ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಭಾಷೆಯಂತಿದೆ: ನರೇಂದ್ರ ಮೋದಿ
ಲಾಥೂರ್(ಮಹಾರಾಷ್ಟ್ರ), ಏಪ್ರಿಲ್ 09: "ಕಾಂಗ್ರೆಸ್ ಪ್ರಣಾಳಿಕೆ ಎಂದರೆ ಅದು ಪಾಕಿಸ್ತಾನದ ಭಾಷೆಯಂತೆಯೇ ಇದೆ" ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಲಾಥೂರ್ ನಲ್ಲಿ ಸಮಾವೇಶವೊಂದನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಬರೋಬ್ಬರಿ ಎರಡು ವರ್ಷಗಳ ನಂತರ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಮತ್ತು ಪ್ರಧಾನಿ ನರೇಂದ್ರ ಮೊದಿ ಒಂದೇ ವೇದಿಕೆಯಲ್ಲಿದ್ದಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ಸಿಗೆ ನಮ್ಮ ದೇಶದ ಧೀರ ಜವಾನರ ಬಗ್ಗೆ ಗೌರವವಿಲ್ಲ. ಅದು ಯಾವಾಗಲೂ ಪಾಕಿಸ್ತಾನದ ಭಾಷೆಯಲ್ಲಿಯೇ ಮಾತನಾಡುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯ ಭಾಷೆಯೂ, ಪಾಕಿಸ್ತಾನದ ಭಾಷೆಯಂತೆಯೇ ಇದೆ ಎಂದರು.

ನಿಮ್ಮ ಮೊದಲ ಮತ ಯಾರಿಗೆ?
ಮೊಟ್ಟ ಮೊದಲ ಬಾರಿಗೆ ಮತಹಾಕುವವರಲ್ಲಿ ನನ್ನದೊಂದು ಮನವಿ. ನಿಮ್ಮ ಮತವನ್ನು ಯಾರಿಗೆ ಹಾಕುತ್ತೀರಿ? ನಿಮ್ಮ ಮತವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಧೈರ್ಯವಂತ ಯೋಧರಿಗೆ ನೀಡುವುದಿಲ್ಲವೇ? ನಿಮ್ಮ ಮತವನ್ನು ಬಾಲಕ್ಕೋಟ್ ನಲ್ಲಿ ಏರ್ ಸ್ಟ್ರೈಕ್ ನಡೆಸಿದ ಭಾರತೀಯ ವಾಯುಸೇನೆಗೆ ಕೊಡುವುದಿಲ್ಲವೇ? ನಿಮ್ಮ ಮತವನ್ನು ಬಿಜೆಪಿಗೆ ನೀಡಿ- ನರೇಂದ್ರ ಮೋದಿ, ಪ್ರಧಾನಿ

ಕಾಂಗ್ರೆಸ್ ಮತ್ತು ಪಾಕಿಸ್ತಾನ
ಕಾಂಗ್ರೆಸ್ ಮತ್ತು ಪಾಕಿಸ್ತಾನ ಎರಡಕ್ಕೂ, ನಮ್ಮ ಸೈನಿಕರಿಗೆ ಸಂಪೂರ್ಣ ಬಲ ನೀಡುವುದು ಇಷ್ಟವಿಲ್ಲ. ಕಾಂಗ್ರೆಸ್ ಮತ್ತು ಪಾಕಿಸ್ತಾನ ಎರಡೂ ದೇಶಗಳೂ ಭಯೋತ್ಪಾದನೆಯನ್ನು ಹರಡುತ್ತಿವೆ, ಭಾರತವನ್ನು ಮುರಿಯುವುದೇ ಅವರಿಗೆ ಬೇಕಾಗಿದೆ. ಕಾಂಗ್ರೆಸ್ ಅವರ ಮಿತ್ರರು ಎಂದಿಗೂ ರಾಷ್ಟ್ರವಿರೋಧಿ, ಆಲೋಚನೆ, ಮನಸ್ಥಿತಿ ಹೊಂದಿದ್ದಾರೆ. ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭಾರತದ ಭದ್ರತೆಯ ವೈಫಲ್ಯಗಳ ಬಗ್ಗೆ ಬರೆಯುತ್ತದೆಂದರೆ ಅದು ನಾಚಿಕೆಗೇಡಿನ ವಿಷಯ- ನರೇಂದ್ರ ಮೋದಿ

ತಾಕತ್ತಿದ್ದರೆ ಒಪ್ಪಿಕೊಳ್ಳಿ...
1947 ರಲ್ಲಿ ನಾವು ಮನಸ್ಸು ಮಾಡಿದ್ದರೆ ಇಂದು ಪಾಕಿಸ್ತಾನ ಎಂಬ ದೇಶ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ಇಂಥ ಪಾಕಿಸ್ತಾನವನ್ನು ಸಮರ್ಥಿಕೊಳ್ಳುವುದು ಯಾವ ಧರ್ಮ? ನಾವು ರಾಷ್ಟ್ರದ ಭದ್ರತೆಗಾಗಿ, ಭಯೋತ್ಪಾದಕರ ಧಮನಕ್ಕಾಗಿ, ರಾಷ್ಟ್ರ ವಿರೋಧಿಗಳ ವಿರೋಧವಾಗಿ ಹೋರಾಡಿದರೆ ಅದನ್ನು ಅವರು ಹೇಗೆ ಸಮರ್ಥಿಸಿಕೊಂಡರು ನೋಡಿ ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.

ಹೊಸ ಭಾರತದ ಸಂಕಲ್ಪ
ಭಯೋತ್ಪಾದಕರು ಸುಲಭವಾಗಿ ದಾಳಿ ಮಾಡುತ್ತಿರುವಾಗ ನಾವು ಸುಮ್ಮನೆ ಕೂರುವುದಿಲ್ಲ. ನಾವು ಉಗ್ರರ ನೆಲೆಗೇ ಹೋಗಿ ಅವರನ್ನು ಕೊಲ್ಲುತ್ತೇವೆ. ನಾವು ಭಯೋತ್ಪಾದನೆಯ ದಮನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಿಮ್ಮ ನಂಬಿಕೆಯೇ ಐದು ವರ್ಷಗಳಲ್ಲಿ ನಾನು ಮಾಡಿದ ಅತೀ ದೊಡ್ಡ ಸಾಧನೆ

ಠಾಕ್ರೆ-ಮೋದಿ ಒಂದೇ ವೇದಿಕೆಯಲ್ಲಿ!
2016 ರ ಡಿಸೆಂಬರ್ ನಲ್ಲಿ ಅರಬ್ಬೀ ಸಮುದ್ರದ ಬಳಿ ಛತ್ರಪತಿ ಶಿವಾಜಿ ಮಹಾರಾಜ್ ಮೆಮೋರಿಯಲ್ ಗೆ ಅಡಿಗಲ್ಲು ಹಾಕುವ ವೇಳೆ ಈ ಇಬ್ಬರು ನಾಯಕರು ವೇದಿಕೆ ಹಂಚಿಕೊಂಡಿದ್ದರು. ಅದಾದ ನಂತರ ಬಿಜೆಪಿ-ಶಿವಸೇನೆ ಸಂಬಂಧ ಬಿಗಡಾಯಿಸಿದ್ದರಿಂದ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ.












Click it and Unblock the Notifications