ಭಾರತೀಯರಿಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಪ್ರಧಾನಮಂತ್ರಿ!
ನವದೆಹಲಿ, ಮೇ.12: ನೊವೆಲ್ ಕೊರನಾ ವೈರಸ್ ವಿರುದ್ಧ ಹೋರಾಡುತ್ತಿರುವ ಭಾರತೀಯರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಭಾರತದ ಜಿಡಿಪಿಯ ಶೇ.10ರಷ್ಟು ಅನುದಾನ ಇದಾಗಲಿದೆ.
ದೇಶದ ಶ್ರಮಿಕರು, ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರಿಗಾಗಿ ಈ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಘೋಷಣೆ. ಕೇಂದ್ರ ಸರ್ಕಾರ ಘೋಷಿಸಿದ ಪ್ಯಾಕೇಜ್ ನಿಂದ ಬಡವರ ಜೇಬಿಗೆ ನೇರವಾಗಿ ಹಣ ಬೀಳುತ್ತದೆ ಎಂದರು.
ಭಾರತ ಲಾಕ್ ಡೌನ್ ಘೋಷಣೆಯಾದ ಬಳಿಕ 5ನೇ ಬಾರಿಗೆ ದೇಶವನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಿದರು. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭಾರತದ ಯಶಸ್ಸಿನ ಹಾದಿಗೆ ಪ್ರಧಾನಿ ಪಂಚಸೂತ್ರಗಳನ್ನು ನೀಡಿದ್ದಾರೆ. ಅಲ್ಲದೇ ಮೇ.18ರ ನಂತರ ನಾಲ್ಕನೇ ಅವಧಿಯ ಭಾರತ ಲಾಕ್ ಡೌನ್ ಹಾಗೂ ನಿಯಮಗಳ ಬಗ್ಗೆ ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಜನ್ ಧನ್, ಮೊಬೈಲ್, ಆಧಾರ್ ಮೂಲಕ ಹಣ
ಕೊರೊನಾ ವೈರಸ್ ವಿರುದ್ಧ ಹೋರಾಡಲು ಹಲವು ರಾಷ್ಟ್ರಗಳು ವಿಫಲವಾಗಿದೆ. ಭಾರತದಲ್ಲಿ ಘೋಷಣೆಯಾಗಿರುವ ಆರ್ಥಿಕ ಪ್ಯಾಕೇಜ್ ಮುಂದಿನ ದಿನಗಳಲ್ಲಿ ಎಲ್ಲ ವಲಯಗಳಿಗೆ ಪೂರಕವಾಗಲಿದೆ. ಜನ್ ಧನ್, ಆಧಾರ್ ಹಾಗೂ ಮೊಬೈಲ್ ಮೂಲಕ ನೇರವಾಗಿ ಜನರ ಖಾತೆಗೆ ಹಣ ಬೀಳಲಿದೆ ಎಂದು ಮೋದಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಪಂಚಸ್ತಂಭ ಸೂತ್ರ
ಆರ್ಥಕತೆ, ಮೂಲಸೌಕರ್ಯ, ನಮ್ಮ ವ್ಯವಸ್ಥೆ, ತಂತ್ರಜ್ಞಾನ ಆಧಾರಿತ ವ್ಯವಸ್ಥೆ, ಜನಸಂಖ್ಯೆ ಹಾಗೂ ಕೊನೆಯದಾಗಿ ಬೇಡಿಕೆ ಪಂಚಸ್ತಂಭಗಳಾಗಿವೆ. ದೇಶದಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯ ಸರಪಳಿ ನಿರಂತರವಾಗಿ ಇರಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಸ್ವಾವಲಂಬನೆ ಪಾಠ ಮಾಡಿದ ಪ್ರಧಾನಿ ಮೋದಿ
ಕೊರೊನಾ ವೈರಸ್ ಸೋಂಕು ಮೊದಲು ಕಾಣಿಸಿಕೊಂಡಿದ್ದಾಗ ಭಾರತದಲ್ಲಿ ಎನ್-95 ಮಾಸ್ಕ್ ಗಳಿಗೆ ಬೇಡಿಕೆ ಹೆಚ್ಚಾಯಿತು. ಭಾರತದಲ್ಲಿ ಇಂದು ಪ್ರತಿನಿತ್ಯ 2 ಲಕ್ಷ ಪಿಪಿಇ ಕಿಟ್ ಹಾಗೂ ಎನ್-95 ಮಾಸ್ಕ್ ಗಳನ್ನು ತಯಾರಿಸಲಾಗುತ್ತಿದೆ. ಆರ್ಥಿಕ ಅವಲಂಬನೆ ಬಿಟ್ಟು, ಮಾನವೀಯತೆಗೆ ಆದ್ಯತೆ ಸಿಗುತ್ತಿದೆ. ಭಾರತದ ವಸುದೈವ ಕುಟುಂಬಕಂ ಎಂಬುದು ಎಲ್ಲರ ಮಂತ್ರವಾಗಿದೆ. ಗುಲಾಮಿ ಮನಸ್ಥಿತಿಯಿಂದ ಹೊರ ಬಂದ ಭಾರತವು ಇಂದು ಅಭಿವೃದ್ಧಿ ಪಥದಲ್ಲಿ ಸಾಗಲು ಹಾತೊರೆಯುತ್ತಿದೆ ಎಂದು ಮೋದಿ ಹೇಳಿದರು.

ಲೋಕಲ್ To ಗ್ಲೋಬಲ್ ಗುಟ್ಟು ಬಿಚ್ಚಿಟ್ಟ ಮೋದಿ
ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಕ್ರಿಯೇಟ್ ಮಾಡಿರುವ ಗ್ಲೋಬಲ್ ಬ್ರಾಂಡ್ ಗಳೆಲ್ಲವೂ ಆರಂಭಿಕ ಹಂತದಲ್ಲಿ ಲೋಕಲ್ ಆಗಿದ್ದವು. ಭಾರತದಲ್ಲಿ ಕೂಡಾ ಸ್ವದೇಶಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ 20 ಲಕ್ಷ ಕೋಟಿ ಪ್ಯಾಕೇಜ್ ನಲ್ಲಿ ಕಾರ್ಮಿಕರು, ರೈತರು, ಶ್ರಮಿಕರು, ಸಣ್ಣ ಉದ್ದಿಮೆಗಳಿಗೆ ನೆರವಾಗಲಿದೆ. ಸಂಘಟಿತ ಮತ್ತು ಅಸಂಘಟಿತ ವಲಯಗಳಿಗೆಲ್ಲ ಆರ್ಥಿಕ ಪ್ಯಾಕೇಜ್ ಪೂರಕವಾಗಲಿದೆ. ಬಡವರು, ಕಾರ್ಮಿಕರು, ವಲಸೆ ಕಾರ್ಮಿಕರು ಹೀಗೆ ಎಲ್ಲ ವರ್ಗದವರಿಗೂ ಸಿಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.












Click it and Unblock the Notifications