ಪಿ. ಚಿದಂಬರಂ ಸಂಬಂಧಿಯನ್ನು ಅಪಹರಿಸಿ ಕೊಲೆಗೈದ ಗ್ಯಾಂಗ್
ಚೆನ್ನೈ, ಜೂನ್ 27: ಮಾಜಿ ಕೇಂದ್ರ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ಪಿ. ಚಿದಂಬರಂ ಸಂಬಂಧಿಯೊಬ್ಬರನ್ನು ಅಪಹರಣ ಮಾಡಿ ಕೊಲೆ ಮಾಡಲಾಗಿದೆ. ಉಣ್ಣೆಯ ಬಟ್ಟೆಗಳ ರಫ್ತು ವ್ಯಾಪಾರಿ 47 ವರ್ಷದ ಶಿವಮೂರ್ತಿ ಈ ರೀತಿ ಕೊಲೆಯಾದವರಾಗಿದ್ದಾರೆ. ಇವರು ಸಂಬಂಧದಲ್ಲಿ ಚಿದಂಬರಂ ಅಳಿಯರಾಗಿದ್ದಾರೆ.
ಮೂವರು ಸದಸ್ಯರ ಗ್ಯಾಂಗ್ ಸೋಮವಾರ ರಾತ್ರಿ ಅವರನ್ನು ಕೊಲೆ ಮಾಡಿದೆ. ಅಂದೇ ಅವರ ಕುಟುಂಬಸ್ಥರು ಸಿ. ಶಿವಮೂರ್ತಿ ನಾಪತ್ತೆಯಾಗಿದ್ದಾರೆ ಎಂದು ತಿರುಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಾಹನಕ್ಕೆ ಅಳವಡಿಸಿದ ಜಿಪಿಆರ್ ಎಸ್ ಸಹಾಯದಿಂದ ಅಂದೇ ಶಿವಮೂರ್ತಿ ಅವರ ಕಾರನ್ನು ಪೊಲೀಸರು ಪತ್ತೆ ಮಾಡಿದ್ದರು. ಇದು ವೆಲ್ಲೋರ್ ಸಮೀಪ ಪತ್ತೆಯಾಗಿತ್ತು.

ಇದೇ ವೇಳೆ ಪೊಲೀಸ್ ಗಸ್ತು ವಾಹನ ವೆಂಗಿಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಕಾರನ್ನು ನಿಲ್ಲಿಸಿ ಮೂರು ಜನರನ್ನು ಬಂಧಿಸಿತ್ತು.
ಈ ಸಂದರ್ಭದಲ್ಲಿ ಆ ಮೂವರು, "ತಾವು ಶಿವಮೂರ್ತಿ ಅವರನ್ನು ತಿರುಪುರದಿಂದ ಅಪಹರಣ ಮಾಡಿ ಕೊಯಮತ್ತೂರು ಸಮೀಪದ ಮೆಟ್ಟುಪಾಲ್ಯಂಗೆ ಕರೆ ತಂದಿದ್ದೆವು. ನಂತರ ನಾವು ಅವರನ್ನು ಕೊಲೆ ಮಾಡಿ ಹೊಸೂರು ಸಮೀಪದ ಕೆರೆಗೆ ಎಸೆದಿದ್ದೇವೆ," ಎಂದು ಒಪ್ಪಿಕೊಂಡಿದ್ದರು.
ಆರೋಪಿಗಳನ್ನು ಕೊಯಮತ್ತೂರಿನ ಗೌತಮನ್, ವಿಮಲ್, ಮಣಿಭಾರತಿ ಎಂದು ಗುರುತಿಸಲಾಗಿದೆ. ಇವರು ನೀಡಿದ ಮಾಹಿತಿ ಮೇರೆಗೆ ಕೊಯಮತ್ತೂರಿನಿಂದ 35 ಕಿಲೋಮೀಟರ್ ದೂರದಲ್ಲಿರುವ ಕರಮಡೈನಲ್ಲಿ ಬುಧವಾರ ಬೆಳಿಗ್ಗೆ ಮತ್ತೋರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕೊಲೆಗೆ ಕಾರಣ ಏನು ಎಂಬುದು ಮಾತ್ರ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications