Petrol and Diesel Price: ಹಾಸ್ಯವಾಗುತ್ತಿರುವ ಜನಪ್ರತಿನಿಧಿಗಳ ʼಮಿತವ್ಯಯʼ ರಾಜಕೀಯ ಪ್ರಚಾರ: ರಾಜೀವ ಹೆಗಡೆ ಬರಹ
Petrol and Diesel Price: ಹಾಸ್ಯವಾಗುತ್ತಿರುವ ಜನಪ್ರತಿನಿಧಿಗಳ ʼಮಿತವ್ಯಯʼ ರಾಜಕೀಯ ಪ್ರಚಾರ: ಬರಹಗಾರ ರಾಜೀವ ಹೆಗಡೆ ಅವರ ಬರಹ ಇಲ್ಲಿದೆ. ಜಾಗತಿಕ ಕಾರಣಗಳಿಂದ ಭಾರತದ ಆರ್ಥಿಕತೆ ಸಂಕಟಕ್ಕೆ ಸಿಲುಕುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಇಂಧನ ಮಿತವ್ಯಯ, ಚಿನ್ನದ ಖರೀದಿ ನಿಯಂತ್ರಣ, ಮ್ಯಾನೇಜರ್ ಒಪ್ಪಿದರೆ ವರ್ಕ್ ಫ್ರಮ್ ಹೋಮ್ ಸೇರಿ ಎಲ್ಲವನ್ನೂ ಪಾಲಿಸಲು ಸಿದ್ಧವಿದ್ದೇವೆ ಅಥವಾ ಹೇಳುವ ಮುನ್ನವೇ ಪಾಲಿಸುತ್ತಿದ್ದೇವೆ. ಆದರೆ ಮೋದಿ ಮನವಿಗಿಂತ ಬಿಜೆಪಿಗರು ಮಾಡುತ್ತಿರುವ ಕೆಲ ಪ್ರಚಾರ ಪ್ರಿಯ ಕೆಲಸಗಳು ಅಸಹ್ಯ ಮೂಡಿಸುತ್ತಿವೆ ಅಥವಾ ಜನಸಾಮಾನ್ಯರನ್ನು ಆಡಿಕೊಳ್ಳುವಂತೆ ಭಾಸವಾಗುತ್ತಿದೆ. ಪ್ರಧಾನಿ ಮೋದಿಯ ಮನವಿ ಅಥವಾ ಸಲಹೆಯ ಬಳಿಕ ಸಾರ್ವಜನಿಕ ಸೇವೆಗಳ ಮಿತವ್ಯಯವೆಂದು ಬಿಜೆಪಿ ನಾಯಕರು ಪ್ರಚಾರಕ್ಕೆ ಬಿದ್ದು, ಒಂದಾದರ ಮೇಲೊಂದು ಕೆಲಸ ಮಾಡುತ್ತಿದ್ದಾರೆ. ಮೋದಿ ಹೇಳಿದ್ದಕ್ಕೆ ವಿರುದ್ಧವಾಗಿಯೇ ಮಾಡುವ ಕಾಂಗ್ರೆಸ್ಸಿಗರು, ತಮಗೆ ಸಂಬಂಧವೇ ಇಲ್ಲವೆಂಬಂತಿದ್ದಾರೆ. ಭವಿಷ್ಯದಲ್ಲಿ ಎಂದಾದರೂ ಮೋದಿ ಟಿವಿಯಲ್ಲಿ ಬಂದು, ʼಇಂದಿನಿಂದ ಎಲ್ಲರೂ ಕಡ್ಡಾಯವಾಗಿ ಇಷ್ಟು ಬಾರಿ ಉಸಿರು ತೆಗೆದುಕೊಳ್ಳಲೇಬೇಕುʼ ಎಂದು ಹೇಳದಿದ್ದರೆ ಸಾಕಿತ್ತು. ಏಕೆಂದರೆ ಹಲವಾರು ಎಡಚರರು ಹಾಗೂ ಕಾಂಗ್ರೆಸ್ಸಿಗರು ಉಸಿರಾಟವನ್ನೇ ನಿಲ್ಲಿಸುವ ಅಪಾಯವಿದೆ.

