ದೇಶದಲ್ಲಿ ಕೊರೊನಾವೈರಸ್ ತಪಾಸಣೆ ವೇಗ ಹೆಚ್ಚಿಸಲು 3 ಹೊಸ ಲ್ಯಾಬ್
ನವದೆಹಲಿ, ಜುಲೈ.27: ನೊವೆಲ್ ಕೊರೊನಾವೈರಸ್ ಸೋಂಕು ತಪಾಸಣೆಗೆ ದೇಶದ ಮೂರು ಭಾಗಗಳಲ್ಲಿ ವಿಶೇಷ ತಂತ್ರಜ್ಞಾನವನ್ನು ಹೊಂದಿರುವ ಪ್ರಯೋಗಾಲಯಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ.
ನೋಯ್ಡಾ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ತೆರೆಯಲಾಗಿರುವ ಮೂರು ಹೊಸ ಕೊರೊನಾವೈರಸ್ ಸೋಂಕು ತಪಾಸಣಾ ಪ್ರಯೋಗಾಲಯದಿಂದ ದೇಶದಲ್ಲಿ ತಪಾಸಣಾ ಸಾಮರ್ಥ್ಯವು ವೃದ್ಧಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನೋಯ್ಡಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಪ್ರಿವೆನ್ಷನ್ ಅಂಡ್ ರಿಸರ್ಚ್ ಕೇಂದ್ರ. ಮುಂಬೈನ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ರಿಪ್ರೊಡಕ್ಟಿವ್ ಹೆಲ್ತ್ ಕೇಂದ್ರ ಹಾಗೂ ಕೋಲ್ಕತ್ತಾದ ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಕಾಲರಾ ಆಂಡ್ ಎಂಟರಿಕ್ ಡಿಸೀಸ್ ಕೇಂದ್ರದಲ್ಲಿ ಒಂದೊಂದು ಪ್ರಯೋಗಾಲಯವನ್ನು ತೆರೆಯಲಾಗಿದೆ.

ದಿನವೂ 10,000 ಜನರಿಗೆ ಕೊರೊನಾವೈರಸ್ ತಪಾಸಣೆ
ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದಕ್ಕೆ ವೈದ್ಯಕೀಯ ತಪಾಸಣೆ ವೇಗವನ್ನು ಹೆಚ್ಚಿಸುವುದು ಅನಿವಾರ್ಯವಾಗಿ ಬಿಟ್ಟಿದೆ. ಈ ಹಿನ್ನೆಲೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಈ ಲ್ಯಾಬ್ ಗಳು ಪ್ರತಿನಿತ್ಯ 10,000 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿ ತಪಾಸಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ದಿನವೂ 5ಲಕ್ಷ ಕೊರೊನಾವೈರಸ್ ತಪಾಸಣೆ
ಇಂದು ದೇಶದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ 11,000 ಸೌಲಭ್ಯಗಳನ್ನು ಒದಗಿಸಲಾಗಿದೆ. 11 ಲಕ್ಷ ಐಸೋಲೇಷನ್ ಬೆಡ್ ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದೇಶದಲ್ಲಿ 1,300 ಟೆಸ್ಟಿಂಗ್ ಲ್ಯಾಬ್ ಗಳನ್ನು ಹೊಂದಿದ್ದೇವೆ. ದೇಶಾದ್ಯಂತ ಒಂದೇ ದಿನ 5 ಲಕ್ಷಕ್ಕೂ ಹೆಚ್ಚು ಜನರಿಗೆ ಕೊವಿಡ್-19 ಟೆಸ್ಟ್ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಹೆಪಟೈಟಸ್ ಬಿ, ಸಿ ಮತ್ತು ಎಚ್ಐವಿ ಸೋಂಕು ತಪಾಸಣೆ
ನವದೆಹಲಿಯ ನೋಯ್ಡಾ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಸ್ಥಾಪಿಸಿರುವ ಅತ್ಯಾಧುನಿಕ ತಂತ್ರಜ್ಞಾನಗಳುಳ್ಳ ಲ್ಯಾಬ್ ಗಳು ಕೊರೊನಾವೈರಸ್ ಸೋಂಕು ತಪಾಸಣೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಮುಂದಿನ ದಿನಗಳಲ್ಲಿ ಹೆಪಟೈಟಸ್ ಬಿ, ಸಿ, ಮತ್ತು ಎಚ್ಐವಿ, ಡೆಂಗ್ಯೂ ಸೇರಿದಂತೆ ಹಲವು ಸೋಂಕುಗಳ ತಪಾಸಣೆಯನ್ನು ನಡೆಸುವುದಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಭಾರತವು ಅತಿಹೆಚ್ಚು ಪಿಪಿಇ ಕಿಟ್ ಉತ್ಪಾದಿಸುವ ರಾಷ್ಟ್ರ
ಕಳೆದ ಆರು ತಿಂಗಳ ಹಿಂದೆ ಭಾರತದಲ್ಲಿ ಒಂದೇ ಒಂದು ಪಿಪಿಇ ಕಿಟ್ ಗಳು ಉತ್ಪಾದನೆ ಆಗುತ್ತಿರಲಿಲ್ಲ. ಆದರೆ ಇಂದು ದೇಶದ ಚಿತ್ರಣ ಬದಲಾಗಿದೆ. ಕೊರೊನಾವೈರಸ್ ವಿರುದ್ಧ ಹೋರಾಡುವಲ್ಲಿ ಭಾರತವು ಸಶಕ್ತವಾಗಿದೆ. ಇಂದು ಪ್ರತಿನಿತ್ಯ ದೇಶದಲ್ಲಿ 1200 ಪಿಪಿಇ ಕಿಟ್ ಗಳನ್ನು ಉತ್ಪಾದಿಸಲಾಗುತ್ತಿದ್ದು, ಆರು ತಿಂಗಳ ನಂತರದಲ್ಲಿ ದೇಶವು ವಿಶ್ವದಲ್ಲೇ ಅತಿಹೆಚ್ಚು ಪಿಪಿಇ ಕಿಟ್ ಉತ್ಪಾದಿಸುವ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಮೋದಿ ತಿಳಿಸಿದ್ದಾರೆ.

