ಪಾಕ್ ವಶದಲ್ಲಿರುವ ಭಾರತೀಯ ಪೈಲೆಟ್ ಅಭಿನಂದನ್ ಶುಕ್ರವಾರ ಬಿಡುಗಡೆ
ಇಸ್ಲಾಮಾಬಾದ್, ಫೆಬ್ರವರಿ 28: ಪಾಕಿಸ್ತಾನ ಸೇನೆಯ ವಶದಲ್ಲಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ನಾಳೆ ಬಿಡುಗಡೆಗೊಳ್ಳಲಿದ್ದಾರೆ.
ಈ ವಿಷಯವನ್ನು ಪಾಕಿಸ್ತಾನ ಸಂಸತ್ತಿನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಹೇಳಿದ್ದಾರೆ. ಶಾಂತಿ ಸೂಚಕವಾಗಿ ಅಭಿನಂದನ್ ಅವರನ್ನು ಬಿಡುಗಡೆ ಮಾಡುತ್ತಿರುವುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ.
ಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣ
ಭಾರತದ ಗಡಿಯ ಮೇಲೆ ದಾಳಿ ಮಾಡಲು ಯತ್ನಿಸಿದ ಪಾಕ್ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸುವ ಭರದಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕ್ ಗಡಿ ಪ್ರವೇಶಿಸಿದರು. ಅವರ ಮಿಗ್ ವಿಮಾನವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೆಳಗುರುಳಿದ ಪರಿಣಾಮ ಅವರು ಪಾಕ್ ಸೈನ್ಯದ ಕೈಗೆ ಸಿಕ್ಕಿ ಬಿದ್ದಿದ್ದರು.

ಭಾರತದಿಂದ ತೀವ್ರ ಒತ್ತಡ
ಸೆರೆಯಲ್ಲಿರುವ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಹಾಗೂ ಶೀಘ್ರವಾಗಿ ವಾಪಸ್ ಕಳಿಹಿಸುವಂತೆ ಭಾರತವು ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಲೇ ಇತ್ತು. ಪಾಕಿಸ್ತಾನದ ರಾಯಭಾರಿಯೊಂದಿಗೆ ವಿದೇಶಾಂಗ ಇಲಾಖೆ ಸಂಪರ್ಕ ಮಾಡಿ ಅಭಿನಂದನ್ ಬಿಡುಗಡೆಗೆ ಒತ್ತಾಯ ಮಾಡಿತ್ತು.
ಬಾಲಾಕೋಟ್ ಟೆರರಿಸ್ಟ್ ಕ್ಯಾಂಪ್ ಬಗ್ಗೆ ಬೆಚ್ಚಿ ಬೀಳಿಸುವ ಸಂಗತಿಗಳು

ಶಾಂತಿಯ ಸೂಚಕವಾಗಿ ಬಿಡುಗಡೆ
ಶಾಂತಿ ಮಾತುಕತೆಗೆ ತುದಿಗಾಲಲ್ಲಿ ನಿಂತಿರುವ ಪಾಕಿಸ್ತಾನವು ಶಾಂತಿ ಸೂಚಕವಾಗಿ ಅಭಿನಂದನ್ ಅವರನ್ನು ಬಿಡುಗಡೆ ಮಾಡುತ್ತಿದೆ. ಇದನ್ನು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವು ಎಂದೇ ಕರೆಯಲಾಗುತ್ತಿದೆ.
ಪೈಲಟ್ ಅಭಿನಂದನ್ ಬಿಡುಗಡೆಗೆ ಪಾಕ್ ರೆಡಿ, ಆದರೆ....

ನಿನ್ನೆಯಿಂದ ಪಾಕ್ ಸೇನೆಯ ವಶದಲ್ಲಿ
ನಿನ್ನೆಯಿಂದ ಅಭಿನಂದನ್ ಅವರು ಪಾಕಿಸ್ತಾನದ ಸೇನೆಯ ವಶದಲ್ಲಿ ಇದ್ದರು. ಭಾರತೀಯರು ಸಹ ಅವರ ಸುರಕ್ಷಿತ ವಾಪಸ್ಸಾತಿಗೆ ಪ್ರಾರ್ಥಿಸಿದ್ದರು. ಕೆಲವು ಪಾಕಿಸ್ತಾನಿಯರು ಸಹ ಅಭಿನಂದನ್ ಅವರನ್ನು ಮರಳಿ ಕಳುಹಿಸಬೇಕು ಎಂದು ಒತ್ತಾಯಿಸಿದ್ದರು.

ಶಾಂತಿ ಮಾತುಕತೆಗೆ ಮುನ್ನುಡಿ?
ಭಾರತೀಯರ ಆಶಯದಂತೆ ಭಾರತದ ಹೆಮ್ಮೆಯ ಸೈನಿಕ ಅಭಿನಂದನ್ ಅವರು ನಾಳೆ ಮಾತೃ ದೇಶಕ್ಕೆ ವಾಪಸ್ಸಾಗುತ್ತಿದ್ದು, ಪಾಕಿಸ್ತಾನವು ತೆಗೆದುಕೊಂಡಿರುವ ಈ ನಿರ್ಣಯ ಎರಡು ದೇಶಗಳ ನಡುವಿನ ಉದ್ವಿಗ್ನವನ್ನು ಶಮನಗೊಳಿಸುವ ಸಾಧ್ಯತೆ ಇದೆ.