ಮೋದಿಯ ಮಿತವ್ಯಯದ ಕರೆಯನ್ನು ಹಾಸ್ಯ ಮಾಡುತ್ತಿರುವ ಬಿಜೆಪಿಯ ಮುಖ್ಯಮಂತ್ರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳು ಒಂದು ವಿಚಾರವನ್ನು ಮರೆತಿದ್ದಾರೆ. ಹಾಗೆಯೇ ನಾವು ಕೂಡ ಅದನ್ನು ಮರೆತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಹೇಳಿರುವ ಮಿತವ್ಯಯವು ಸಾಮಾನ್ಯ ಜನರಿಗೆ ಸಂಬಂಧಪಟ್ಟಿದ್ದಾಗಿದೆ. ಆದರೆ ಸರ್ಕಾರದಲ್ಲಿನ ಸವಲತ್ತು ಹಾಗೂ ಸೇವೆಯು ಸಾರ್ವಜನಿಕ ತೆರಿಗೆ ಹಣದ ವ್ಯಾಪ್ತಿಗೆ ಬರುತ್ತದೆ.
ಇದರಲ್ಲಿಯೂ ಮಿತವ್ಯಯದ ನಾಟಕವನ್ನು ಮಾಡಲು ಹೋದರೆ ಜಗತ್ತಿನ ಮುಂದೆ ಬೆತ್ತಲಾದಂತಾಗುತ್ತದೆ. ಏಕೆಂದರೆ ಸಾರ್ವಜನಿಕ ಹಣವನ್ನು ಮನಸ್ಸಿಗೆ ಬಂದಂತೆ ಪೋಲು ಮಾಡುತ್ತಿದ್ದರೆ, ಅದು ಅಪರಾಧ ಹಾಗೂ ಭ್ರಷ್ಟಾಚಾರವಾಗುತ್ತದೆ. ವಿಪರ್ಯಾಸವೆಂದರೆ ಕಳೆದ ಕೆಲ ವರ್ಷಗಳಿಂದ ಈ ದೇಶದಲ್ಲಿ ಸಾರ್ವಜನಿಕ ಹಣದಲ್ಲಿ ಮೋಜು-ಮಸ್ತಿ ಮಾಡುವುದೇ ನಿಯಮವಾಗಿಬಿಟ್ಟಿದೆ.
ಇಂದು ತುಮಕೂರಿನಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶದಿಂದ ಹಿಡಿದು, ಪ್ರಧಾನಿಯ ಹಲವು ರಾಜಕೀಯ ಸಭೆಗಳು ಕೆಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹೆಸರಲ್ಲಿ ನಡೆಯುತ್ತಿವೆ. ಸಾರ್ವಜನಿಕ ತೆರಿಗೆ ಹಣದಲ್ಲಿ ಆಡಳಿತಾರೂಢ ಪಕ್ಷಗಳ ರಾಜಕೀಯ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ. ಇತ್ತೀಚಿನ ಬಹುತೇಕ ಮುಖ್ಯಮಂತ್ರಿ, ಸಚಿವರು ಬಸ್, ಕಾರಿನ ಪ್ರಯಾಣವನ್ನೇ ಮರೆಯುತ್ತಿದ್ದಾರೆ. ನೂರು ಕಿ.ಮೀ ಪ್ರಯಾಣಕ್ಕೂ ಹೆಲಿಕಾಪ್ಟರ್ ಬುಕ್ ಮಾಡುತ್ತಿದ್ದಾರೆ.
