ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಘೋಷಿಸಿದ ಸೋನಿಯಾ ಗಾಂಧಿ: ಮೀಸಲು ಕ್ಷೇತ್ರಗಳಲ್ಲಿ ಒಬಿಸಿ ಕೋಟಾಗೆ ಒತ್ತಾಯ
ನವದೆಹಲಿ, ಸೆಪ್ಟೆಂಬರ್ 20: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿಯನ್ನು ನೀಡುವ ವಿಚಾರವಾಗಿ ಕೇಂದ್ರ ಮಸೂದೆ ಮಂಡಿಸಿದೆ. ಈ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಹಿಳಾ ಮೀಸಲಾತಿ ಮಸೂದೆಗೆ ತಮ್ಮ ಬೆಂಬಲವನ್ನು ಘೋಷಿಸಿದರು.
'ನಾನು ನಾರಿ ಶಕ್ತಿ ವಂದನ್ ಅಧಿನಿಯಮ್ 2023 ರ ಬೆಂಬಲಕ್ಕೆ ನಿಂತಿದ್ದೇನೆ. ಇದು ಕಾಂಗ್ರೆಸ್ ಪಕ್ಷದ ಒಮ್ಮತದ ನಿರ್ಧಾರವಾಗಿದೆ' ಎಂದು ತಿಳಿಸಿದರು.

ಮಹಿಳಾ ಮೀಸಲಾತಿಯು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕನಸಾಗಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ನೀಡಲು ರಾಜೀವ್ ಗಾಂಧಿ ಸಾಂವಿಧಾನಿಕ ತಿದ್ದುಪಡಿಯನ್ನು ತಂದರು. ಇದರ ಶ್ರೇಯಸ್ಸು ಅವರಿಗೂ ಸಲ್ಲಬೇಕು ಎಂದು ಸೋನಿಯಾ ಹೇಳಿದರು.
'ಮಹಿಳಾ ಮೀಸಲಾತಿ ಕುರಿತು ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಈ ಹಿಂದೆ ಮಸೂದೆ ಮಂಡಿಸಿತ್ತು. ಆದರೆ, ರಾಜ್ಯಸಭೆಯಲ್ಲಿ 7 ಮತಗಳಿಂದ ಸೋಲು ಕಂಡಿತು. ನಂತರ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯಸಭೆಯಲ್ಲಿ ಇದನ್ನು ಅಂಗೀಕರಿಸಿತು' ಎಂದು ಅವರು ತಿಳಿಸಿದರು.
'ಇದರ ಪರಿಣಾಮವಾಗಿ ಸ್ಥಳೀಯ ಸಂಸ್ಥೆಗಳ ಮೂಲಕ ದೇಶಾದ್ಯಂತ 15 ಲಕ್ಷ ಮಹಿಳಾ ನಾಯಕರನ್ನು ಆಯ್ಕೆ ಮಾಡಿದ್ದೇವೆ. ರಾಜೀವ್ ಗಾಂಧಿ ಅವರ ಕನಸು ಭಾಗಶಃ ಪೂರ್ಣಗೊಂಡಿತ್ತು. ಈ ಮಸೂದೆಯ ಅಂಗೀಕಾರದೊಂದಿಗೆ ಅದು ಪೂರ್ಣಗೊಳ್ಳುತ್ತದೆ' ಎಂದು ಅವರು ಲೋಕಸಭೆಗೆ ಹೇಳಿದರು.

'ಭಾರತೀಯ ಮಹಿಳೆಗೆ ಸಾಗರದಂತೆ ತಾಳ್ಮೆ ಇದೆ. ಅವರು ನದಿಯಂತೆ ಎಲ್ಲರ ಅಭ್ಯುದಯಕ್ಕಾಗಿ ಶ್ರಮಿಸಿದ್ದಾರೆ' ಎಂದು ಸೋನಿಯಾ ಗಾಂಧಿ ಹೇಳಿದರು. ಈ ಮಸೂದೆಯನ್ನು ತಕ್ಷಣ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು.
'ಕಾಂಗ್ರೆಸ್ ಪಕ್ಷವು ಈ ಮಸೂದೆಯನ್ನು ಬೆಂಬಲಿಸುತ್ತದೆ. ಮಸೂದೆಯ ಅಂಗೀಕಾರದ ಬಗ್ಗೆ ನಮಗೆ ಸಂತೋಷವಾಗಿದೆ. ಈ ಮಸೂದೆ ಆದಷ್ಟು ಬೇಗನೇ ಜಾರಿಗೆ ಬರಬೇಕು. ಭಾರತದ ಮಹಿಳೆಯನ್ನು ಇನ್ನು ಮುಂದೆ ಕಾಯಿಸುವುದು ಸೂಕ್ತವಲ್ಲ. ಭಾರತದ ಮಹಿಳೆಯರೊಂದಿಗೆ ಈ ನಡವಳಿಕೆಗಳು ಬದಲಾಗಬೇಕು' ಎಂದು ಅವರು ಹೇಳಿದರು.
'ಈ ಮಸೂದೆಯನ್ನು ತಕ್ಷಣವೇ ಜಾರಿಗೆ ತರಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತದೆ. ಈಗ ಜಾತಿ ಗಣತಿಯನ್ನು ಸಹ ಮಾಡಬೇಕು. ಎಸ್‌ಇ, ಎಸ್‌ಟಿ ಮತ್ತು ಒಬಿಸಿ ಮಹಿಳೆಯರಿಗೆ ಮೀಸಲಾತಿಗಾಗಿ ವ್ಯವಸ್ಥೆ ಮಾಡಬೇಕು' ಎಂದು ಸೋನಿಯಾ ಒತ್ತಾಯಿಸಿದರು.

'ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸುವಲ್ಲಿ ಯಾವುದೇ ವಿಳಂಬವನ್ನು ಮಾಡಬಾರದು. ಒಂದು ವೇಳೆ, ವಿಳಂಬವಾದರೆ, ಭಾರತೀಯ ಮಹಿಳೆಯರಿಗೆ ಘೋರ ಅನ್ಯಾಯವಾಗುತ್ತದೆ' ಎಂದು ಸೋನಿಯಾ ಗಾಂಧಿ ಹೇಳಿದರು.
ಹೊಸ ಸಂಸತ್ ಭವನದಲ್ಲಿ ಮಂಗಳವಾರ ಮಂಡಿಸಲಾದ 'ನಾರಿ ಶಕ್ತಿ ವಂದನ್ ಅಧಿನಿಯಂ 2023' ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದೆ.












Click it and Unblock the Notifications