ವೆಂಟಿಲೇಟರ್, ಮಾಸ್ಕ್ ಉತ್ಪಾದನೆಯಲ್ಲಿ ಭಾರಿ ಏರಿಕೆ
ಕೊರೊನಾವೈರಸ್ ವಿರುದ್ಧ ಹೋರಾಡುವುದಕ್ಕೆ ಮಾಸ್ಕ್ ಮತ್ತು ಸೋಂಕಿತರ ಚಿಕಿತ್ಸೆಗೆ ವೆಂಟಿಲೇಟರ್ ಗಳ ಅಗತ್ಯತೆ ಎದುರಾಗಿದೆ. ಪ್ರತಿನಿತ್ಯ ದೇಶದಲ್ಲಿ 3 ಲಕ್ಷ ಮಾಸ್ಕ್ ಗಳನ್ನು ಉತ್ಪಾದಿಸಲಾಗುತ್ತಿದ್ದು, ಒಂದು ವರ್ಷದಲ್ಲೇ 3 ಲಕ್ಷ ವೆಂಟಿಲೇಟರ್ ಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ದೇಶದಲ್ಲಿ ಹೇಗಿದೆ ಕೊರೊನಾವೈರಸ್ ಕಂಡೀಷನ್?
ಭಾರತದಲ್ಲಿ ಹೊಸದಾಗಿ 49,931 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. 24 ಗಂಟೆಗಳಲ್ಲಿ 708 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 14,35,453 ಕೊರೊನಾ ಸೋಂಕಿತ ಪ್ರಕರಣಗಳಿವೆ. 4,85,114 ಸಕ್ರಿಯ ಪ್ರಕರಣಗಳಿವೆ. 9,17,568 ಮಂದಿ ಗುಣಮುಖರಾಗಿದ್ದಾರೆ. 32,771 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಜುಲೈ 26ರವರೆಗೆ 1,68,06,803 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಭಾನುವಾರ ಒಂದೇ ದಿನ 5,15,472 ಮಂದಿಯ ಪರೀಕ್ಷೆ ನಡೆಸಲಾಗಿತ್ತು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ತಿಳಿಸಿದೆ. ಭಾರತ: ಕೊವಿಡ್ ನಿಂದ ಚೇತರಿಕೆ ಪ್ರಮಾಣ ಶೇ.63.92ರಷ್ಟು ಏರಿಕೆಯಾಗಿದೆ.












Click it and Unblock the Notifications