ರಾಜ್ಯದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಲು ವಿಶೇಷ ವಿಮಾನಗಳನ್ನು ಬುಕ್ ಮಾಡುತ್ತಿದ್ದಾರೆ. ಯಾವುದೇ ಜೀವ ಬೆದರಿಕೆಯಿಲ್ಲದ ಸಚಿವರುಗಳ ಹಿಂದೆ ಮುಂದೆ ಹತ್ತಾರು ಸರ್ಕಾರಿ ವಾಹನಗಳು ಸುತ್ತಾಡುತ್ತಿರುತ್ತವೆ. ಒಬ್ಬ ಸಚಿವರು, ಕಾರ್ಯದರ್ಶಿಗಳ ಕುಟುಂಬದ ಅಗತ್ಯಕ್ಕಾಗಿ ಅವರು ನಿಭಾಯಿಸುವ ಇಲಾಖೆಯಿಂದ ಹತ್ತಾರು ಕಾರುಗಳನ್ನು ರಿಸರ್ವ್ ಇಡಲಾಗುತ್ತದೆ. ಸಚಿವರ ಸಭೆಗೆ ಒಂದೇ ಕಚೇರಿಯಿಂದ ನಾಲ್ವರು ಅಧಿಕಾರಿಗಳು ಬರುವವರಿದ್ದರೆ ಐದು ಕಾರುಗಳು ಬರುತ್ತವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಟ್ಟಡಗಳಲ್ಲಿ ಮೂಲಭೂತ ಸೌಕರ್ಯವಿದ್ದರೂ ಅನೇಕ ಕಾರ್ಯಕ್ರಮಗಳು ಸ್ಟಾರ್ ಹೋಟೆಲ್ ಅಥವಾ ಕನ್ವೆನ್ಷನಲ್ ಹಾಲ್ನಲ್ಲಿ ನಡೆಯುತ್ತವೆ. ಸಾವಿರ ರೂಪಾಯಿಗೆ ಸಿಗುವ ವಸ್ತುಗಳಿಗೆ ದುಪ್ಪಟ್ಟು ಮೊತ್ತ ನಿಗದಿ ಮಾಡಲಾಗುತ್ತದೆ.
ಗುತ್ತಿಗೆ, ಟೆಂಡರ್ ಹೆಸರಲ್ಲಿ ಸಾರ್ವಜನಿಕರ ಹಣದಿಂದ ವ್ಯವಸ್ಥಿತ ಲೂಟಿಯಾಗುತ್ತದೆ. ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ಅಪವ್ಯಯದ ಬಗ್ಗೆ ಸಾವಿರಾರು ಪುಟಗಳ ಪುಸ್ತಕವನ್ನೇ ಮಾಡಬಹುದು. ವಿಧಾನಸೌಧ ಹಾಗೂ ಸಂಸತ್ ಭವನಕ್ಕೆ ಹೋಗಿ ಪ್ರತಿಯೊಬ್ಬ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಬಳಿ ಕುಳಿತರೆ ಈ ಬಗ್ಗೆ ಪಿಎಚ್ಡಿ ಪೇಪರ್ ಸಲ್ಲಿಸುವಷ್ಟು ಮಾಹಿತಿಗಳು ಸಿಗುತ್ತವೆ. ಪ್ರತಿಯೊಬ್ಬರೂ ಅಷ್ಟೊಂದು ಮಾಹಿತಿ ಸಂಪನ್ಮೂಲ ನೀಡುವಷ್ಟು ಅನುಭವ ಹೊಂದಿದ್ದಾರೆ.
ಅಂದ್ಹಾಗೆ ಇದ್ಯಾವುದೇ ವಿಚಾರಗಳು ಖಾಸಗಿಯಾಗಿ ಉಳಿದಿಲ್ಲ. ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ನಮ್ಮ ಆಡಳಿತ ವ್ಯವಸ್ಥೆಯ ಐಷಾರಾಮಿ ವೆಚ್ಚದ ಬಗ್ಗೆ ಮಾಹಿತಿಯಿದೆ. ಹೀಗಿರುವಾಗ ಪ್ರಧಾನಿ ಮೋದಿ ಹೇಳಿದರೆಂದು ಒಂದು ದಿನದ ಮಟ್ಟಿಗೆ ಕ್ಯಾಮೆರಾ ಇರುವವರೆಗೆ ಮೆಟ್ರೋ ಪ್ರಯಾಣದ ನಾಟಕ ಮಾಡುವುದು, ಸೈಕಲ್ ಹೊಡೆಯುವುದು, ಬೆಂಗಾವಲು ಪಡೆಯ ವಾಹನ ಬಿಡುವುದು, ಸ್ಟಾರ್ ಹೋಟೆಲ್ ವಾಸ್ತವ್ಯ ನಿಲ್ಲಿಸುವುದಂತಹ ನಾಟಕ ಮಾಡಿದರೆ ನಗೆಪಾಟಲು ಆಗಬೇಕಾಗುತ್ತದೆ.
ಅಷ್ಟಕ್ಕೂ ಇವೆಲ್ಲ ಪ್ರಧಾನಿ ಮೋದಿ ಹೇಳಿದರೆಂದು ಮಿತವ್ಯಯ ಮಾಡಬೇಕಾದ ವಿಚಾರವಲ್ಲ. ಒಬ್ಬ ಜವಾಬ್ದಾರಿಯುತ ಜನಸೇವಕರಾಗಿ ಪ್ರತಿ ದಿನವೂ ಪಾಲಿಸಬೇಕಾದ ಕರ್ತವ್ಯವದು.
ನಮ್ಮ ತೆರಿಗೆ ದುಡ್ಡನ್ನು ನೋಡಿಕೊಂಡು ಖರ್ಚು ಮಾಡಲೆಂದೇ ನಿಮ್ಮನ್ನೆಲ್ಲ ಆರಿಸಿ ವಿಧಾನಸೌಧ, ಲೋಕಸಭೆಗೆ ಕಳುಹಿಸಿದ್ದು. ಮಿತವ್ಯಯ ಎನ್ನುವುದು ಅಧಿಕಾರದ ಮೊದಲ ಕ್ಷಣದಿಂದಲೇ ಶುರುವಾಗಿ, ಅಧಿಕಾರದಿಂದ ಇಳಿಯುವವರೆಗೂ ಇರಬೇಕು. ಅಧಿಕಾರ ಇರುವ ಯಾವುದೇ ಕ್ಷಣದಲ್ಲೂ ಮಿತವ್ಯಯ ಎನ್ನುವ ಶಬ್ದವು ವಿಶೇಷವಾಗಕೂಡದು. ಅದು ದೈನಂದಿನ ಹಾಗೂ ಸಾಮಾನ್ಯವಾಗಿರಬೇಕು. ಸಾರ್ವಜನಿಕ ಹಣದಲ್ಲಿ ಪಟಾಲಂ ಕಟ್ಟಿಕೊಂಡು ಉತ್ಸವ ಮಾಡುವುದು ಸುದ್ದಿಯಾಗಬೇಕು ಹಾಗೂ ಚರ್ಚೆಯ ವಿಷಯವಾಗಬೇಕು. ಆದರೆ ಕ್ಯಾಮೆರಾ ಎದುರಿಗಿನ ಮಿತವ್ಯಯವು ಸುದ್ದಿಯಾಗುವುದು ಹಾಸ್ಯಾಸ್ಪದ.
ಅಂದ್ಹಾಗೆ ಒಂದಿಷ್ಟು ನಾಯಕರು ತಮಗಿದ್ದ ಭದ್ರತಾ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ. ಈ ಬಗ್ಗೆ ಅಭಿಪ್ರಾಯ ನೀಡುವಷ್ಟು ಜ್ಞಾನ ನನಗಿಲ್ಲ. ಆದರೆ ನಿಜವಾಗಿಯೂ ಜೀವ ಬೆದರಿಕೆ ಹೊಂದಿರುವ ಗಣ್ಯರ ಭದ್ರತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಕೂಡದು. ಮಿತವ್ಯಯದ ಹೆಸರಲ್ಲಿ ಬೇರೆ ರೀತಿಯ ಅವಘಡ ಆಗಕೂಡದು.
ಮಿತವ್ಯಯದ ಬಗ್ಗೆ ನಿಜವಾದ ಕಾಳಜಿಯಿದ್ದರೆ ಹೀಗೆ ಮಾಡಿ ತೋರಿಸಿ. ಅಂದ್ಹಾಗೆ ಈ ಮಿತವ್ಯಯವು ಜನಪ್ರತಿನಿಧಿಗಳು ಅಧಿಕಾರದಲ್ಲಿ ಇರುವ ಐದು ವರ್ಷಕ್ಕೆ ಹಾಗೂ ಹಾಗೂ ಅಧಿಕಾರಿಗಳು ಸೇವೆಯಲ್ಲಿರುವ ದಶಕಗಳ ಕಾಲ ಅನ್ವಯವಾಗಬೇಕು.
