Mann Ki Baat: ಸ್ಥೂಲಕಾಯದ ಬಗ್ಗೆ ಮೋದಿ ಮನ್ ಕೀ ಬಾತ್‌ನಲ್ಲಿ ಡಾ. ದೇವಿ ಶೆಟ್ಟಿ ಮಾತು
ಬೆಂಗಳೂರು, ಫೆಬ್ರವರಿ 23: ಭಾರತದ ಪ್ರಧಾನಿ ನರೇಂದ್ರ ಮೋದಿ 'ಮನ್ ಕಿ ಬಾತ್' ತಿಂಗಳ ರೆಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಹಲವು ವಿಚಾರಗಳನ್ನು ಮೋದಿ ತಮ್ಮ ಕಾರ್ಯಕ್ರಮದ ಮೂಲಕ ದೇಶವಾಸಿಗಳ ಜೊತೆ ಹಂಚಿಕೊಂಡರು. ಇದು 'ಮನ್ ಕಿ ಬಾತ್' ಸರಣಿಯ 119ನೇ ಸಂಚಿಕೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡಿಗ, ಖ್ಯಾತ ವೈದ್ಯ ಡಾ. ದೇವಿ ಶೆಟ್ಟಿಯವರು ಸಹ ಸ್ಥೂಲಕಾಯದ ಬಗ್ಗೆ ಮಾತನಾಡಿದರು.
ನರೇಂದ್ರ ಮೋದಿ ನನ್ನ ಪ್ರೀತಿಯ ದೇಶವಾಸಿಗಳೇ ನಮಸ್ಕಾರ, 'ಮನದ ಮಾತಿಗೆ' ನಿಮೆಲ್ಲರಿಗೂ ಸ್ವಾಗತ ಎಂದು ಭಾಷಣ ಆರಂಭಿಸಿದರು. ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದೆ ಮತ್ತು ಎಲ್ಲೆಡೆ ಕ್ರಿಕೆಟ್ ವಾತಾವರಣವಿದೆ. ಕ್ರಿಕೆಟ್‌ನಲ್ಲಿ ಶತಕದ ರೋಮಾಂಚನ ಏನೆಂದು ನಮ್ಮೆಲ್ಲರಿಗೂ ಚೆನ್ನಾಗಿ ತಿಳಿದಿದೆ, ಆದರೆ ಇಂದು ನಾನು ನಿಮ್ಮೊಂದಿಗೆ ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ ಎಂದರು.

ಪ್ರೀತಿಯ ದೇಶವಾಸಿಗಳೇ, ಡೆಹರಾಡೂನ್‌ನಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನೆಯ ಸಂದರ್ಭದಲ್ಲಿ ನಾನು ಒಂದು ಮುಖ್ಯವಾದ ವಿಷಯ ಕುರಿತು ಮಾತನಾಡಿದೆ ಮತ್ತು ಅದು ದೇಶದಲ್ಲಿ ಒಂದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಆ ವಿಷಯವೇ ಬೊಜ್ಜು ಅಥವಾ ಸ್ಥೂಲಕಾಯ. ಒಂದು ಆರೋಗ್ಯಪೂರ್ಣ ಮತ್ತು ಸದೃಢ ದೇಶದ ನಿರ್ಮಾಣಕ್ಕಾಗಿ ನಾವು ಸ್ಥೂಲಕಾಯತೆಯ ಸಮಸ್ಯೆಯನ್ನು ಎದುರಿಸಬೇಕು. ಒಂದು ಅಧ್ಯಯನದ ಪ್ರಕಾರ ಇಂದು ಪ್ರತಿ ಎಂಟು ಮಂದಿಯಲ್ಲಿ ಓರ್ವ ವ್ಯಕ್ತಿ ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.
