Kargil Vijay Diwas 2024: ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ನವದೆಹಲಿ, ಜುಲೈ 26: ಇಂದು 25ನೇ ವರ್ಷದ ಕಾರ್ಗಿಲ್ ವಿಜಯ ದಿವಸವಾಗಿದ್ದು ದೇಶದಾದ್ಯಂತ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ. ಇಂದು ನಮ್ಮ ದೇಶ ಭಕ್ತಿಯನ್ನು ಪ್ರದರ್ಶಿಸುವ ಮತ್ತು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರನ್ನು ಸ್ಮರಿಸುವ ದಿನವಾಗಿದೆ.
ಕಾರ್ಗಿಲ್ ವಿಜಯೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ದ್ರಾಸ್ನಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ದೇಶಕ್ಕಾಗಿ ಹುತಾತ್ಮರಾದ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಿ ಪ್ರಧಾನಿ ಮೋದಿ ಯೋಧರ ತ್ಯಾಗ ಬಲಿದಾನ ಸ್ಮರಿಸಿದರು. ಬಳಿಕ ಕಾರ್ಗಿಲ್ ಯೋಧರ ಕುಟುಂಬಸ್ಥರನ್ನು ಪ್ರಧಾನಿ ಭೇಟಿಯಾಗಿದ್ದಾರೆ. ಈ ವೇಳೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮುಖ್ಯ ಅತಿಥಿಯಾಗಿದ್ದರು. ಹಾಗೂ ಸೇನೆಯ ಉತ್ತರ ಕಮಾಂಡ್‌ನ ಎಲ್ಲಾ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

1999 ಜುಲೈ 26ರಂದು ಭಾರತೀಯ ಸೈನಿಕರು ಅಪರೇಶನ್ ವಿಜಯ್ ಮೂಲಕ ಕಾರ್ಗಿಲ್-ಡ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸಲಾಗುತ್ತದೆ. ಪಾಕಿಸ್ತಾನದ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿ ಇಂದಿಗೆ 25 ವರ್ಷ ತುಂಬಿದೆ. ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ದೇಶವು ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತದೆ.
ಈ ವಿಶೇಷ ದಿನದಂದು ದ್ರಾಸ್ನಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ 1999ರ ಕಾರ್ಗಿಲ್ ಯುದ್ಧವನ್ನು ನೆನಪಿಸಿಕೊಂಡರು. ಕಾರ್ಗಿಲ್‌ನಲ್ಲಿ ನಾವು ಯುದ್ಧವನ್ನು ಗೆದ್ದಿದ್ದೇವೆ ಮಾತ್ರವಲ್ಲ, ಸತ್ಯ, ಸಂಯಮ ಮತ್ತು ಶಕ್ತಿಯ ಅದ್ಭುತ ಪ್ರದರ್ಶನವನ್ನೂ ನೀಡಿದ್ದೇವೆ. ಆ ಸಮಯದಲ್ಲಿ ಭಾರತ ಶಾಂತಿಗಾಗಿ ಪ್ರಯತ್ನಿಸುತ್ತಿತ್ತು ಎಂಬುದು ತಿಳಿದಿದೆ. ಪಾಕಿಸ್ತಾನ ಏನೇ ಪ್ರಯತ್ನ ಮಾಡಿದರೂ ಸೋಲನ್ನು ಎದುರಿಸಬೇಕಾಯಿತು. ಕೇವಲ ನಾವು ಯುದ್ಧ ಗೆದ್ದಿಲ್ಲ, ಸತ್ಯ, ಸಂಯಮ, ಹಾಗೂ ಸಾಮರ್ಥ್ಯದ ಅದ್ಭುತ ಪರಿಚಯವನ್ನು ವಿರೋಧಿಗಳಿಗೆ ಮಾಡಿಕೊಟ್ಟಿದ್ದೇವೆ. ಪಾಕಿಸ್ತಾನ ನಮ್ಮಿಂದ ಎಷ್ಟೇ ಪೆಟ್ಟು ತಿಂದಿದ್ದರೂ ಇನ್ನೂ ಬುದ್ಧಿ ಕಲಿತಿಲ್ಲ ಎಂದರು.

ಈ ವಿಶೇಷ ದಿನದಂದು ಪ್ರಧಾನಿ ನರೇಂದ್ರ ಮೋದಿ ಲಡಾಖ್ನಲ್ಲಿ ವಿಶ್ವದ ಅತಿ ಎತ್ತರದ ಸುರಂಗ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಸರ್ವಋತುವಿನಲ್ಲಿ ಪರ್ಯಾಯ ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ ಮತ್ತು ಲಡಾಖ್ ಗೆ ಮಿಲಿಟರಿ ಪಡೆ ಕ್ಷಿಪ್ರವಾಗಿ ತೆರಳಲು ಅನುಕೂಲವಾಗುವಂತೆ ಅತ್ಯಂತ ಆಯಕಟ್ಟಿನ ಹಾಗೂ ಪ್ರಮುಖ ಎನಿಸಿದ ಶಿಂಕೂಲ್ ಲಾ ಸುರಂಗಕ್ಕೆ ಮೋದಿ ವರ್ಚುವಲ್ ಚಾಲನೆ ನೀಡಿದ್ದಾರೆ.












Click it and Unblock the Notifications