PM Modi in Hubballi: ವಿಮಾನ ನಿಲ್ದಾಣ ರಸ್ತೆಗೆ ಬಂದ ಬೈಕ್ ಸವಾರ ಮೇಲೆ ಪೊಲೀಸ್ ದರ್ಪ
ಹುಬ್ಬಳ್ಳಿ, ಜ. 12: ಗುರುವಾರದಿಂದ ಅವಳಿ ನಗರ ಹುಬ್ಬಳ್ಳಿ- ಧಾರವಾಡದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಪ್ರಾರಂಭವಾಗಲಿದ್ದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ.
ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಂದ ಬೈಕ್ ಸವಾರರೊಬ್ಬರ ಮೇಲೆ ಕರ್ತವ್ಯನಿರತ ಪೊಲೀಸ್ ಅಧಿಕಾರಿ ದರ್ಪ ತೋರಿರುವ ಘಟನೆ ನಡೆದಿದೆ. ಬೈಕ್‌ನಲ್ಲಿ ಮಗುವಿನ ಜೊತೆಗೆ ಬಂದಿದ್ದ ವ್ಯಕ್ತಿಯ ಕೆನ್ನೆಗೆ ಹೊಡೆದಿದ್ದಾರೆ ಇನ್ಸ್‌ಪೆಕ್ಟರ್.
ಹುಬ್ಬಳ್ಳಿ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಬಂದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಗುರುವಾರ ನಡೆದಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿರುವ ರಾಷ್ಟ್ರೀಯ ಯುವ ಜನೋತ್ಸವ ಜನವರಿ 16ರ ವರೆಗೆ ನಡೆಯಲಿದೆ. 'ವಿಕಸಿತ್ ಯುವ-ವಿಕಸಿತ್ ಭಾರತ್' ಎಂಬ ವಿಷಯದಡಿ ನಡೆಯುತ್ತಿರುವ ಈ ಯುವಜನ ಉತ್ಸವದಲ್ಲಿ ಹಲವಾರು ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ಯುವ ಜನೋತ್ಸವದಲ್ಲಿ 28 ರಾಜ್ಯಗಳಿಂದ ಯುವಕರ ತಂಡಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆ ಇದೆ. ರಾಷ್ಟ್ರೀಯ ಮಟ್ಟದಲ್ಲಿ ಒಂದು ವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಹಲವು ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳು ನಡೆಯಲಿವೆ. ಶೇ.46ರಷ್ಟು ಯುವ ಜನರಿರುವ ದೇಶದಲ್ಲಿ ಯುವಕರಿಂದಲೇ ದೇಶದ ಭವಿಷ್ಯ ನಿರ್ಮಿಸಬಹುದು ಎಂದು ಹಲವಾರು ಕಾರ್ಯಕ್ರಮಗಳು ರೂಪಿಸಲಾಗಿದೆ.
ನಗರಕ್ಕೆ ಆಗಮಿಸಿದ ನರೇಂದ್ರ ಮೋದಿಯವರಿಗೆ ಹುಬ್ಬಳ್ಳಿಯ ಜನರು ಪ್ರೀತಿ ಪೂರ್ವಕ ಸ್ವಾಗತ ಕೋರಿದ್ದಾರೆ. ದಾರಿ ಉದ್ದಕ್ಕೂ ಪುಷ್ಪ ಮಳೆ ಸುರಿಸುವ ಮೂಲಕ ತಮ್ಮ ಅಭಿಮಾನ ಹೊರಹಾಕಿದ್ದಾರೆ. ಹುಬ್ಬಳ್ಳಿಯ ಜನರತ್ತ ಕೈ ಬೀಸುವ ಮೂಲಕ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.












Click it and Unblock the Notifications