ಕಳೆದ ವರ್ಷಗಳಲ್ಲಿ ಸ್ಥೂಲಕಾಯದ ಸಮಸ್ಯೆ ಎರಡುಪಟ್ಟು ಹೆಚ್ಚಾಗಿದೆ, ಆದರೆ, ಇದಕ್ಕಿಂತ ಹೆಚ್ಚು ಚಿಂತಿಸಬೇಕಾದ ವಿಷಯವೆಂದರೆ ಈ ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯು ನಾಲ್ಕುಪಟ್ಟು ಅಧಿಕವಾಗಿದೆ. 2022ರಲ್ಲಿ ವಿಶ್ವಾದ್ಯಂತ ಸುಮಾರು 250 ಕೋಟಿ ಜನರು ಅಧಿಕ ತೂಕ ಹೊಂದಿದವರಾಗಿದ್ದರು ಅಂದರೆ ಅಗತ್ಯಕ್ಕಿಂತ ಅತಿ ಹೆಚ್ಚು ದೇಹದ ತೂಕ ಹೊಂದಿದ್ದರು ಎಂದು ವಿಶ್ವ ಆರೋಗ್ಯ ಸಂಘಟನೆ ದತ್ತಾಂಶ ಹೇಳುತ್ತದೆ. ಈ ಸಂಖ್ಯೆಯು ನಿಜಕ್ಕೂ ಬಹಳ ಗಂಭೀರ ವಿಷಯವಾಗಿದೆ ಮತ್ತು ಈ ರೀತಿ ಏಕಾಯಿತೆಂದು ನಮ್ಮೆಲ್ಲರನ್ನೂ ಯೋಚಿಸುವಂತೆ ಮಾಡುತ್ತದೆ ಎಂದು ತಿಳಿಸಿದರು.
ಅಧಿಕ ತೂಕ ಅಥವಾ ಸ್ಥೂಲಕಾಯ ಅನೇಕ ಸಮಸ್ಯೆಗಳಿಗೆ, ತೊಂದರೆಗಳಿಗೆ ಕಾರಣವಾಗುತ್ತದೆ. ನಾವೆಲ್ಲರೂ ಒಟ್ಟಾಗಿ, ಸಣ್ಣ ಸಣ್ಣ ಪ್ರಯತ್ನಗಳಿಂದ ಈ ಸವಾಲನ್ನು ಎದುರಿಸಬಹುದು, ಇದಕ್ಕಾಗಿ ನಾನು ಸೂಚಿಸಿದ ಒಂದು ವಿಧಾನವೆಂದರೆ ಅಡಿಗೆಗೆ ಎಣ್ಣೆಯ ಬಳಕೆಯನ್ನು ಶೇಕಡಾ 10ರಷ್ಟು ಕಡಿಮೆ ಮಾಡುವುದು ಪ್ರತಿ ತಿಂಗಳೂ ಅಡಿಗೆಗಾಗಿ ಬಳಸುವ ಎಣ್ಣೆಯಲ್ಲಿ ಶೇಕಡಾ 10 ರಷ್ಟು ಕಡಿಮೆ ಮಾಡುತ್ತೇವೆಂದು ನೀವೆಲ್ಲರೂ ನಿರ್ಧಾರ ಮಾಡಿ. ಅಡಿಗೆಗಾಗಿ ಖರೀದಿಸುವ ಎಣ್ಣೆಯನ್ನು ಖರೀದಿಸುವ ಸಮಯದಲ್ಲಿಯೇ ಶೇಕಡಾ ಹತ್ತರಷ್ಟು ಕಡಿಮೆ ಖರೀದಿಸುತ್ತೇವೆಂದು ನಿರ್ಧರಿಸಬಹುದು.
ಡಾ. ದೇವಿ ಶೆಟ್ಟಿಯವರ ಮಾತು: ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಲಿದೆ. ನಾನು ಇಂದು ಮನ್ ಕಿ ಬಾತ್ ನಲ್ಲಿ ಈ ವಿಷಯ ಕುರಿತಂತೆ ಕೆಲವು ವಿಶೇಷ ಸಂದೇಶಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಬಯಸುತ್ತೇನೆ ಎಂದರು. ಬಳಿಕ ಮೋದಿ ಈಗ ಡಾ. ದೇವಿ ಶೆಟ್ಟಿಯವರು ಏನು ಹೇಳುತ್ತಾರೆ? ಎಂಬುದನ್ನು ಕೇಳೋಣ ಎಂದರು.
ಡಾ. ದೇವಿ ಶೆಟ್ಟಿ ಅವರು, 'ಪ್ರಧಾನ ಮಂತ್ರಿಗಳೇ ಅತ್ಯಂತ ಜನಪ್ರಿಯವಾದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯದ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಸ್ಥೂಲಕಾಯತೆ ಇಂದು ಸೌಂದರ್ಯವರ್ಧಕ ಸಮಸ್ಯೆಯಲ್ಲ. ಇದೊಂದು ತುಂಬಾ ಗಂಭೀರವಾದ ವೈದ್ಯಕೀಯ ಸಮಸ್ಯೆಯಾಗಿದೆ. ಇಂದು ಭಾರತದಲ್ಲಿ ಹೆಚ್ಚಿನ ಯುವಕರು ಬೊಜ್ಜು ಹೊಂದಿದ್ದಾರೆ' ಎಂದು ಹೇಳಿದರು.
