ಫೈಲಿನ್ : ಬಂದಿದ್ದೆಲ್ಲ ಬರಲಿ, ಗೋವಿಂದನ ದಯೆಯಿರಲಿ
ಭುವನೇಶ್ವರ/ಹೈದರಾಬಾದ್, ಅ.12: ಆಂಧ್ರ ಪ್ರದೇಶ ಮತ್ತು ಒರಿಸ್ಸಾದಲ್ಲಿ ಭಾರಿ ಅನಾಹುತ ಸೃಷ್ಟಿಸಲಿರುವ ಫೈಲಿನ್ ಚಂಡಮಾರುತ ಇಂದು ಸಂಜೆ ಆರು ಗಂಟೆಯಿಂದ ಎಂಟು ಗಂಟೆ ಅವಧಿಯಲ್ಲಿ ತನ್ನ ರುದ್ರನರ್ತನ ಪ್ರದರ್ಶಿಸಲಿದೆ.
ಭಾರತದ ಪೂರ್ವ ಕರಾವಳಿಯನ್ನು ಶನಿವಾರ ಸಂಜೆ ಅಪ್ಪಳಿಸಲಿರುವ 'ಫೈಲಿನ್' ಪ್ರಚಂಡಮಾರುತ, ಮುಂದುವರಿದ ತಂತ್ರಜ್ಞಾನಗಳನ್ನು ಬಳಸಿಕೊಂಡು, ಪ್ರಕೃತಿ ವಿಕೋಪವನ್ನು ತಡೆಗಟ್ಟಲು ಮತ್ತು ಸಾವಿನ ಪ್ರಮಾಣವನ್ನು ತಗ್ಗಿಸಲು ಭಾರತ ಮಾಡಿಕೊಂಡಿರುವ ಸಿದ್ಧತೆಗಳಿಗೆ ಒಂದು ಸವಾಲು ಒಡ್ಡಿದೆ.
ಈ ಚಂಡಮಾರುತ ಹೊಸದೇನಲ್ಲ. ಹಿಂದೆ ಕೂಡ ಹಲವಾರು ಚಂಡಮಾರುತಗಳನ್ನು ಭಾರತದ ಕರಾವಳಿ ಎದುರಿಸಿದೆ. ಆದರೆ, ಈ ಪ್ರಳಯಾಂತಕ ಚಂಡಮಾರುತ ಊಹಿಸಲಾರದಷ್ಟು ಅನಾಹುತ ಸೃಷ್ಟಿಸುವ ಶಕ್ತಿ ಹೊಂದಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಅಮೆರಿಕಾದಲ್ಲಿ ಕಳೆದ ವರ್ಷ ಅಪ್ಪಳಿಸಿದ್ದ 'ಕತ್ರೀನಾ' ಚಂಡಮಾರುತಕ್ಕಿಂತಲೂ ಭೀಕರವಾಗಿದೆ ಎಂದು ಎಚ್ಚರಿಸಲಾಗಿದೆ.
ಹೈ ಅಲರ್ಟ್: ಆಂಧ್ರ ಪ್ರದೇಶ ಮತ್ತು ಒರಿಸ್ಸಾದ ಕರಾವಳಿ ತೀರ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಲಾಗಿದೆ. ಗೋಪಾಲಪುರದಿಂದ 270ಕಿಮೀ ದೂರದಲ್ಲಿರುವ ಬಂಗಾಳಕೊಲ್ಲಿಯಲ್ಲಿ ಫೈಲಿನ್ ಕೇಂದ್ರೀಕೃತವಾಗಿದ್ದು, ಸಮುದ್ರದಲ್ಲಿ ದೈತ್ಯದ ಅಲೆಗಳು ಸೃಷ್ಟಿಯಾಗಿವೆ. ಕಳೆದ ಎರಡು ದಿನಗಳಿಂದ ಎರಡೂ ರಾಜ್ಯಗಳ ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣ, ಮಚಲಿಪಟ್ಟಣ, ವಿಜಯನಗರಂ, ಒರಿಸ್ಸಾದ ಗೋಪಾಲಪುರ ಮತ್ತಿತರ ಕಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಚಂಡಮಾರುತ ಉಂಟು ಮಾಡಿರುವ ಆತಂಕ, ಸರ್ಕಾರ ಕೈಗೊಂಡಿರುವ ಕ್ರಮ, ಜನರ ವಲಸೆಯಿಂದ ಉಂಟಾಗಿರುವ ಸಮಸ್ಯೆ, ಚಂಡಮಾರುತದಿಂದ ಕರ್ನಾಟಕ ರಾಜ್ಯ ಕರಾವಳಿಗೆ ಏನಾದರೂ ತೊಂದರೆ ಇದೆಯೇ ಎಂಬುದರ ಬಗ್ಗೆ ಮುಂದೆ ಓದಿ...