1. ತುರ್ತು ಸಂದರ್ಭ ಹೊರತುಪಡಿಸಿ ಉಳಿದ ಕಡೆ ಕ್ಷೇತ್ರ ಹಾಗೂ ರಾಜ್ಯ ಪರ್ಯಟನೆಗೆ ಉಚಿತವಾಗಿ ಸಾರ್ವಜನಿಕ ಸಾರಿಗೆಗಳನ್ನೇ ಬಳಸಿ. ಇದರಿಂದ ಸಾರ್ವಜನಿಕ ಸಾರಿಗೆಯ ಗುಣಮಟ್ಟ ಏರಿಕೆಯ ಜೊತೆಗೆ ರಸ್ತೆಯ ಅವ್ಯವಸ್ಥೆ ಕೂಡ ಗಮನಕ್ಕೆ ಬರುತ್ತದೆ.
2. ಮುಖ್ಯಮಂತ್ರಿಗಳ ಪ್ರಮಾಣವಚನ ಸೇರಿ ಇನ್ನಿತರ ಯಾವುದೇ ಕಾರ್ಯಕ್ರಮಕ್ಕೆ ಬೇರೆ ರಾಜ್ಯ, ದೇಶ, ನಗರಗಳಿಗೆ ಭೇಟಿ ನೀಡುವಾಗ, ಸಾರ್ವಜನಿಕ ವಿಮಾನದಲ್ಲಿ ಜನಸಾಮಾನ್ಯರೊಂದಿಗೆ ಎಕಾನಮಿ ಸೀಟ್ನಲ್ಲೇ ಪ್ರಯಾಣ ಮಾಡಿ. ಪ್ರತಿಯೊಬ್ಬರೂ ಚಾರ್ಟೆಡ್ ವಿಮಾನ ಬುಕ್ ಮಾಡಿಕೊಂಡು ಹೋಗಿ, ಇಲ್ಲಿ ಮೆಟ್ರೋ ಪ್ರಯಾಣದ ನಾಟಕವಾಡಬೇಡಿ.
3. ಸರ್ಕಾರಿ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಸರ್ಕಾರಿ ಕಟ್ಟಡ ಹಾಗೂ ಸಾರ್ವಜನಿಕ ಪ್ರದೇಶಗಳನ್ನು ಮಾತ್ರ ಬಳಸಿ.
4. ರಾಜಕೀಯ ಸಮಾವೇಶಗಳಿಗೆ ಸರ್ಕಾರದ ದುಡ್ಡು ಬಳಸುವುದನ್ನು ನಿಲ್ಲಿಸಿ.
5. ಶಕ್ತಿ ಪ್ರದರ್ಶನಕ್ಕೆ ಪ್ರಯಾಣದ ವೇಳೆ ನೂರಾರು ಹಿಂಬಾಲಕರ ಕಾರುಗಳ ಮೇಳ ಹೋಗುವುದಕ್ಕೆ ನಿಷೇಧ ಹೇರಿ. ಇದರಿಂದ ಸಾರ್ವಜನಿಕರ ಪ್ರಯಾಣವೂ ಸುಗಮವಾಗುತ್ತದೆ.
6. ಸರ್ಕಾರಿ ಕಾರ್ಯಕ್ರಮಗಳಿಗೆ ಜನಸಾಮಾನ್ಯರು ಸೇವಿಸುವ ಸಾಮಾನ್ಯ ಆಹಾರಗಳ ವಿತರಣೆ ಮಾಡಿ. ಬದಲಾಗಿ ಸ್ಟಾರ್ ಹೋಟೆಲ್ನ ದುಬಾರಿ ಆಹಾರ ಪೂರೈಕೆಯ ಅಗತ್ಯವಿಲ್ಲ. ಜನಪ್ರತಿನಿಧಿಗಳು ನೇರವಾಗಿ ಸ್ವರ್ಗದಿಂದ ಇಳಿದುಬಂದವರೇನಲ್ಲ. ವಿದೇಶಿ ಗಣ್ಯರು ಹಾಗೂ ಕೆಲ ಕಾರ್ಯಕ್ರಮಗಳಿಗೆ ಐಷಾರಾಮಿತನ ಮೀಸಲಿದ್ದರೆ ಸಾಕು.
7. ರಾಜಕೀಯದಲ್ಲಿ ಭ್ರಷ್ಟಾಚಾರ ರಹಿತ ಎನ್ನುವುದನ್ನು ಕನಸಿನಲ್ಲೂ ನಂಬಲಾಗದು. ಆದರೆ ಈ ಲೂಟಿ ಕಾರ್ಯಕ್ರಮದಲ್ಲೂ ಮಿತವ್ಯಯಿಗಳಾಗಿ.
8. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಕಳುಹಿಸಿ ಮಿತವ್ಯಯಿಗಳಾಗಬೇಕಿದೆ. ಇದರಿಂದ ಸರ್ಕಾರಿ ಶಾಲೆಯೂ ಉದ್ಧಾರವಾಗುತ್ತದೆ. ಇದರಿಂದ ಸಮಾಜದ ಉಳಿದ ವರ್ಗವೂ ಸರ್ಕಾರಿ ಶಾಲೆಯತ್ತ ಮುಖ ಮಾಡಿ, ದೊಡ್ಡ ಪ್ರಮಾಣದಲ್ಲಿ ಮಿತವ್ಯಯ ಮಾಡಬಹುದು.
ಹಾಗೆಯೇ ಸರ್ಕಾರಿ ಆಸ್ಪತ್ರೆಗಳಲ್ಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕಡ್ಡಾಯ ಚಿಕಿತ್ಸೆಯ ಮಿತವ್ಯಯ ನಿಯಮ ಜಾರಿ ಮಾಡಿದರೆ, ಗುಣಮಟ್ಟ ಏರಿಕೆಯಿಂದ ಸಾರ್ವಜನಿಕರಿಗೆ ಮಿತವ್ಯಯ ಸುಲಭವಾಗುತ್ತದೆ. ಭಾರತದಲ್ಲಿ ಆರೋಗ್ಯ ಹಾಗೂ ಶಿಕ್ಷಣದಲ್ಲಿ ಮಿತವ್ಯಯ ಸಾಧಿಸಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗ. ನಾವು ಎಣಿಸಲಾರದಷ್ಟು ಹಣವನ್ನು ಇವೆರಡರಿಂದ ಉಳಿಸಬಹುದು. ಇವೆರಡರ ನಿಯಂತ್ರಣವಾದರೆ, ಇನ್ನೊಂದು ವರ್ಷ ಯುದ್ಧ ನಡೆದರೂ ತಲೆಕೆಡಿಸಿಕೊಳ್ಳದ ಸಂದರ್ಭ ನಿರ್ಮಾಣವಾಗಬಹುದು.
9. ಶಕ್ತಿಸೌಧಗಳಲ್ಲಿ ಖಜಾನೆಗೆ ತಾವೇ ಮಾಲೀಕರು ಎನ್ನುವ ಭ್ರಮೆಯಿಂದ ಅನರ್ಹರಿಗೂ ಉಚಿತವಾಗಿ ಹಂಚುವ ದೌಲತ್ತಿನಲ್ಲೂ ಮಿತವ್ಯಯ ಮಾಡಬೇಕಿದೆ. ಸರ್ಕಾರಗಳು ಈ ವಲಯದಲ್ಲಿ ಮಿತವ್ಯಯ ಸಾಧಿಸಿದರೆ, ಜನರ ನೈಜ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕೊಡಿಸಲು ಸಾಧ್ಯವಾಗುತ್ತದೆ.
ರಾಜಕಾರಣಿಗಳ ಗಮನಕ್ಕೆ: ಮೋದಿಯ ಮನವಿಯಲ್ಲಿ ನೈಜ ಕಾಳಜಿಯು ಬಹುತೇಕ ಜನಸಾಮಾನ್ಯರಿಗೆ ಕಾಣಿಸುತ್ತದೆ. ಕೆಲವು ವಿರೋಧಾಭಾಸಗಳಿದ್ದರೂ, ಒಪ್ಪಬಹುದಾಂತಹ ಸಲಹೆಗಳವು. ಆದರೆ ದಯವಿಟ್ಟು ಇದನ್ನು ಪ್ರಚಾರದ ಸರಕಾಗಿಸಿಕೊಂಡು ಜನಸಾಮಾನ್ಯರನ್ನು ಆಡಿಕೊಳ್ಳಬೇಡಿ.