'ಇಂದು ಸ್ಥೂಲಕಾಯಕ್ಕೆ ಮುಖ್ಯ ಕಾರಣವೆಂದರೆ ಕಳಪೆ ಗುಣಮಟ್ಟದ ಆಹಾರ ಸೇವನೆ, ಅದರಲ್ಲೂ ವಿಶೇಷವಾಗಿ ಅಕ್ಕಿ, ಚಪಾತಿ ಮತ್ತು ಸಕ್ಕರೆಯಂತಹ ಕಾರ್ಬೋಹೈಡ್ರೇಟ್‌ಗಳ ಹೆಚ್ಚಿನ ಸೇವನೆ ಮತ್ತು ಎಣ್ಣೆಯ ಹೆಚ್ಚಿನ ಬಳಕೆ. ಸ್ಥೂಲಕಾಯವು ಹೃದ್ರೋಗ, ಅಧಿಕ ರಕ್ತದೊತ್ತಡ, ಕೊಬ್ಬಿನ ಯಕೃತ್ತು ಮತ್ತು ಇತರ ಅನೇಕ ಸಮಸ್ಯೆಗಳಂತಹ ಪ್ರಮುಖ ವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗುತ್ತದೆ' ಎಂದು ವಿವರಣೆ ನೀಡಿದರು.
'ಆದ್ದರಿಂದ ಎಲ್ಲಾ ಯುವಕರಿಗೆ ನನ್ನ ಸಲಹೆಯೆಂದರೆ ವ್ಯಾಯಾಮವನ್ನು ಪ್ರಾರಂಭಿಸಿ, ನಿಮ್ಮ ಆಹಾರಕ್ರಮವನ್ನು ನಿಯಂತ್ರಿಸಿ ಮತ್ತು ಇದರ ಬಗ್ಗೆ ತುಂಬಾ ಸಕ್ರಿಯರಾಗಿದ್ದು ನಿಮ್ಮ ತೂಕವನ್ನು ಗಮನಿಸುತ್ತಿರಿ. ಮತ್ತೊಮ್ಮೆ ನಾನು ನಿಮ್ಮೆಲ್ಲರಿಗೂ ತುಂಬಾ ಸಂತೋಷದ ಆರೋಗ್ಯಕರ ಭವಿಷ್ಯವನ್ನು ಬಯಸುತ್ತೇನೆ, ಶುಭವಾಗಲಿ ಮತ್ತು ದೇವರು ಆಶೀರ್ವದಿಸಲಿ' ಎಂದು ಹೇಳಿದರು.
ಬಳಿಕ ಮಾತು ಮುಂದುವರೆಸಿದ ಮೋದಿ, 'ಆಹಾರದಲ್ಲಿ ಕಡಿಮೆ ಎಣ್ಣೆಯನ್ನು ಬಳಸುವುದು ಮತ್ತು ಸ್ಥೂಲಕಾಯತೆಯನ್ನು ನಿಭಾಯಿಸುವುದು ವೈಯಕ್ತಿಕ ಆಯ್ಕೆ ಮಾತ್ರವಲ್ಲ, ಕುಟುಂಬದ ಬಗ್ಗೆ ನಮ್ಮ ಜವಾಬ್ದಾರಿಯೂ ಆಗಿದೆ. ಆಹಾರದಲ್ಲಿ ಎಣ್ಣೆಯನ್ನು ಅತಿಯಾಗಿ ಬಳಸುವುದರಿಂದ ಹೃದ್ರೋಗ, ಮಧುಮೇಹ ಮತ್ತು ಹೈಪರ್ ಟೆನ್ಶನ್‌ನಂತಹ ಅನೇಕ ಕಾಯಿಲೆಗಳು ಉಂಟಾಗಬಹುದು. ನಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡುವುದರಿಂದ, ನಾವು ನಮ್ಮ ಭವಿಷ್ಯವನ್ನು ಸಬಲ, ಸದೃಢವಾಗಿ ಮತ್ತು ರೋಗಮುಕ್ತವಾಗಿ ಮಾಡಬಹುದು' ಎಂದು ಕರೆ ನೀಡಿದರು.












Click it and Unblock the Notifications