ಜಗತ್ತಿನಲ್ಲಿ ಭಾರತೀಯ ಕೊರೊನಾ ಲಸಿಕೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!
ನವದೆಹಲಿ, ಜನವರಿ.28: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟ ಮುಂದುವರಿದಿದೆ. ಭಾರತದಲ್ಲಿ ಉತ್ಪಾದಿಸಲಾಗಿರುವ ಎರಡು ಕೊವಿಡ್-19 ಲಸಿಕೆಗಳು ವಿಶ್ವದಲ್ಲೇ ಅತಿಹೆಚ್ಚು ಪ್ರಭಾವಶಾಲಿ ಎನಿಸಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಗುರುವಾರ ದಾವೋಸ್ ನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಉತ್ಪಾದನೆಯಾಗಲಿರುವ ಮತ್ತಷ್ಟು ಕೊರೊನಾವೈರಸ್ ಲಸಿಕೆಗಾಗಿ ಇಡೀ ಜಗತ್ತು ಎದುರು ನೋಡುತ್ತಿದೆ ಎಂದು ಹೇಳಿದರು.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನಿಕಾ ಸಂಶೋಧಿಸಿರುವ ಮತ್ತು ಮಹಾರಾಷ್ಟ್ರ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ನಲ್ಲಿ ಉತ್ಪಾದನೆ ಆಗಿರುವ ಕೊವಿಶೀಲ್ಡ್ ಲಸಿಕೆ(Made In India)ಯನ್ನು ಇದುವರೆಗೂ 150ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಕಳುಹಿಸಿ ಕೊಡಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು "Made In India" ಕೊರೊನಾ ಲಸಿಕೆಗಳನ್ನು ಉತ್ಪಾದಿಸಲಾಗುತ್ತದೆ ಎಂದು ತಿಳಿಸಿದರು.

ಬೆಚ್ಚಿ ಬೀಳಿಸುವ ಅಂಕಿ-ಅಂಶ ನೀಡಿದ್ದ ತಜ್ಞರು
ಜಗತ್ತಿನಾದ್ಯಂತ 2020ರ ಆರಂಭದಲ್ಲಿ ಕೊರೊನಾವೈರಸ್ ಅಟ್ಟಹಾಸ ಆರಂಭವಾಯಿತು. ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾಗಿರುವ ಭಾರತವು ಸಾಂಕ್ರಾಮಿಕ ಪಿಡುಗಿನಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸಾಂಕ್ರಾಮಿಕ ರೋಗ ತಜ್ಞರು ಎಚ್ಚರಿಕೆ ನೀಡಿದ್ದರು. ಭಾರತವೊಂದರಲ್ಲೇ ಸರಿಸುಮಾರು 70 ರಿಂದ 80 ಕೋಟಿ ಜನರಿಗೆ ಕೊವಿಡ್-19 ಸೋಂಕು ತಗುಲುವ ಅಪಾಯವಿದೆ ಎಂದು ಎಚ್ಚರಿಸಿದ್ದರು. ಆದರೆ ಇಂದು ಭಾರತದಲ್ಲಿನ ಬೆಳವಣಿಗೆಗಳನ್ನು ನೋಡಿ. ಇಂದು ಜಗತ್ತಿಗೆ ಭಾರತವು ಮಾದರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನೆರೆಹೊರೆ ದೇಶಗಳಿಗೂ ನೆರವು ನೀಡಿದ ಭಾರತ
"ವಿಶ್ವದಲ್ಲಿರುವ ಒಟ್ಟು ಜನಸಂಖ್ಯೆಯ ಪೈಕಿ ಶೇ.18ರಷ್ಟು ಜನಸಂಖ್ಯೆಯನ್ನು ಭಾರತವೊಂದೇ ಹೊಂದಿದೆ. ಸಾಂಕ್ರಾಮಿಕ ಪಿಡುಗಿನಿಂದ ಜನರು ಆತಂಕದಲ್ಲಿರುವ ಸಂದರ್ಭದಲ್ಲಿ ಭಾರತವು ಕೇವಲ ತನ್ನ ಪ್ರಜೆಗಳ ಮಟ್ಟಿಗಷ್ಟೇ ಯೋಚಿಸಲಿಲ್ಲ. ಬದಲಿಗೆ ನೆರೆಹೊರೆ ರಾಷ್ಟ್ರಗಳಿಗೂ ನೆರವು ನೀಡುವ ಕೆಲಸವನ್ನು ಮಾಡಿತು. ಪಿಪಿಇ ಕಿಟ್ ಮತ್ತು ಮಾಸ್ಕ್ ಗಳನ್ನು ಭಾರತದಿಂದ ಅಕ್ಕಪಕ್ಕದ ರಾಷ್ಟ್ರಗಳಿಗೆ ರವಾನಿಸಲಾಗಿತ್ತು" ಎಂದು ಮೋದಿ ಹೇಳಿದ್ದಾರೆ.