ಕೋವಿಡ್ ನಂತರದ ವರ್ಷಗಳಲ್ಲಿ ಸರ್ಕಾರ ಹೇಳದಿದ್ದರೂ ಮಿತವ್ಯಯವು ಬಹುತೇಕ ಜನಸಾಮಾನ್ಯರ ಜೀವನದ ಭಾಗವಾಗಿ ಹೋಗಿದೆ. ಖರ್ಚು ಮಾಡುವ ಮನಸ್ಸಿದ್ದರೂ, ಆರ್ಥಿಕ ಶಕ್ತಿ ಉಳಿದಿಲ್ಲ ಅಥವಾ ಭವಿಷ್ಯದ ಅನಿಶ್ಚಿತತೆಯ ಭಯದಲ್ಲಿ ಬೇಡವಿನಿಸುವ ಹಾಗಿದೆ. ಆದರೆ ಸರ್ಕಾರ ಮಟ್ಟದಲ್ಲಿ ಇದು ವಿರುದ್ಧವಾದ ದಿಕ್ಕಿನಲ್ಲಿ ಸಾಗಿದೆ. ಕಳೆದ ಕೆಲ ವರ್ಷಗಳಿಂದ ಅಧಿಕಾರದಲ್ಲಿರುವವರ ದುಂದು ವೆಚ್ಚಕ್ಕೆ ಕೇಳುವವರೇ ಇಲ್ಲವೆಂದಂತಾಗಿದೆ.
ಕೊನೆಯದಾಗಿ: ಪ್ರಧಾನಿ ಮೋದಿಯು ಒಳ್ಳೆಯ ಇರಾದೆಯಲ್ಲಿ ಮಾಡಿದ ವಿಚಾರವನ್ನು ಹಾಸ್ಯವಾಗಿಸುವ ಕಲೆಯನ್ನು ಒಂದಿಷ್ಟು ಬಿಜೆಪಿ ನಾಯಕರಿಂದ ಕಲಿಯಬೇಕು. ವಿಜಯೇಂದ್ರ ಅವರ ಸಣ್ಣ ಉದಾಹರಣೆಯನ್ನು ತೆಗೆದುಕೊಳ್ಳೋಣ. ಮೋದಿ ಹೇಳಿದಾಕ್ಷಣ ಒಂದು ಗಂಟೆಗಳ ಕಾಲ ಮೆಟ್ರೋದಲ್ಲಿ ಪ್ರಯಾಣ ಮಾಡಿ ನಾಟಕವಾಡುವ ವಿಜಯೇಂದ್ರರಿಗೆ, ಕೆಲ ದಿನಗಳ ಹಿಂದೆ ದಾವಣಗೆರೆ ಸಮಾವೇಶಕ್ಕೆ ಮಾಡಿದ ʼಮಿತವ್ಯಯʼ ನೆನಪಾಗಲಿಲ್ಲ ಎನಿಸುತ್ತದೆ.
ನಿಮ್ಮ ಈ ರೀತಿಯ ವರ್ತನೆಗಳನ್ನು ಜನಸಾಮಾನ್ಯರು ಗಮನಿಸುವುದಿಲ್ಲ ಎಂದುಕೊಳ್ಳಬೇಡಿ. ಪ್ರಧಾನಿ ಹೇಳಿರುವ ಮಿತವ್ಯಯವನ್ನು ನಮ್ಮ ಕೈನಲ್ಲಿ ಆದಷ್ಟು ಪ್ರತಿ ದಿನವೂ ಮಾಡುತ್ತೇವೆ. ಈ ರೀತಿ ಮೆಟ್ರೋ ನಾಟಕವಾಡುವ ಬದಲಿಗೆ, ಬೆಲೆ ಏರಿಕೆಯಾದಾಗ ಇದೇ ಮೆಟ್ರೋ ನಿಲ್ದಾಣಕ್ಕೆ ಬಂದು ʼಮಿತವ್ಯಯʼಕ್ಕಾಗಿ ಪ್ರತಿಭಟನೆ ಮಾಡಿದ್ದರೆ ಖುಷಿಯಾಗುತ್ತಿತ್ತು. ನಮ್ಮ ಭಾವನೆಗಳೊಂದಿಗೆ ಆಟವಾಡುವುದನ್ನು ಬಿಟ್ಟು, ನಿಜವಾದ ಜನಪರ ಕೆಲಸಗಳನ್ನು ಮಾಡಿ.












Click it and Unblock the Notifications