ಸರಳ, ಸಜ್ಜನ, ಸಂಘದ ಶಿಸ್ತಿನ ಸಿಪಾಯಿ. ಯಾರು ಈ ಮನೋಹರ್ ಪರಿಕ್ಕರ್?

Subscribe to Oneindia Kannada

ಬೆಂಗಳೂರು, ಮಾರ್ಚ್ 14: ಪಂಚ ರಾಜ್ಯಗಳ ಚುನಾವಣೆ ಮುಗಿದ ನಂತರ ಸುದ್ದಿ ಕೇಂದ್ರಕ್ಕೆ ಬಂದವರು ಮನೋಹರ್ ಪರಿಕ್ಕರ್. ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಶಾಸಕರ ಒತ್ತಾಯದ ಮೇರೆಗೆ ರಾಜ್ಯಕ್ಕೆ ವಾಪಾಸಾಗಿ ಇಂದು ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮನೋಹರ್ ಪರಿಕ್ಕರ್ ಸರಳ ಜೀವಿ. ಸಾಮಾನ್ಯ ಪ್ಯಾಂಟ್ ಅದರ ಮೇಲೊಂದು ಅರ್ಧ ತೋಳಿನ ಅಂಗಿ. ಮೂಗಿನ ತುದಿಯಲ್ಲೊಂದು ನೇತಾಡುವ ಕನ್ನಡಕ. ಇವಿಷ್ಟೆ ಅವರ ಸ್ವತ್ತುಗಳು. ಮೇಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನ ಸಿಪಾಯಿ. ಐಶಾರಾಮಿ ರಾಜಕಾರಣಿಗಳ ಮಧ್ಯೆ ಮನೋಹರ್ ಪರಿಕ್ಕರ್ ಗಮನ ಸೆಲೆಯಲು ಹಲವು ಕಾರಣಗಳಿವೆ. ಅವರು ರೂಢಿಸಿಕೊಂಡು ಬಂದ ಜೀವನ, ವ್ಯಕ್ತಿತ್ವ ಮತ್ತು ಬುದ್ಧಿಮತ್ತೆ ಪರಿಕ್ಕರನ್ನು ಈ ಎತ್ತರಕ್ಕೆ ಏರಿಸಿದೆ.[LIVE: ಮೂರನೇ ಬಾರಿಗೆ ಗೋವಾ ಸಿಎಂ ಆಗಿ ಪರಿಕ್ಕರ್ ಪ್ರಮಾಣ ವಚನ]

1955 ಜನನ

1955 ಜನನ

ಮನೋಹರ್ ಪರಿಕ್ಕರ್ ಹುಟ್ಟಿದ್ದು 1955ರ ಡಿಸೆಂಬರ್ 13ರಂದು. ಗೋವಾದ ಮಪುಸಾ ಮನೋಹರ್ ಗೋಪಾಲಕೃಷ್ಣ ಪ್ರಭು ಪರಿಕ್ಕರ್ ಹುಟ್ಟೂರು. ಶಾಲಾ ದಿನಗಳಲ್ಲೇ ಆರ್.ಎಸ್.ಎಸ್ ಸಂಪರ್ಕ. ಮುಂದೆ ಆರ್.ಎಸ್.ಎಸ್ ಪೂರ್ಣಕಾಲಿಕ ಕಾರ್ಯಕರ್ತರಾಗಿದ್ದು ಅವರ ಬದುಕಿನ ಬಹುದೊಡ್ಡ ತಿರುವುಗಳು.

ಉದ್ಯಮ, ರಾಮಜನ್ಮಭೂಮಿ ಹೋರಾಟ

ಉದ್ಯಮ, ರಾಮಜನ್ಮಭೂಮಿ ಹೋರಾಟ

ಪರಿಕ್ಕರ್ ಐಐಟಿ ಪದವೀಧರರೂ ಹೌದು. 1978ರಲ್ಲಿ ಐಐಟಿ ಬಾಂಬೆಯಿಂದ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದುಕೊಂಡು ನಂತರ ಸಣ್ಣ ಉದ್ಯಮಕ್ಕೆ ಕೈ ಹಾಕಿದ್ದರು. ಯಾವಾಗ ರಾಮ ಜನ್ಮಭೂಮಿ ಹೋರಾಟ ಆರಂಭವಾಯಿತೂ ಪರಿಕ್ಕರ್ ಅದರಲ್ಲಿ ತೊಡಗಿಸಿಕೊಂಡರು. ಅದೇ ಅಲೆಯಲ್ಲಿ 1994ರಲ್ಲಿ ಮೊದಲ ಬಾರಿಗೆ ಗೋವಾ ವಿಧಾನಸಭೆಗೆ ಆಯ್ಕೆಯಾದರು. ಪರಿಕ್ಕರ್ ಜತೆ ಅವತ್ತು ಗೋವಾ ವಿಧಾನಸಭೆಗೆ ಒಟ್ಟು 4 ಬಿಜೆಪಿ ಶಾಸಕರಷ್ಟೇ ಆಯ್ಕೆಯಾಗಿದ್ದರು.

ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ

ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ

1999ರಲ್ಲಿ ವಿರೋಧ ಪಕ್ಷದ ನಾಯಕರಾಗುವ ಸೌಭಾಗ್ಯ ಪರಿಕ್ಕರ್ ಗೆ ಒಲಿದು ಬಂತು. ಮರು ವರ್ಷವೇ ಅಂದರೆ ಅಕ್ಟೋಬರ್ 2000ದಲ್ಲಿ ಅವರು ಗೋವಾ ರಾಜ್ಯದ ಮುಖ್ಯಮಂತ್ರಿಯಾದರು. ಅಲ್ಲಿಂದ ಗೋವಾದಲ್ಲಿ ತಾವರೆಯ ಬೇರುಗಳನ್ನು ಗಟ್ಟಿಯಾಗಿ ಇಳಿ ಬಿಡುವಂತೆ ಮಾಡಿದರು ಪರಿಕ್ಕರ್. ದೇಶದಲ್ಲಿ ಪ್ರವಾಸೋದ್ಯಮ ಅಂದರೆ ಗೋವಾ ಎನ್ನುವಂತೆ ರಾಜ್ಯವನ್ನು ಕಟ್ಟಿ ನಿಲ್ಲಿಸಿದರು. ಅದರ ಹಿಂದೆ ಪರಿಕ್ಕರ್ ತಂತ್ರಗಾರಿಕೆಗಳು ಕೆಲಸ ಮಾಡಿದ್ದವು.

ಸೋಲು ಗೆಲುವಿನ ರಾಜಕಾರಣ

ಸೋಲು ಗೆಲುವಿನ ರಾಜಕಾರಣ

ಮುಂದೆ ರಾಜ್ಯದಲ್ಲಿ ಬಿಜೆಪಿ ಹಲವು ಸೋಲು ಗೆಲುವುಗಳನ್ನು ಕಂಡಿತು. ಮತ್ತೆ 2012ರಲ್ಲಿ ಬಿಜೆಪಿಗೆ ಬಹುಮತ ಬಂದು ಪರಿಕ್ಕರ್ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮುಂದೆ 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಪರಿಕ್ಕರ್ ರಕ್ಷಣಾ ಇಲಾಖೆಯ ಹೊಣೆ ಹೊತ್ತುಕೊಂಡರು. ಹಾಗೆ ನೋಡಿದರೆ ಗೋವಾದಿಂದ ಕ್ಯಾಬಿನೆಟ್ ಮಂತ್ರಿಯಾದ ಮೊದಲಿಗರು ಮನೋಹರ್ ಪರಿಕ್ಕರ್.

ಚುರುಕುಗೊಂಡ ಡೀಲ್

ಚುರುಕುಗೊಂಡ ಡೀಲ್

ಮನೋಹರ್ ಪರಿಕ್ಕರ್ ರಕ್ಷಣಾ ಖಾತೆ ವಹಿಸಿಕೊಂಡಿದ್ದೇ ತಡ ನೆನೆಗುದಿಗೆ ಬಿದ್ದಿದ್ದ ಫೈಲುಗಳು, ಡೀಲುಗಳೆಲ್ಲಾ ಮರುಜೀವ ಪಡೆದುಕೊಂಡವು. ರಕ್ಷಣಾ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಾದವು. ಹಲವು ದೇಶಗಳೊಂದಿಗೆ ಖರೀದಿ ಒಪ್ಪಂದಗಳನ್ನು ಮಾಡಿಕೊಂಡರು. ಹೀಗೆ ರಕ್ಷಣಾ ಇಲಾಖೆಯಲ್ಲಿ ಪರಿಕ್ಕರ್ ಮಾಡಿದ ಸಾಧನೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇದೀಗ ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಮಿತ್ರ ಪಕ್ಷಗಳು ಮನೋಹರ್ ಪರಿಕ್ಕರ್ ಮುಖ್ಯಮಂತ್ರಿಯಾಗಬೇಕು ಎಂದು ಪಟ್ಟು ಹಿಡಿದಿದ್ದರಿಂದ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ.

ಮುಖ್ಯಮಂತ್ರಿಯಾದರೂ ಅಪರಿಚಿತ

ಮುಖ್ಯಮಂತ್ರಿಯಾದರೂ ಅಪರಿಚಿತ

ಇದೀಗ ಮನೋಹರ್ ಪರಿಕ್ಕರ್ ನಾಲ್ಕನೇ ಬಾರಿಗೆ ಗೋವಾದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ವಿಶೇಷ ಗೊತ್ತಾ, ಪಣಜಿಯ ಹೊಟೇಲಿನ ಸೆಕ್ಯುರಿಟಿ ಗಾರ್ಡ್ ಒಬ್ಬ 2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಪರಿಕ್ಕರನ್ನೇ ಗುರುತು ಹಿಡಿದಿರಲಿಲ್ಲ. ಫೈವ್ ಸ್ಟಾರ್ ಹೊಟೇಲಿಗೆಂದು ಹೋಗಿದ್ದ ಪರಿಕ್ಕರನ್ನು ಭದ್ರತಾ ಸಿಬ್ಬಂದಿ ತಡೆದಿದ್ದ. ಇದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ರಕ್ಷಣೆಗೆ ಯಾರೂ ಇಲ್ಲ

ರಕ್ಷಣೆಗೆ ಯಾರೂ ಇಲ್ಲ

ಅವರು ಮುಖ್ಯಮಂತ್ರಿಯಾಗಿದ್ದಾಗ ಓರ್ವ ಪೊಲೀಸ್ ಅಧಿಕಾರಿ ಬಿಟ್ಟರೆ ಅವರೊಂದಿಗೂ ಬೇರಾರು ರಕ್ಷಣೆಗೂ ಇರುತ್ತಿರಲಿಲ್ಲ. ಹೀಗಾಗಿ ಅವರ ಪರಿಚಯ ಭದ್ರತಾ ಸಿಬ್ಬಂದಿಗೆ ಸಿಕ್ಕಿರಲಿಲ್ಲ. ಕೊನೆಗೆ ತಮ್ಮ ಕಾರ್ಯದರ್ಶಿಗೆ ಫೋನ್ ಮಾಡಿ, ಸೆಕ್ರೆಟರಿ ಹೇಳಿದ ನಂತರವಷ್ಟೇ ಮುಖ್ಯಮಂತ್ರಿಯನ್ನು ಹೊಟೇಲ್ ಒಳಗಡೆ ಬಿಡಲಾಗಿತ್ತು. ಇದಕ್ಕಾಗಿ ಅವರು ಹೊಟೇಲ್ ಮ್ಯಾನೇಜರ್ ಮೇಲೆ ಸಿಟ್ಟಾಗಲಿಲ್ಲ. ಬದಲಿಗೆ ಅಲ್ಲಿನ ರಕ್ಷಣಾ ವ್ಯವಸ್ಥೆಗೆ ಶಹಬ್ಬಾಸ್ ಹೇಳಿ ವಾಪಾಸಾಗಿದ್ದರು.

ಸಿಂಪಲ್ ಮನುಷ್ಯ

ಸಿಂಪಲ್ ಮನುಷ್ಯ

ಮನೋಹರ್ ಪರಿಕ್ಕರ್ ಹಾಗೆಯೇ ಸಿಂಪಲ್ ಮನುಷ್ಯ. ಆಟೋ ರಿಕ್ಷಾ ಹತ್ತಿ ಹೋಗುವುದು. ಮುಖ್ಯಮಂತ್ರಿಯಾದಾಗಲೂ ಸ್ಕೂಟರಿನಲ್ಲಿ ಸುತ್ತಾಡುವುದು. ಸೈಕಲ್ ಹತ್ತಿ ಮನೆಯಿಂದ ವಿಧಾನಸಭೆಗೆ ಬರುವುದು. ಸಾಮಾನ್ಯ ಡಬಲ್ ಬೆಡ್ ರೂಂ ಮನೆ. ಮತ ಚಲಾಯಿಸಲು, ವಿಮಾನ ಹತ್ತಲು ಕ್ಯೂ ನಲ್ಲಿ ನಿಂತ ಪರಿಕ್ಕರ್ ಫೊಟೋಗಳು ಸಿಗುತ್ತವೆ.

ಅವರೊಬ್ಬ ಅಪರೂಪದ ರಾಜಕಾರಣಿ ಎನ್ನಲು ಯಾವ ಅಡ್ಡಿಯೂ ಇಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New chief minister of Goa Manohar Parikkar’s profile. Who is Manohar Parrikar? His birh, life history is here.
Please Wait while comments are loading...