ಯಾವಾಗ ಅಪ್ಪಳಿಸಲಿದೆ?
ಬಂಗಾಳಕೊಲ್ಲಿಯ ವಾಯುವ್ಯ ದಿಕ್ಕಿನಿಂದ ಸಂಜೆ 6 ಗಂಟೆ ಸುಮಾರಿಗೆ ಗೋಪಾಲಪುರಂ ಮತ್ತು ಶ್ರೀಕಾಕುಳಂ ಪ್ರವೇಶಿಸಲಿದೆ. 6 ಗಂಟೆಯಿಂದ 8 ಗಂಟೆ ತನಕ ಆರ್ಭಟ ಮುಂದುವರೆಯಲಿದೆ.
ಗಂಟೆಗೆ 200 ರಿಂದ 250 ಕಿಮೀ ವೇಗದಲ್ಲಿ ಫೈಲಿನ್ ಚಂಡಮಾರುತ ಅಪ್ಪಳಿಸಲಿದ್ದು, 55 ಅಡಿಯಿಂದ 60 ಅಡಿ ಎತ್ತರದವರೆಗೂ ಅಲೆಗಳು ಅಪ್ಪಳಿಸಲಿವೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

6 ಲಕ್ಷ ಜನ ಸ್ಥಳಾಂತರ
ಫೈಲಿನ್ ಚಂಡಮಾರುತ ಅಪ್ಪಳಿಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಮುದ್ರ ತೀರ ಪ್ರದೇಶದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ನಿನ್ನೆಯೇ ಮೂರು ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸೇನಾಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಸ್ಥಳಾಂತರ ಮಾಡಿತ್ತು.
ಇನ್ನು ಸಂಜೆ ವೇಳೆಗೆ ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುವುದು ಎಂದು ಆಂಧ್ರ ಪ್ರದೇಶದ ಕಂದಾಯ ಸಚಿವ ಎನ್.ರಘುವೀರರೆಡ್ಡಿ ತಿಳಿಸಿದ್ದಾರೆ.
ಚಿತ್ರದಲ್ಲಿ: ಒಡಿಶಾದ 'ಸಿಲ್ಕ್ ಸಿಟಿ' ಬೆರ್ಹಂಪುರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.

ಮೊದಲ ಬಲಿ
ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿ ಭಾಗಗಳಲ್ಲಿ ಮಳೆಯಾಗುತ್ತಿರುವುದರಿಂದ ಬಸ್ ಸಂಚಾರ ಅಸ್ತವ್ಯಸ್ತಗೊಂಡಿದೆ. ವಿದ್ಯುತ್, ದೂರವಾಣಿ ಸಂಪರ್ಕವೂ ಕಡಿತಗೊಂಡಿದೆ. ಬಹುತೇಕ ಐದು ಜಿಲ್ಲೆಗಳಲ್ಲಿ ಲಕ್ಷಾಂತರ ಜನರು ಪರದಾಡುತ್ತಿದ್ದಾರೆ.
ಗೋಪಾಲಪುರದಲ್ಲಿ ಚಂಡಮಾರುತದ ಪ್ರವೇಶಕ್ಕೂ ಮುನ್ನ ಬಿರುಗಾಳಿಗೆ ಮರ ಉರುಳಿ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳ, ಛತ್ತೀಸ್ ಗಢ, ಉತ್ತರ ಪ್ರದೇಶದ ಉತ್ತರಭಾಗಗಳಲ್ಲಿ ಭರ್ಜರಿ ಮಳೆಯಾಗುತ್ತಿದ್ದು 6-8 ಗಂಟೆಗಳ ಕಾಲ ಮಳೆ ಹೊಡೆತ ಎದುರಿಸಬೇಕಾಗುತ್ತದೆ.
ಚಿತ್ರದಲ್ಲಿ : ಒಡಿಶಾದ ಗಂಜಾ ಜಿಲ್ಲೆಯ ದಕ್ಷಿಣ ಭಾಗ ಗೋಪಾಲಪುರದ ಕಡಲ ತೀರ.

ಜನಜೀವನ ಅಸ್ತವ್ಯಸ್ತ
ಕರಾವಳಿ ಪ್ರದೇಶದಲ್ಲಿ ಎಲ್ಲ ಜನರನ್ನೂ ಬಲವಂತವಾಗಿ ಸ್ಥಳಾಂತರ ಮಾಡಲಾಗುತ್ತಿದ್ದು, ಸಮುದ್ರ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸದಂತೆ ನಿಷೇಧ ಹೇರಲಾಗಿದೆ. ಹಡಗುಗಳು ಮತ್ತು ಯಾಂತ್ರಿಕ ದೋಣಿಗಳು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಒಡಿಶಾದ ವಾಣಿಜ್ಯ ನಗರ ಬೆರ್ಹಂಪುರದಲ್ಲಿ ಚಂಡ ಮಾರುತ ಭೀತಿ ಹಿನ್ನೆಲೆಯಲ್ಲಿ ಜನರು ತರಕಾರಿ ಹಾಗೂ ಅಗತ್ಯ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ.
ಆಲೂಗೆಡ್ಡೆ 2 ರು ಏರಿಕೆ ಕಂಡು 14 ರು ಪ್ರತಿ ಕೆಜಿ, ಈರುಳ್ಳಿ 50-55 ಪ್ರತಿ ಕೆಜಿಗೆ ಬಿಕರಿಯಾಗಿದೆ. ನೆರೆ ರಾಜ್ಯ ಆಂಧ್ರದಿಂದ ತರಕಾರಿ ಸರಬರಾಜಿಲ್ಲದೆ ಮಾರುಕಟ್ಟೆಯಲ್ಲಿ ಇರುವ ತರಕಾರಿ ಬೆಲೆ ಏರಿಕೆ ಕಂಡಿತ್ತು.

ಉಭಯ ರಾಜ್ಯಗಳಲ್ಲಿ ಕಟ್ಟೆಚ್ಚರ
ಆಂಧ್ರ ಪ್ರದೇಶದಲ್ಲಿ 30 ಮತ್ತು ಒರಿಸ್ಸಾದಲ್ಲಿ 15 ನಿರಾಶ್ರಿತರ ಶಿಬಿರಗಳನ್ನು ತೆರೆಯಲಾಗಿದೆ. ಜನರಿಗೆ ತಾತ್ಕಾಲಿಕವಾಗಿ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಫೈಲಿನ್ ಚಂಡಮಾರುತ ಭಾರೀ ಅನಾಹುತ ಸೃಷ್ಟಿಸುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಮತ್ತು ಒರಿಸ್ಸಾ ಕರಾವಳಿ ತೀರ ಪ್ರದೇಶದಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಕಟ್ಟೆಚ್ಚರ ವಹಿಸಲಾಗಿದೆ.
ಎರಡೂ ರಾಜ್ಯಗಳಿಗೆ ಈಗಾಗಲೇ ಕೇಂದ್ರ ಸರ್ಕಾರ 1700 ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಕಳುಹಿಸಿದೆ. ಅಲ್ಲದೆ ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರ ಮಾಡಲು 18 ವಾಯುಸೇನಾ ಹೆಲಿಕಾಪ್ಟರ್ ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ.

ಕರ್ನಾಟಕಕ್ಕೆ ಹಾನಿಯಿಲ್ಲ
ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಭೀಕರ ಚಂಡಮಾರುತ ಫೈಲಿನ್ ನ ಪರಿಣಾಮ ರಾಜ್ಯದ ಮೇಲೆ ಉಂಟಾಗುವ ಸಾಧ್ಯತೆಗಳು ಕಡಿಮೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ವಿ.ಎಸ್.ಪ್ರಕಾಶ್ ಹೇಳಿದ್ದಾರೆ.
ತೀವ್ರತರವಾದ ಫೈಲಿನ್ ಚಂಡಮಾರುತ ಒಡಿಶಾ ಅಭಿಮುಖವಾಗಿ ಚಲಿಸುತ್ತಿದೆ. ಮಳೆಯ ಮಾರುತಗಳು ಕೂಡ ಆಂಧ್ರ ಮತ್ತು ಒರಿಸ್ಸಾ ಭಾಗದಲ್ಲಿ ಮಳೆ ಸುರಿಸಲಿವೆ.
ಚಂಡಮಾರುತದ ಪರೋಕ್ಷ ಪರಿಣಾಮದಿಂದ ರಾಜ್ಯದ ದಕ್ಷಿಣ ಹಾಗೂ ಪೂರ್ವ ಭಾಗದಲ್ಲಿ ಮೋಡ ಕವಿದ ವಾತಾವರಣ ಕಂಡುಬರಬಹುದು.
ಆದರೆ, ಭಾರೀ ಮಳೆಯಾಗುವ ಹವಾಮಾನ ಮುನ್ಸೂಚನೆಗಳು ಇಲ್ಲ. ಇನ್ನೂ ಒಂದು ವಾರಗಳ ಕಾಲ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳು ಇಲ್ಲ. ರಾಜ್ಯದ ಹಲವೆಡೆ ಚದುರಿದಂತೆ ಸಾಧಾರಣ ಮಳೆಯಾಗುವ ಸಂಭವವಿದೆ
|
ಒಡಿಶಾ ಸಹಾಯವಾಣಿ
ಚಂಡಮಾರುತ ಫೈಲಿನ್ ಆರ್ಭಟದ ಭೀತಿ ಎದುರಿಸುತ್ತಿರುವ ಜನತೆಗೆ ಒಡಿಶಾ ರಾಜ್ಯ ನೀಡಿರುವ ಸಹಾಯವಾಣಿ ಇಲ್ಲಿದೆ
|
ಗೂಗಲ್ ನೆರವು
ಚಂಡಮಾರುತ ಎಲ್ಲೆಲ್ಲಿ ಹಾನಿ ಮಾಡಲಿದೆ. ತುರ್ತು ಸೇವೆ ಎಲ್ಲಿ ಸಿಗಲಿದೆ. ಕಳೆದು ಹೋದವರನ್ನು ಹುಡುಕುವುದು ಹೇಗೆ ಎಂಬ ಸಮಸ್ಯೆಗೆ ಗೂಗಲ್ ಪೀಪಲ್ ಫೈಂಡರ್ ಪುಟ ತಯಾರಿಸಿದೆ.
ಒಡಿಶಾ ಕರಾವಳಿಯಲ್ಲಿ
ಒಡಿಶಾ ಕರಾವಳಿ ಬಾಗಿಲಲ್ಲಿ ನಿಂತಿರುವ ಚಂಡಮಾರುತ ಆರ್ಭಟ ವಿಡಿಯೋ ನೋಡಿ
|
ಒಡಿಶಾ ತುರ್ತು ಸಹಾಯವಾಣಿ
ಒಡಿಶಾದ ಚಂಡಮಾರುತ ಪೀಡಿತ ಪ್ರದೇಶಗಳ ತುರ್ತು ಸೇವಾ ಸಹಾಯವಾಣಿ ಇಲ್ಲಿದೆ ನೋಡಿ
|
ಸರ್ಕಾರಿ ವೆಬ್ ತಾಣ
ಸರ್ಕಾರಿ ಅಧಿಕೃತ ವೆಬ್ ತಾಣ imd.gov.in ನಲ್ಲಿ ಅಗತ್ಯ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ಇದೆ. ಉಚಿತ ಸಹಾಯವಾಣಿ ಸಂಖ್ಯೆಯೂ ಇದೆ












Click it and Unblock the Notifications