
ಹೌದು, ರಷ್ಯಾ ಮೇಲೆ ಅಮೆರಿಕ ಹಾಗೂ ನ್ಯಾಟೋ ಪಡೆಯ ಮಿತ್ರ ರಾಷ್ಟ್ರಗಳು ಸಾಕಷ್ಟು ನಿರ್ಬಂಧ ಹೇರಿವೆ. ಅದರಲ್ಲೂ ಆರ್ಥಿಕವಾಗಿ ರಷ್ಯಾ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿವೆ. ಹೀಗಾಗಿ ಪುಟಿನ್ ಇಂದು ಗರಂ ಆಗಿದ್ದರು, ಅಲ್ಲದೆ ಭಾರತದ ಸಹಾಯವನ್ನ ನೆನೆದಿದ್ದಾರೆ. ಈ ಕುರಿತು ಮಾತನಾಡಿದ ಪುಟಿನ್, 'ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೊಂಡ ನಂತರ ರಷ್ಯಾ ಮೇಲೆ ಪಶ್ಚಿಮದ ರಾಷ್ಟ್ರಗಳು ಹೇರುತ್ತಿರುವ ಒತ್ತಡ ಹಾಗೂ ನಿರ್ಬಂಧಗಳಿಗೆಲ್ಲ ರಷ್ಯಾ ತಕ್ಕ ಉತ್ತರ ನೀಡಲಿದೆ' ಎಂದಿದ್ದಾರೆ ಪುಟಿನ್. ಈ ಮೂಲಕ ಅಮೆರಿಕದ ಒತ್ತಡಗಳಿಗೆ ನಾವು ಬಗ್ಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್.
'ಸೇನಾ ದಂಗೆ' ಸಹಾಯ ನೆನೆದ ಪುಟಿನ್
ರಷ್ಯಾದಲ್ಲಿ ಕಳೆದ ವಾರ ಖಾಸಗಿ ಸೇನೆ ದಂಗೆ ಎದ್ದು ನೇರವಾಗಿ ಪುಟಿನ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಹೀಗೆ ರಷ್ಯಾ ರಾಜಧಾನಿ ಮಾಸ್ಕೋ ಕಡೆ ನುಗ್ಗಿ ಬರುತ್ತಿದ್ದ ಖಾಸಗಿ ಸೇನೆ, ದಿಢೀರ್ ತನ್ನ ನಿಲುವು ಬದಲಾಯಿಸಿ ಎಸ್ಕೇಪ್ ಆಗಿತ್ತು. ಆದರೆ ಆ ಸಂದರ್ಭದಲ್ಲಿ ಹಲವು ದೇಶಗಳು ರಷ್ಯಾಗೆ ಧೈರ್ಯ ತುಂಬಿವೆ. ಅದ್ರಲ್ಲೂ 'ಶಾಂಘೈ ಸಹಕಾರ ಸಂಘಟನೆ' ಒಕ್ಕೂಟದ ಸದಸ್ಯ ರಾಷ್ಟ್ರಗಳ ಸಹಾಯ ನೆನಪು ಮಾಡಿಕೊಂಡಿರುವ ಪುಟಿನ್ 'ರಷ್ಯಾದಲ್ಲಿ ಖಾಸಗಿ ಮಿಲಿಟರಿ ಪಡೆಗಳು ದಂಗೆ ಎದ್ದಿದ್ದ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತ ಎಸ್‌ಸಿಒ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ' ಎಂದಿದ್ದಾರೆ.

ಉಗ್ರವಾದ ಸಹಿಸುವ ಮಾತೇ ಇಲ್ಲ!
ಅಂದಹಾಗೆ ಜಗತ್ತೇ 'ಶಾಂಘೈ ಸಹಕಾರ ಸಂಘಟನೆ' ಸಭೆ ಮೇಲೆ ಕಣ್ಣಿಟ್ಟಿರುವಾಗಲೇ ಉಗ್ರರಿಗೆ ಖಡಕ್ ಸಂದೇಶ ಕಳುಹಿಸಿದ್ದಾರೆ ಪ್ರಧಾನಿ ಮೋದಿ. ಸಭೆಯಲ್ಲಿ ಪಾಕಿಸ್ತಾನ ಭಯೋತ್ಪಾದಕರ ಪೋಷಕ ಎಂದು ಕರೆದ ಪ್ರಧಾನಿ, ನಂತರ ಉಗ್ರರಿಗೆ ಶಾಸ್ತಿ ಕಾದಿರುತ್ತದೆ ಎಂಬ ಸಂದೇಶವನ್ನೂ ಕೊಟ್ಟರು. ಭಾರತ ನಿರಂತರವಾಗಿ ಭಯೋತ್ಪಾದನೆ ವಿರುದ್ಧ ಹೋರಾಟ ಮುಂದುವರಿಸಿದೆ. ಆದರೆ ಕೆಲ ದೇಶಗಳು ಗಡಿಯಾಚನೆಗಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿವೆ ಮತ್ತು ಅದನ್ನ ಅಸ್ತ್ರವಾಗಿ ಬಳಸ್ತಿವೆ. ಶಾಂಘೈ ಸಹಕಾರ ಶೃಂಗಸಭೆ ಭಯೋತ್ಪಾದನೆ ಪೋಷಿಸುವ ದೇಶವನ್ನ ಖಂಡಿಸುತ್ತದೆ. ನಾವು ಇದನ್ನ ಸಹಿಸುವ ಮಾತಿಲ್ಲ ಎಂದರು ಪ್ರಧಾನಿ ಮೋದಿ. ಈ ಮೂಲಕ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಉಗ್ರ ಪೋಷಕ ಪಾಕ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಸಭೆಯಲ್ಲಿ ಯಾರೆಲ್ಲಾ ಭಾಗವಹಿಸಿದ್ದರು?
ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಭಾವಕ್ಕೆ ಪ್ರತಿಯಾಗಿ 'ಶಾಂಘೈ ಸಹಕಾರ ಸಂಘಟನೆ' 2001ರಲ್ಲಿ ರಚನೆಯಾಗಿತ್ತು. ಈ ಸಂಘಟನೆಯಲ್ಲಿ ಭಾರತ, ಚೀನಾ, ಪಾಕಿಸ್ತಾನ, ರಷ್ಯಾ, ಕಜಕಸ್ತಾನ, ತಜಿಕಿಸ್ತಾನ, ಉಜ್ಬೆಕಿಸ್ತಾನ ಸೇರಿದಂತೆ ಕಿರ್ಗಿಸ್ತಾನ ಸದಸ್ಯ ರಾಷ್ಟ್ರಗಳಾಗಿವೆ. ಈ ಬಾರಿ ಭಾರತ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ ಅಧ್ಯಕ್ಷತೆ ವಹಿಸಿದೆ. ಈ ವರ್ಚ್ಯುಯಲ್ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಕಜಕಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ ದೇಶಗಳ ಮುಖ್ಯಸ್ಥರು ಭಾಗಿಯಾಗಿದ್ದರು. ಈ ವೇಳೆ ಭಯೋತ್ಪಾದಕರಿಗೆ ಬೆಂಬಲ ನೀಡುವ ಪಾಕಿಸ್ತಾನದ ಮಾನ ಹರಾಜು ಹಾಕಿದ್ದಾರೆ ಪ್ರಧಾನಿ.
ಉಗ್ರ ಪೋಷಕ ಪಾಕಿಸ್ತಾನಕ್ಕೆ ಮುಖಭಂಗ!
ಪಾಶ್ಚಿಮಾತ್ಯ ದೇಶಗಳು & ಚೀನಾ-ರಷ್ಯಾ ನಡುವೆ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಹೀಗಾಗಿ ಅತ್ತ ಅಮೆರಿಕ ಹಾಗೂ ಇತ್ತ ರಷ್ಯಾ ಭಾರತವನ್ನು ತಮ್ಮತ್ತ ಸೆಳೆಯಲು ಪ್ರಯತ್ನ ಮಾಡುತ್ತಲೇ ಇರುತ್ತವೆ. ಪರಿಸ್ಥಿತಿ ಹೀಗಿದ್ದಾಗ ಭಾರತ ಯಾರ ಜೊತೆಗೂ ದ್ವೇಷ ಕಟ್ಟಿಕೊಳ್ಳದೆ ಹೊಂದಾಣಿಕೆ ಮಾಡಿಕೊಂಡು ಸಾಗುತ್ತಿದೆ. ಹೀಗೆ ಪಿಎಂ ಮೋದಿ ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡರು. ಈ ಬೆಳವಣಿಗೆ ಜಗತ್ತಿನ ಗಮನ ಸೆಳೆದಿತ್ತು. ಹಾಗೇ ರಷ್ಯಾ ಮತ್ತು ಚೀನಾ ಕೂಡ ಭಾರತ ಹಾಗೂ ಅಮೆರಿಕ ಸಂಬಂಧದ ಮೇಲೆ ಕಣ್ಣಿಟ್ಟಿವೆ. ಹೀಗಾಗಿ ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡಿದ ಕೆಲ ದಿನಗಳ ನಂತರ, ಶಾಂಘೈ ಸಹಕಾರ ಸಂಘಟನೆ ಸಭೆ ಅಧ್ಯಕ್ಷತೆ ವಹಿಸಿರುವುದು ವಿಶೇಷ. ಇದೇ ಸಭೆಯಲ್ಲಿ ಪಾಕಿಸ್ತಾನಕ್ಕೂ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಪ್ರಧಾನಿ ಮೋದಿ, ಇದರ ಜೊತೆಗೆ ಪಿಎಂ ಮೋದಿ ಹೇಳಿಕೆಯಿಂದ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.












Click it and Unblock the Notifications