Vande Bharat Express: ಭಾನುವಾರ 9 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
11 ರಾಜ್ಯಗಳಲ್ಲಿ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುವ ಒಂಬತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಲಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಪ್ರಯಾಣಿಕರಿಗೆ ಸಮಯದ ಉಳಿತಾಯ ಮಾಡಲಿದ್ದು, ಸುಖಕರ ಪ್ರಯಾಣಕ್ಕೆ ಸಹಾಯ ಮಾಡಲಿದೆ.
9 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಎಲ್ಲಾ ಮಾರ್ಗಗಳಲ್ಲಿ ಈಗಾಗಲೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆಸಿದ್ದು, ಪ್ರಯಾಣಿಕರ ಸೇವೆಗೆ ಸಜ್ಜಾಗಿವೆ.

9 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗದ ವಿವರ
1. ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್
ಹೈದರಾಬಾದ್‌ನ ಕಾಚಿಗುಡ ಮತ್ತು ಬೆಂಗಳೂರಿನ ಯಶವಂತಪುರ ನಡುವೆ ಈ ರೈಲು ಸಂಚರಿಸಲಿದೆ. ಮಹಬೂಬ್‌ನಗರ, ಕರ್ನೂಲ್, ಅನಂತಪುರ ಮತ್ತು ಧರ್ಮವರಂ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಈ ರೈಲಿನಲ್ಲಿ ಒಂದು ಎಕ್ಸಿಕ್ಯೂಟಿವ್ ಕ್ಲಾಸ್ ಮತ್ತು ಏಳು ಚೇರ್ ಕಾರ್ ಕೋಚ್‌ಗಳಿದ್ದು, 530 ಪ್ರಯಾಣಿಕರ ಆಸನ ಸಾಮರ್ಥ್ಯ ಹೊಂದಿದೆ.
2. ಉದಯಪುರ - ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್
ಉದಯಪುರ ಮತ್ತು ಜೈಪುರ ನಡುವಿನ ಸಂಪರ್ಕವನ್ನು ಸುಧಾರಿಸಲು ವಂದೇಭಾರತ್ ಎಕ್ಸ್‌ಪ್ರೆಸ್ ಸಹಾಯ ಮಾಡುತ್ತದೆ. ಇದು ಪ್ರಸ್ತುತ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವೇಗದ ರೈಲಿಗಿಂತ ಸುಮಾರು 30 ನಿಮಿಷ ಬೇಗ ತಲುಪಲಿದೆ. ಇದು ರಾಜಸ್ಥಾನದ ಮೂರನೇ ವಂದೇ ಭಾರತ್ ರೈಲು ಆಗಲಿದೆ.
3. ತಿರುನಲ್ವೇಲಿ-ಮಧುರೈ- ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್
ತಿರುನಲ್ವೇಲಿ-ಮಧುರೈ-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತಿರುನಲ್ವೇಲಿ ಮತ್ತು ಮಧುರೈ ಧಾರ್ಮಿಕ ಪಟ್ಟಣಗಳನ್ನು ಚೆನ್ನೈನೊಂದಿಗೆ ಸಂಪರ್ಕಿಸುತ್ತದೆ ಮತ್ತು ಯಾತ್ರಾರ್ಥಿಗಳಿಗೆ ವೇಗದ ಪ್ರಯಾಣವನ್ನು ಒದಗಿಸುತ್ತದೆ. ಇದರಿಂದ ಎರಡು ಗಂಟೆಗೂ ಅಧಿಕ ಪ್ರಯಾಣದ ಅವಧಿ ಕಡಿಮೆಯಾಗುವ ಸಾಧ್ಯತೆ ಇದೆ. ತಿರುನಲ್ವೇಲಿ ಜಂಕ್ಷನ್‌ನಿಂದ ಹೊರಟು ವಿರುದುನಗರ, ಮಧುರೈ, ದಿಂಡಿಗಲ್ ಮತ್ತು ತಿರುಚಿರಾಪಳ್ಳಿ ಸೇರಿದಂತೆ ಹಲವಾರು ನಿಲುಗಡೆಗಳೊಂದಿಗೆ ಚೆನ್ನೈ ತಲುಪುತ್ತದೆ.
4. ವಿಜಯವಾಡ - ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ರೈಲು ರೇಣಿಗುಂಟಾ ಮಾರ್ಗವಾಗಿ ತಿರುಪತಿ ಯಾತ್ರಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲಿದೆ. ಇದು ಆಂಧ್ರಪ್ರದೇಶದ ತೆನಾಲಿ, ಒಂಗೋಲ್, ನೆಲ್ಲೂರು ಮತ್ತು ರೇಣಿಗುಂಟಾ ಮೂಲಕ ವಿಜಯವಾಡ ಮತ್ತು ಚೆನ್ನೈ ನಡುವೆ ಕಾರ್ಯನಿರ್ವಹಿಸುತ್ತದೆ.
5. ಪಾಟ್ನಾ - ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್
ಬಿಹಾರದ ಪಾಟ್ನಾ ಜಂಕ್ಷನ್ ಅನ್ನು ಪಶ್ಚಿಮ ಬಂಗಾಳದ ಹೌರಾದೊಂದಿಗೆ ಇದು ಸಂಪರ್ಕಿಸುತ್ತದೆ. ಇದು 532 ಕಿ.ಮೀ ದೂರವನ್ನು 6 ಗಂಟೆ 35 ನಿಮಿಷಗಳಲ್ಲಿ ಕ್ರಮಿಸಲಿದೆ. ಈ ರೈಲು ಪಾಟ್ನಾ ಸಾಹೇಬ್, ಮೊಕಾಮಾ, ಲಕ್ಕಿಸರೈ ಜಂಕ್ಷನ್, ಜಸಿದಿಹ್, ಜಮ್ತಾರಾ, ಅಸನ್ಸೋಲ್ ಮತ್ತು ದುರ್ಗಾಪುರದಲ್ಲಿ ಎರಡು ನಿಮಿಷಗಳ ನಿಲುಗಡೆಯನ್ನು ಹೊಂದಿರುತ್ತದೆ.
6. ಕಾಸರಗೋಡು - ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್
ಕಾಸರಗೋಡು - ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇರಳದ ಎರಡನೇ ವಂದೇ ಭಾರತ್ ರೈಲು ಆಗಲಿದೆ. ಇದು ಸುಮಾರು ಮೂರು ಗಂಟೆಗಳ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಏಳು ಗಂಟೆ 55 ನಿಮಿಷಗಳಲ್ಲಿ 573 ಕಿ.ಮೀ. ದೂರವನ್ನು ಕ್ರಮಿಸಲಿದೆ.
7. ರೂರ್ಕೆಲಾ - ಭುವನೇಶ್ವರ್ - ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ರೈಲು ಒಡಿಶಾದ ಪುರಿಯಿಂದ ಬೆಳಗ್ಗೆ 5 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 12:45 ಕ್ಕೆ ರೂರ್ಕೆಲಾ ತಲುಪಲಿದೆ. ರೈಲು ರೂರ್ಕೆಲಾದಿಂದ ವಾಪಸ್ ಮಧ್ಯಾಹ್ನ 2 ಗಂಟೆಗೆ ಹೊರಟು ರಾತ್ರಿ 9 ಗಂಟೆಗೆ ಪುರಿ ತಲುಪುತ್ತದೆ. ಇದು ಖುರ್ದಾ ರಸ್ತೆ, ಭುವನೇಶ್ವರ, ಕಟಕ್, ಧೆಂಕನಲ್, ಅಂಗುಲ್, ಸಂಬಲ್ಪುರ್ ನಗರ ಮತ್ತು ಝಾರ್ಸುಗುಡದಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ.
8. ರಾಂಚಿ - ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್
ರಾಂಚಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಕಾರ್ಯ ನಿರ್ವಹಿಸುತ್ತದೆ. ಇದು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ರಾಜಧಾನಿ ನಗರಗಳನ್ನು ಸಂಪರ್ಕಿಸುವ ಅತ್ಯಂತ ವೇಗದ ರೈಲು. ಇದು ರಾಂಚಿಯಿಂದ ಬೆಳಗ್ಗೆ 5:15ಕ್ಕೆ ಹೊರಟು ಮಧ್ಯಾಹ್ನ 12:20ಕ್ಕೆ ಹೌರಾ ತಲುಪಲಿದೆ. ಹಿಂದಿರುಗುವ ಪ್ರಯಾಣದಲ್ಲಿ, ರೈಲು ಹೌರಾದಿಂದ ಮಧ್ಯಾಹ್ನ 3:45 ಕ್ಕೆ ಹೊರಡುತ್ತದೆ ಮತ್ತು ಅದೇ ದಿನ ರಾತ್ರಿ 10:50 ಕ್ಕೆ ರಾಂಚಿಬಾತ್ ತಲುಪುತ್ತದೆ. ಇದು ಮುರಿ, ಕೋಟ್ಶಿಲಾ, ಪುರುಲಿಯಾ, ಚಾಂಡಿಲ್, ಟಾಟಾನಗರ ಮತ್ತು ಖರಗ್‌ಪುರದಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ.
9. ಜಾಮ್‌ನಗರ-ಅಹಮದಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್
ಜಾಮ್‌ನಗರ-ಅಹಮದಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಐದು ನಿಲುಗಡೆಗಳೊಂದಿಗೆ 4 ಗಂಟೆ 40 ನಿಮಿಷಗಳಲ್ಲಿ 331 ಕಿಮೀ ಕ್ರಮಿಸುತ್ತದೆ. ಇದು ಜಾಮ್‌ನಗರದಿಂದ 5:30 ಕ್ಕೆ ಹೊರಟು ರಾಜ್‌ಕೋಟ್, ವಂಕನೇರ್, ಸುರೇಂದ್ರನಗರ, ವಿರಾಮ್‌ಗಮ್ ಮತ್ತು ಸಬರಮತಿ ಮೂಲಕ 10:10 ಕ್ಕೆ ಅಹಮದಾಬಾದ್‌ಗೆ ತಲುಪುತ್ತದೆ.












Click it and Unblock the Notifications