ಗುರಿ ಸಾಧಿಸುವತ್ತ ಭಾರತದ ಮಹತ್ವದ ಹೆಜ್ಜೆ
ಕಳೆದ ಜನವರಿ.16ರಂದು ಮೊದಲ ಬಾರಿಗೆ ಕೊರೊನಾವೈರಸ್ ಲಸಿಕೆ ನೀಡುವ ಅಭಿಯಾನವನ್ನು ಆರಂಭಿಸಲಾಯಿತು. ಅದಾಗಿ 12 ದಿನಗಳಲ್ಲಿ ದೇಶಾದ್ಯಂತ 23,28,779 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ನಾವು ಅಂದುಕೊಂಡಂತೆ ಇನ್ನು ಕೆಲವೇ ದಿನಗಳಲ್ಲಿ 30 ಕೋಟಿ ಭಾರತೀಯರಿಗೆ ಕೊವಿಡ್-19 ಲಸಿಕೆಯನ್ನು ನೀಡಲಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ದೇಶದ ಆರ್ಥಿಕತೆಗೆ ಹೊಡೆತ ಬೀಳದಂತೆ ಕ್ರಮ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ ಭಾರತ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಹಲವು ಹಂತಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಿದ ಹೊರತಾಗಿ ದೇಶದ ಆರ್ಥಿಕತೆಗೆ ಮತ್ತು ಸಾಮಾನ್ಯರ ಜೀವನದ ಮೇಲೆ ದುಷ್ಪರಿಣಾಮ ಬೀರದ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಆತ್ಮನಿರ್ಭರ್ ಭಾರತ ಅಡಿಯಲ್ಲಿ ಕೇಂದ್ರ ಸರ್ಕಾರವು ಆಹಾರ ಪೂರೈಕೆ, ಮೂಲಭೂತ ಸೌಕರ್ಯ ಹಾಗೂ ಉದ್ಯೋಗ ಸೃಷ್ಟಿಸುವ ಕಾರ್ಯವನ್ನು ಮಾಡಿತು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ದೇಶದಲ್ಲಿ ಕೊವಿಡ್-19 ಪ್ರಕರಣಗಳ ಅಂಕಿ-ಸಂಖ್ಯೆ
ಭಾರತದಲ್ಲಿ 24 ಗಂಟೆಗಳಲ್ಲಿ ಕೇವಲ 11,666 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, 14301 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಒಂದು ದಿನದಲ್ಲಿ 123 ಮಂದಿ ಕೊವಿಡ್-19 ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,53,847ಕ್ಕೆ ಏರಿಕೆಯಾಗಿದೆ. ಗುರುವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,07,01,193ಕ್ಕೆ ಏರಿಕೆಯಾಗಿದೆ. ಈವರೆಗೆ 1,03,73,606 ಸೋಂಕಿತರು ಗುಣಮುಖರಾಗಿದ್ದು, 1,73,740 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications