ಮನ್ ಕಿ ಬಾತ್‌ನಲ್ಲಿ ಪರಿಸರ ಪ್ರೇಮಿ ಸುರೇಶ್ ಕುಮಾರ್‌ರನ್ನು ನೆನಪಿಸಿಕೊಂಡ ಪ್ರಧಾನಿ
ನವದೆಹಲಿ, ಅ.30: ಈ ಬಾರಿಯ ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ನಲ್ಲಿ ಬೆಂಗಳೂರಿನ ಪರಿಸರ ಪ್ರೇಮಿ ಮತ್ತು ಕನ್ನಡ ಪ್ರೇಮಿ ಸುರೇಶ್ ಕುಮಾರ್ ಅವರನ್ನು ಶ್ಲಾಘಿಸಿದ್ದಾರೆ.
ತಮ್ಮ ಮಾಸಿಕ ರೇಡಿಯೊ ಭಾಷಣದಲ್ಲಿ ಸುರೇಶ್ ಕುಮಾರ್ ಅವರನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ, ಬೆಂಗಳೂರಿನ ಈ ಪರಿಸರಶಾಸ್ತ್ರಜ್ಞರಿಂದ ಭಾರತದ ಜನರು ಸಾಕಷ್ಟು ಕಲಿಯಬಹುದು ಎಂದು ಹೇಳಿದ್ದಾರೆ.
ಬೆಂಗಳೂರಿನ ಸಹಕಾರ ನಗರದ ನಿವಾಸಿಯಾಗಿರುವ ಸುರೇಶ್ ಕುಮಾರ್ ಅವರು ರಾಜಧಾನಿಯಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವಲ್ಲಿ ನೀಡಿದ ಕೊಡುಗೆಗೆ ಹೆಸರುವಾಸಿಯಾಗಿದ್ದಾರೆ. ಬೆಂಗಳೂರಿನ ಸಹಕಾರ ನಗರದಲ್ಲಿ ಕನ್ನಡ ಭಾಷೆಗೆ ಉತ್ತೇಜನ ನೀಡುವ ಬಸ್ ತಂಗುದಾಣ ನಿರ್ಮಿಸಿದ್ದಕ್ಕಾಗಿಯೂ ಸುರೇಶ್ ಕುಮಾರ್ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪ್ರಧಾನಿ ಮೋದಿ, "ಇಪ್ಪತ್ತು ವರ್ಷಗಳ ಹಿಂದೆ, ಸುಧಾಕರ್ ಅವರು ಬೆಂಗಳೂರಿನ ತಮ್ಮ ನಿವಾಸದ ಸುತ್ತಲಿನ ಕಾಡಿಗೆ ಜೀವ ತುಂಬಲು ನಿರ್ಧರಿಸಿದರು. ಅವರ ನಿರ್ಧಾರವು ಸವಾಲುಗಳಿಂದ ತುಂಬಿತ್ತು. ಆದರೆ, ಸುಮಾರು 20 ವರ್ಷಗಳ ಹಿಂದೆ ನೆಟ್ಟ ಸಸಿಗಳು ಈಗ 40 ಅಡಿಯ ಮರಗಳಾಗಿ ಮಾರ್ಪಟ್ಟಿವೆ. ಬೆಂಗಳೂರಿನ ಜನರು ಈಗ ಈ ಕಾಡಿನ ಸೌಂದರ್ಯವನ್ನು ಆನಂದಿಸುತ್ತಿದ್ದಾರೆ" ಎಂದು ಹೇಳಿದ್ದಾರೆ. '
"ಪರಿಸರ ಮತ್ತು ಸಂಸ್ಕೃತಿಯ ಕೆಲಸ ಮಾಡುವುದು ಎಷ್ಟು ಉತ್ತಮವಾಗಿದೆ ಎಂದು ಊಹಿಸಿ. ಅವರು ಇಡೀ ದೇಶಕ್ಕೆ ಪಾಠ ಕಲಿಸಿದ್ದಾರೆ. ಅವರು ಈ ದೇಶದ ಯುವಕರಿಗೆ ಸ್ಫೂರ್ತಿಯಾಗಬೇಕು" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುರೇಶ್ ಕುಮಾರ್ ಅವರನ್ನು ಅಭಿನಂದಿಸಿದ್ದು, ಅವರನ್ನು ನಿಸ್ವಾರ್ಥ ವ್ಯಕ್ತಿ ಎಂದು ಕರೆದಿದ್ದಾರೆ.

"ಬೆಂಗಳೂರಿನ ಸಹಕಾರ ನಗರದ ನಿವಾಸಿ, ಪರಿಸರ ಮತ್ತು ಕನ್ನಡ ಪ್ರೇಮಿ ಸುರೇಶ್ ಕುಮಾರ್ ರವರ ನಿಸ್ವಾರ್ಥ ಸೇವೆ ಮತ್ತು ಸಾಮಾಜಿಕ ಹಾಗೂ ಪರಿಸರ ಕಾಳಜಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಇಂದಿನ ಮನ್ ಕೀ ಬಾತ್ ನಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸುರೇಶ್ ಕುಮಾರ್ ರವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಈ ಸೇವಾಕಾರ್ಯ ಹಲವಾರು ಜನರಿಗೆ ಪ್ರೇರಣೆಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications