ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷಗಳಿಂದ ಒಬ್ಬ ಸಾಮಾನ್ಯ ಅಭ್ಯರ್ಥಿ ಕಣಕ್ಕೆ
ನವದೆಹಲಿ, ಜೂನ್ 15: ಭಾರತದ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿ ಯಾರು? ಎನ್ನುವುದರ ಕುರಿತು ಚರ್ಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು.
ದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್ ಆಫ್ ಇಂಡಿಯಾದಲ್ಲಿ ಬುಧವಾರ ಈ ಸಭೆ ನಡೆಸಲಾಯಿತು. ರಾಷ್ಟ್ರಪತಿ ಚುನಾವಣೆಗೆ ನಾಮನಿರ್ದೇಶಿತರಾಗಿ ಶರದ್ ಪವಾರ್ ಹೆಸರನ್ನು ಮತ್ತೆ ಪ್ರಸ್ತಾಪಿಸಲಾಯಿತು, ಆದರೆ ಎನ್‌ಸಿಪಿ ಮುಖ್ಯಸ್ಥರು ಈ ಪ್ರಸ್ತಾಪವನ್ನು ನಿರಾಕರಿಸಿದರು.
"ಇಂದು ಹಲವು ಪಕ್ಷಗಳ ನಾಯಕರು ಇಲ್ಲಿ ಸೇರಿದ್ದೇವೆ. ನಾವೆಲ್ಲರೂ ಒಟ್ಟಾಗಿ ಸೇರಿಕೊಂಡು ಒಮ್ಮತದಿಂದ ಒಂದು ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧರಿಸಿದ್ದೇವೆ. ಈ ಅಭ್ಯರ್ಥಿಗೆ ಎಲ್ಲರೂ ಬೆಂಬಲ ನೀಡಲಿದ್ದಾರೆ. ನಾವು ಇತರರೊಂದಿಗೆ ಸಮಾಲೋಚಿಸುತ್ತಿದ್ದು, ಇದೊಂದು ಉತ್ತಮ ಆರಂಭವಾಗಿದೆ. ಹಲವಾರು ತಿಂಗಳ ನಂತರ ನಾವೆಲ್ಲರೂ ಸೇರಿದ್ದೇವೆ," ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ಹೆಸರು; ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿ ಆಗಿ ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ಹೆಸರನ್ನು ಮಮತಾ ಬ್ಯಾನರ್ಜಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಸಿಪಿಐಎಂಎಲ್, ಆರ್‌ಎಸ್‌ಪಿ, ಶಿವಸೇನೆ, ಎನ್‌ಸಿಪಿ, ಆರ್‌ಜೆಡಿ, ಎಸ್‌ಪಿ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಜೆಡಿ(ಎಸ್), ಡಿಎಂಕೆ, ಆರ್‌ಎಲ್‌ಡಿ, ಐಯುಎಂಎಲ್ ಮತ್ತು ಜೆಎಂಎಂ ಸೇರಿದಂತೆ ಒಟ್ಟು 16 ಪಕ್ಷಗಳ ನಾಯಕರು ಬುಧವಾರದ ಸಭೆಯಲ್ಲಿ ಹಾಜರಾಗಿದ್ದರು.
22 ಪ್ರತಿಪಕ್ಷಗಳ ನಾಯಕರಿಗೆ ಮಮತಾ ಪತ್ರ: ಕಳೆದ ವಾರ ಜೂನ್ 15ರಂದು ನವದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್‌ನಲ್ಲಿ ನಡೆಯಲಿರುವ ಸಭೆಗೆ ಹಾಜರಾಗುವಂತೆ 22 ಪ್ರತಿಪಕ್ಷ ನಾಯಕರು ಮತ್ತು ಮುಖ್ಯಮಂತ್ರಿಗಳಿಗೆ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.
ಬುಧವಾರದ ಸಭೆಗೆ ಗೈರು ಆದವರು ಯಾರು?: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಬುಧವಾರದ ಸಭೆಯಿಂದ ಹೊರಗುಳಿದಿತ್ತು. ಟಿಆರ್‌ಎಸ್ ಕಾಂಗ್ರೆಸ್ ಜೊತೆ ವೇದಿಕೆ ಹಂಚಿಕೊಳ್ಳಲು ಬಯಸುವುದಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಇದರ ಮಧ್ಯೆ, "ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿದ ನಂತರವೇ ಈ ವಿಷಯವನ್ನು ಪರಿಗಣಿಸಲಾಗುವುದು" ಎಂದು ಎಎಪಿ ಹೇಳಿದೆ.












Click it and Unblock the Notifications