ಕಠಿಣ ಕ್ರಮ ತೆಗೆದುಕೊಂಡಿದ್ದರಿಂದಲೇ ನೀರವ್, ಮಲ್ಯ ದೇಶಬಿಟ್ಟಿದ್ದು: ಮೋದಿ
ನವದೆಹಲಿ, ಏಪ್ರಿಲ್ 5: ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಮರಳಿ ಪಾವತಿಸದೆ ವಂಚಿಸಿ ಕೊನೆಗೆ ದೇಶದಿಂದ ಪರಾರಿಯಾದ ಆರೋಪ ಹೊತ್ತಿರುವ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಎನ್‌ಡಿಎ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳನ್ನು ಎದುರಿಸಲಾಗದೆ ಪಲಾಯನ ಮಾಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಎಬಿಪಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ದೇಶಭ್ರಷ್ಟ ಆರ್ಥಿಕ ಅಪರಾಧಿಗಳಾಗಿರುವ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರ ಕುರಿತಾದ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
'ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಅವರಂತಹ ಆರೋಪಿಗಳು ಕಳೆದ ಐದು ವರ್ಷಗಳಿಂದ ದೇಶದಿಂದ ಹೊರಗೆ ಪಲಾಯನ ಮಾಡಿದ್ದಾರೆ. ಅವರ ಗಡಿಪಾರಿಗೆ ಸಂಬಂಧಿಸಿದಂತೆ ಈಗ ದೇಶ ನಿಮ್ಮೆಡೆಗೆ ಪ್ರಶ್ನೆ ಕೇಳುತ್ತಿದೆ. ವಿರೋಧಪಕ್ಷಗಳು ಸಹ ನಿರಂತರವಾಗಿ ಈ ವಿಚಾರವನ್ನು ಕೆದಕುತ್ತಿವೆ. ನಿಮ್ಮ ವಿವರಣೆಯೇನು?' ಎಂದು ಪ್ರಶ್ನಿಸಲಾಗಿತ್ತು.

'ನಾವು ತೆಗೆದುಕೊಂಡ ಕ್ರಮಗಳ ಫಲಿತಾಂಶವಾಗಿಯೇ ಇಂದು ಆರ್ಥಿಕ ಅಪರಾಧಿಗಳು ತಾವು ಪಲಾಯನ ಮಾಡಿದ ದೇಶಗಳಲ್ಲಿ ಜೈಲಿನಲ್ಲಿ ಬಂಧಿಯಾಗುವಂತಾಗಿದೆ. ನಮ್ಮಿಂದಾಗಿಯೇ ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ' ಎಂದು ಮೋದಿ ತಿಳಿಸಿದರು.
'ದೇಶದಲ್ಲಿ ಕಾನೂನು ಇದೆ ಮತ್ತು ನಾವು ನಾವು ಆ ಕಾನೂನನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದೇವೆ. ಆದರೆ, ಈ ವ್ಯಕ್ತಿಗಳು ಏಕೆ ಪಲಾಯನ ಮಾಡಿದ್ದರು ಗೊತ್ತೇ, ಏಕೆಂದರೆ ಅವರು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಖುಷಿಯಾಗಿದ್ದರು' ಎಂದು ಹೇಳಿದರು.
'ಹತ್ತು ವರ್ಷಗಳ ಅವಧಿಯಲ್ಲಿ ಈ ವ್ಯಕ್ತಿಗಳು ಸಾಕಷ್ಟು ಹಣ ಪಡೆದು ನಮ್ಮನ್ನು ವಂಚಿಸಿದ್ದರೇ ಹೊರತು ನಾವು ಅಧಿಕಾರಕ್ಕೆ ಬಂದ ಬಳಿಕ ಅಲ್ಲ. ತಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುವಂತಹ ಸರ್ಕಾರವೊಂದು ಅಸ್ತಿತ್ವಕ್ಕೆ ಬರುತ್ತದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಆದ್ದರಿಂದಲೇ ನಾವು ಅಧಿಕಾರಕ್ಕೆ ಬಂದಾಗ ಭಯಗೊಂಡು ಪರಾರಿಯಾದರು' ಎಂದರು.












Click it and Unblock the Notifications