Jharkhand Election: ಪ್ರಧಾನಿ ನರೇಂದ್ರ ಮೋದಿ ವಿಮಾನದಲ್ಲಿ ತಾಂತ್ರಿಕ ದೋಷ; ಹಾರಾಟ ವಿಳಂಬ
ಜಾರ್ಖಂಡ್‌ನ ದಿಯೋಘರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಟೇಕ್ ಆಫ್ ಆಗುವುದು ತಡವಾಗಿದೆ. ತಾಂತ್ರಿಕ ದೋಷವನ್ನು ಸರಿಪಡಿಸುವವರೆಗೆ ವಿಮಾನವು ದಿಯೋಘರ್ ವಿಮಾನ ನಿಲ್ದಾಣದಲ್ಲೇ ಇರಬೇಕಾಗಿದ್ದು, ಇದರಿಂದ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ತೆರಳುವುದು ತಡವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಜಾರ್ಖಂಡ್‌ಗೆ ಭೇಟಿ ನೀಡಿದ್ದರು. ಬುಡಕಟ್ಟು ಜನಾಂಗದ ನಾಯಕ ಬಿರ್ಸಾ ಮುಂಡಾ ಜನ್ಮ ವಾರ್ಷಿಕೋತ್ಸವವನ್ನು ಜನಜಾತಿಯ ಗೌರವ್ ದಿವಸ್ ಎಂದು ಆಚರಣೆ ಮಾಡಲಾಗುತ್ತದೆ, ಇದರ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ನವೆಂಬರ್ 20 ರಂದು ಎರಡನೇ ಹಂತದಲ್ಲಿ ವಿಧಾನಸಭಾ ಚುನಾವಣೆ ಕೂಡ ಇರುವುದರಿಂದ ಬಿಜೆಪಿ ಆಯೋಜಿಸಿದ್ದ ಚುನಾವಣಾ ರ್‍ಯಾಲಿಯಲ್ಲಿ ಕೂಡ ಪ್ರಧಾನಿ ಮೋದಿ ಭಾಗವಹಿಸಿದ್ದರು.

ವಿಮಾನದಲ್ಲಿ ತಾಂತ್ರಿಕ ದೋಷ ಏನೆಂದು ಪರಿಶೀಲನೆ ಮಾಡಲಾಗುತ್ತಿದ್ದು, ಎಲ್ಲ ಸರಿಯಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಟೇಕಾಫ್ ಆಗಲು ಅನುಮತಿ ಸಿಗಲಿದೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಈಗಾಗಲೇ ಮುಕ್ತಾಯವಾಗಿದೆ. ನವೆಂಬರ್ 13 ರಂದು 43 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯವಾಗಿದೆ. ಎರಡನೇ ಹಂತದಲ್ಲಿ 38 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ರಾಹುಲ್ ಗಾಂಧಿ ಹೆಲಿಕಾಪ್ಟರ್ ಹಾರಾಟ ವಿಳಂಬ
ದಿಯೋಘರ್ ನಿಂದ 80 ಕಿ.ಮೀ. ದೂರದಲ್ಲಿರುವ ಗೊಡ್ಡಾದಲ್ಲಿ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಹಾರಾಟ ನಡೆಸಲು ಸುಮಾರು 45 ನಿಮಿಷ ವಿಳಂಬ ಮಾಡಲಾಗಿದೆ. ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ಅನುಮತಿ ಸಿಗದ ಕಾರಣ ಸುಮಾರು 45 ನಿಮಿಷ ಕಾಯಬೇಕಾದ ಪರಿಸ್ಥಿತಿ ಉಂಟಾಯಿತು. ಇದರಿಂದ ರಾಹುಲ್ ಗಾಂಧಿ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು.
ಕೆಲವು ದಿನಗಳ ಹಿಂದೆ ಕೂಡ ಪ್ರಧಾನಿ ಮೋದಿ ಆಗಮಿಸಿದ ಸಂದರ್ಭದಲ್ಲಿ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರ ಹೆಲಿಕಾಪ್ಟರ್ ಹಾರಾಟವನ್ನು ತಡೆಹಿಡಿಯಲಾಗಿತ್ತು. ಸುಮಾರು 45 ನಿಮಿಷ ತಡವಾಗಿ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು. ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಚುನಾವಣೆಯಲ್ಲಿ ಎಲ್ಲರಿಗೂ ಸಮಾನ ಅವಕಾಶವಿರಬೇಕು, ಆಗಲೇ ಅದನ್ನು ಪ್ರಜಾಪ್ರಭುತ್ವ ಎನ್ನುವುದು. ಪಕ್ಷದ ಪರ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿಗಾಗಿ ಭದ್ರತೆ ಹೆಸರಿನಲ್ಲಿ ಸಿಎಂ ಪ್ರಚಾರ ಕಾರ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿತ್ತು. ಕೂಡಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿತ್ತು.
ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಲಿಕಾಪ್ಟರ್ ಹಾರಾಟಕ್ಕೆ 45 ನಿಮಿಷ ಅನುಮತಿ ನೀಡದೇ ಇರುವುದು ಮತ್ತೊಂದು ವಿವಾದ ಸೃಷ್ಟಿಸುವ ಸಾಧ್ಯತೆ ಇದೆ.












Click it and Unblock the Notifications