ಪುಣೆ ಅತ್ಯಾಚಾರ ಪ್ರಕರಣ ಆರೋಪಿಗಾಗಿ ಕಬ್ಬಿನಗದ್ದೆಯಲ್ಲಿ ಪೊಲೀಸರಿಂದ ಹುಡುಕಾಟ; ಡ್ರೋನ್ ಬಳಕೆ
ಪುಣೆಯಲ್ಲಿ ಸರ್ಕಾರಿ ಬಸ್‌ನಲ್ಲೇ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿರುವ ಘಟನೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಆರೋಪಿಯ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಕಬ್ಬಿನ ಹೊಲದಲ್ಲಿ ಆರೋಪಿ ಅವಿತಿಕೊಂಡಿರುವ ಸಾಧ್ಯತೆ ಇದ್ದು ಇದೀಗ ಪೊಲೀಸರು ಡ್ರೋನ್ ಬಳಸಿ ಆರೋಪಿಯನ್ನು ಶೋಧನಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪುಣೆಯಲ್ಲಿ ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿದ್ದ ನಗರದ ಸ್ವರ್ಗೇಟ್ ಬಸ್ ನಿಲ್ದಾಣದ ಒಳಗೆ ನಿಲ್ಲಿಸಿದ್ದ ಬಸ್ಸಿನಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು, ಎರಡು ದಿನದಿಂದ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಕಬ್ಬಿನ ಬೆಳೆಯಿರುವ ದೊಡ್ಡ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು ಪೊಲೀಸರು ಡ್ರೋನ್ ಮತ್ತು ನಾಯಿಗಳನ್ನು ಕೂಡ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಬ್ಬಿನ ಹೊಲ ಸುಮಾರು ಹತ್ತು ಅಡಿ ಎತ್ತರ ಬೆಳೆದಿರುವುದರಿಂದ ಆರೋಪಿಯನ್ನು ಹುಡುಕುವುದು ಕಷ್ಟವಾಗುತ್ತಿದೆ, ಪೊಲೀಸರು ಎಲ್ಲಾ ಕಡೆಯಿಂದ ಹುಡುಕಾಟ ನಡೆಸುತ್ತಿದ್ದರೂ ಇನ್ನೂ ಫಲ ಸಿಕ್ಕಿಲ್ಲ.
ಅತ್ಯಾಚಾರ ಆರೋಪಿಯನ್ನು ದತ್ತಾತ್ರಯ ರಾಮದಾಸ್ ಗಡೆ ಎಂದು ಗುರುತಿಸಲಾಗಿದೆ. ಅತ್ಯಾಚಾರ ಎಸಗಿದ ಬಳಿಕ ತರಕಾರಿಗಳನ್ನು ಸಾಗಿಸುವ ಟ್ರಕ್‌ನಲ್ಲಿ ಬಚ್ಚಿಟ್ಟುಕೊಂಡು ಪೊಲೀಸರ ಕಣ್ತಪ್ಪಿಸಿ ನಗರದಿಂದ ಹೊರಹೋಗಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಆರೋಪಿ ತನ್ನ ಗ್ರಾಮಕ್ಕೆ ತೆರಳಿದ್ದು ಅಲ್ಲಿ ತನ್ನ ಬಟ್ಟೆ ಮತ್ತು ಶೂಗಳನ್ನು ಬದಲಾಯಿಸಿದ್ದಾರೆ.
ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಅಪರಾಧ ವಿಭಾಗದ ಎಂಟು ಸೇರಿದಂತೆ 13 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಯಾರೇ ಆದರೂ ಆರೋಪಿಯ ಬಗ್ಗೆ ಸುಳಿವು ಕೊಟ್ಟರೆ 1 ಲಕ್ಷ ರೂಪಾಯಿ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದಾರೆ.
ಗುರುವಾರ ಬೆಳಿಗ್ಗೆ ಪ್ರಕರಣದ ಬಗ್ಗೆ ಮಾತನಾಡಿದ ಗೃಹ ಸಚಿವ ಯೋಗೇಶ್ ಕದಮ್, ಆರೋಪಿ ದತ್ತಾತ್ರಯ ರಾಮದಾಸ್ ಗಾಡೆ ಅವಿತಿರುವ ಸ್ಥಳ ಪತ್ತೆಯಾಗಿದೆ ಎಂದು ಹೇಳಿದ್ದರು. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಮಹಿಳೆಗೆ ನ್ಯಾಯ ಒದಗಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಮತ್ತು ಯಾವುದೇ ಕಾರಣಕ್ಕೂ ಆರೋಪಿಯನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಆರೋಪಿಗೆ ಮರಣದಂಡನೆ ವಿಧಿಸಬೇಕು ಎನ್ನುವ ಉಪಮುಖ್ಯಮಂತ್ರಿ ಅಜಿತ್ ಪವಾರ್ ಒತ್ತಾಯಕ್ಕೆ ಧ್ವನಿಗೂಡಿಸಿದ್ದಾರೆ.
ಪ್ರಕರಣದ ವಿವದ
ಮಂಗಳವಾರ ಬೆಳಗಿನ ಜಾವ ಅತ್ಯಾಚಾರ ನಡೆದಿದ್ದು ಪುಣೆ ನಗರವನ್ನು ಬೆಚ್ಚಿ ಬೀಳಿಸಿತ್ತು. ಯುವತಿಯೊಬ್ಬರು ಸತಾರ ಜಿಲ್ಲೆಯಲ್ಲಿರುವ ತನ್ನ ಊರಿಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದಾಗ ರಾಮದಾಸ್ ಗಾಡೆ ಆಕೆಯನ್ನು ಅಕ್ಕ ಎಂದು ಕರೆದು ಮಾತನಾಡಿಸಿದ್ದಾನೆ. ಆಕೆ ಹೋಗಬೇಕಾದ ಬಸ್ ದೂರದಲ್ಲಿ ನಿಂತಿದೆ ಎಂದು ಮನವೊಲಿಸಿದ್ದು ಅಲ್ಲಿಗೆ ಕರೆದೊಯ್ದಿದ್ದಾನೆ, ಬಳಿಕ ಬಸ್‌ನಲ್ಲೇ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.












Click it and Unblock the Notifications