'ವಿದೇಶಿ ಕೈವಾಡ' ಜಪಿಸಿ ನಗೆಪಾಟಲಿಗೀಡಾದ ರಾಹುಲ್
ಸಾಗರ್ (ಮಧ್ಯಪ್ರದೇಶ), ಅ. 25: 'ಇತ್ತೀಚೆಗೆ ಮುಜಫ್ಫರನಗರದಲ್ಲಿ ತಾಂಡವವಾಡಿದ ಗಲಭೆಯಲ್ಲಿ ವಿದೇಶಿ ಕೈವಾಡ ಕಂಡುಬಂದಿದೆ. ಪಾಕಿಸ್ತಾನದ ISI ಸ್ಥಳೀಯ ಯುವಕರ ಮೇಲೆ ಪ್ರಭಾವ ಬೀರುತ್ತಿದೆ. ಭಯೋತ್ಪಾದನೆಯಲ್ಲಿ ತೊಡಗುವಂತೆ ಉದ್ರೇಕಿಸುತ್ತಿದೆ. ಇದನ್ನು ಗುಪ್ತಚರ ಸಂಸ್ಥೆಗಳು ದೃಢಪಡಿಸಿವೆ' ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ರಾಜಕೀಯ ಬಹಿರಂಗ ಸಮಾವೇಶದಲ್ಲಿ ಗುಡುಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಸಾವಿರಾರು ಕೋಟಿ ರೂಗಳ ಅನೇಕಾನೇಕ ಭ್ರಷ್ಟಾಚಾರ ಪ್ರಕರಣಗಳು ಕಣ್ಣೆದುರಿಗೆ ಇದ್ದರೂ ಅದರ ಬಗ್ಗೆ ಮಾತನಾಡದೆ ಕಳಂಕಿತ ರಾಜಕಾರಣಿಗಳನ್ನು ಸಂರಕ್ಷಿಸುವ ಸುಗ್ರೀವಾಜ್ಞೆ ಬಗ್ಗೆ 'ನಾನ್ ಸೆನ್ಸ್. ಅದನ್ನು ಕಸದಬುಟ್ಟಿಗೆ ಎಸೆಯಿರಿ' ಎಂದು ಬಹಿರಂಗವಾಗಿ ಸಾಕ್ಷಿಪ್ರಜ್ಞೆ ಮೆರೆದಿದ್ದ ರಾಹುಲ್ ಮತ್ತೊಮ್ಮೆ ಅಂತಹುದೇ ಅನಾಹುತವೆಸಗಿದ್ದಾರೆ ಎಂದು ಉತ್ತರಪ್ರದೇಶದಿಂದ ಹಿಡಿದು ದೇಶದೆಲ್ಲೆಡೆಯಿಂದಲೂ ಟೀಕಾಪ್ರಹಾರಗಳು ತೂರಿಬರುತ್ತಿವೆ.
ಅಂದಹಾಗೆ ಇಂದಿರಾ ಗಾಂಧಿ ಅವರೂ ಹೀಗೆಯೇ ತಮ್ಮ ಆಡಳಿತಾವಧಿಯಲ್ಲಿ ದೇಶದಲ್ಲಿ ಏನೇ ಅನಾಹುತ ನಡೆದರೂ ವಿದೇಶಿ ಕೈವಾಡ ಎಂದು ಆರೋಪಿಸಿ ಕೈತೊಳೆದುಕೊಳ್ಳುತ್ತಿದ್ದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು 'ನಾನು ಸೊಳ್ಳೆಗಳಿಂದ ಕಚ್ಚಿಸಿಕೊಂಡಿದ್ದೆ. ಹೊಟ್ಟೆಯಲ್ಲಿ ಹುಳಬಿದ್ದಿತ್ತು' ಎಂದಷ್ಟೇ ಹೇಳಿಲ್ಲ. ಪಾಕ್ ISI ಕೈವಾಡದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಚೋದ್ಯವೆಂದರೆ ಉತ್ತರ ಪ್ರದೇಶದ ಉನ್ನತ ಪೊಲೀಸ್ ಅಧಿಕಾರಿ ಪಾಕ್ ISI ಕೈವಾಡದ ಬಗ್ಗೆ ತಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ. ಮುಸ್ಲಿಮರನ್ನು ಓಲೈಕೆ ಮಾಡುವ ಭರದಲ್ಲಿ ಪಾಕ್ ISI ಕೈವಾಡವಿದೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ರಾಹುಲ್ ನಗೆಪಾಟಲಿಗೀಡಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಗುಪ್ತಚರ ಇಲಾಖೆ ಅಧಿಕಾರಿ ಮಾಹಿತಿ
'ಕೆಲ ದಿನಗಳ ಹಿಂದೆ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ನೇರವಾಗಿ ನನ್ನ ಕಚೇರಿಗೆ ಬಂದು ನೇರವಾಗಿ ನನಗೆ ಹೇಳಿದ್ದೇನೆಂದರೆ ಮುಜಫ್ಫರನಗರ ಗಲಭೆಯಲ್ಲಿ ಮೃತಪಟ್ಟ ಮುಸಲ್ಮಾನರ ಬಂಧುಗಳು ಜತೆ ಪಾಕಿಸ್ತಾನದ ಜನ ಮಾತನಾಡುತ್ತಿದ್ದಾರೆ. ಆದರೆ ಇದು ಪಾಕಿಸ್ತಾನದ ಕೃತ್ರಿಮ ನಾಟಕ. ಇದನ್ನು ನಂಬಬೇಡಿ ಎಂದು ಮುಜಫ್ಫರನಗರ ಮುಸಲ್ಮಾನರನ್ನು ತಾನು ಕೋರಿದ್ದಾಗಿಯೂ ಆ ಅಧಿಕಾರಿ ಹೇಳಿಹೋದರು' ಎಂದು ರಾಹುಲ್ ಬಹಿರಂಗ ಸಭೆಯಲ್ಲಿ ಹೇಳಿದ್ದರು.

ಕೋಮುದಳ್ಳುರಿ ಶಮನ ಮಾಡುವವರು ಯಾರು
'ಕೋಮುದಳ್ಳುರಿಯ ಈ ಜ್ವಾಲೆಗಳನ್ನು ಶಮನ ಮಾಡುವವರು ಯಾರು? ಕೇಸರಿ ಪಡೆ ಹಿಂದು ಮತ್ತು ಮುಸ್ಲಿಮರ ಮಧ್ಯೆ ವೈಷಮ್ಯ ಹುಟ್ಟುಹಾಕುತ್ತಿದೆ. ಕಾಂಗ್ರೆಸ್ ಪಕ್ಷವೇ ಈ ದಳ್ಳುರಿಯನ್ನು ತಹಬಂದಿಗೆ ತರಬೇಕಾಗಿರುವುದು. ಬಿಜೆಪಿಯ ಈ ನಡುವಳಿಕೆಯು ಭಾರತದ ಭದ್ರತೆ ಮತ್ತು ಐಕ್ಯತೆಗೆ ಭಂಗ ತಂದಿದೆ' ಎಂದು ರಾಹುಲ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ನಿನ್ನೆ ಇಂದೋರಿನಲ್ಲಿ ಹೇಳಿದ್ದಾರೆ.

ಕಿಡಿಕಾರಿದ ಅಜಾಂ ಖಾನ್
ಆದರೆ ಉತ್ತರಪ್ರದೇಶ ಸಚಿವ ಆಡಳಿತಾರೂಢ ಸಮಾಜವಾದಿ ಪಕ್ಷದ ನಾಯಕ ಅಜಾಂ ಖಾನ್, ಪಾಕಿಸ್ತಾನದ ISI ಕೈವಾಡದ ಬಗ್ಗೆ ರಾಹುಲ್ ಬಹಿರಂಗ ಹೇಳಿಕೆ ನೀಡುರುವುದರ ಬಗ್ಗೆ ತೀವ್ರ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಅವರಂತಹ ಜವಾಬ್ದಾರಿಯುತ ನಾಯಕರು ಯಾರದೋ ಕಿರಿಯ ಅಧಿಕಾರಿಯ ಮಾತು ಕೇಳಿಕೊಂಡು ಹೀಗೆ ಬಹಿರಂಗ ಹೇಳಿಕೆ ನೀಡಬಾರದಿತ್ತು. ಬಹಿರಂಗ ಸಭೆಯಲ್ಲಿ ಅದನ್ನು ಗಂಭೀರವಾಗಿ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ. ಅಂತಹ ಮಹತ್ವದ ವಿಷಯ ರಾಹುಲ್ ಬಾಬಾ ಕಿವಿಗೆ ಬೀಳುತ್ತಿದ್ದಂತೆ ಅವರು ಅದನ್ನು ಪ್ರಾಂಪ್ಟ್ ಆಗಿ ಉತ್ತರಪ್ರದೇಶ ಸರಕಾರದ ಗಮನಕ್ಕೆ ತರಬೇಕಿತ್ತು. ಮತ್ತು ಕೇಂದ್ರದಲ್ಲಿ ಸಂಬಂಧಪಟ್ಟ ಸಚಿವಾಲಯದ ಗಮನ ಸೆಳೆಯಬಹುದಿತ್ತು' ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಆಗ್ರಹ
'ರಾಹುಲ್ ಗಾಂಧಿ ಅವರು ಮುಜಫ್ಫರನಗರ ಗಲಭೆಯಲ್ಲಿ ಮುಸಲ್ಮಾನರ ಪಾತ್ರವಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಮುಸಲ್ಮಾನರತ್ತ ಬೊಟ್ಟು ಮಾಡಿ ತೋರಿಸಿದ್ದಾರೆ. ಇದರಿಂದ ಭಾರತೀಯ ಮುಸಲ್ಮಾನರ ದೇಶ ಪ್ರೇಮದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ದುರದೃಷ್ಟಕರ. ರಾಹುಲ್ ಗಾಂಧಿ ದೇಶದ ಮುಸಲ್ಮಾನರ ಕ್ಷಮೆಯಾಚಿಸಬೇಕು' ಎಂದು ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಅವರು ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶ ಪೊಲೀಸರಿಗೆ ISI ಮಾಹಿತಿಯಿಲ್ಲ
ಈ ಮಧ್ಯೆ, ಉತ್ತರ ಪ್ರದೇಶ ಪೊಲೀಸರು ಪಾಕಿಸ್ತಾನದ ISI ಗುಪ್ತಚರ ಅಧಿಕಾರಿಗಳು ಮುಜಫ್ಫರನಗರದಲ್ಲಿರುವ ಮುಸಲ್ಮಾನರ ಜತೆ ಸಂಪರ್ಕ ಸಾಧಿಸಿದ್ದಾರೆ ಎಂಬುದನ್ನು ಅಲ್ಲಗಳೆದಿದ್ದಾರೆ. ಆ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಅವರಿಗೆ (ರಾಹುಲ್ ಗಾಂಧಿ) ಬೇರೆ ಎಲ್ಲಿಂದ ಮಾಹಿತಿ ಬಂದಿದೆಯೋ ನಮಗೆ ಗೊತ್ತಿಲ್ಲ. ಅದನ್ನು ತಾಳೆಹಾಕಿ ನೋಡುವುದಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಮಹಾ ನಿರ್ದೇಶಕ ಮುಕುಲ್ ಗೋಯಲ್ ಅವರು ಲಖ್ನೋದಲ್ಲಿ ಇಂದು ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ. (ಚಿತ್ರ ಕೃಪೆ)












Click it and Unblock the Notifications