ಪ್ರಮಾಣ ವಚನ ಸ್ವೀಕರಿಸುವ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ; ಓವೈಸಿ ವಿರುದ್ಧ ಆಕ್ರೋಶ
ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ಯಾಲೆಸ್ತಿನ್ ಪರ ಘೋಷಣೆ ಕೂಗುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಪ್ಯಾಲೆಸ್ತೀನ್ ಕುರಿತು ಮಾಡಿದ ಉಲ್ಲೇಖವನ್ನು ಸಂಸತ್ತಿನ ದಾಖಲೆಗಳಿಂದ ಹೊರಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಐದನೇ ಬಾರಿಗೆ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಒವೈಸಿ, ನಂತರ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಭಾರತದಲ್ಲಿ ಹಿಂದುಳಿದವರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪ್ರಸ್ತಾಪಿಸುವುದನ್ನು ಮುಂದುವರಿಸುವುದಾಗಿ ಹೇಳಿದರು.
ಅಸಾದುದ್ದೀನ್ ಓವೈಸಿ ಪ್ರಮಾಣ ವಚನ ಸ್ವೀಕರಿಸಲು ತೆರಳುತ್ತಿದ್ದಂತೆ ಬಿಜೆಪಿ ಸಂಸದರು 'ಜೈ ಶ್ರೀರಾಮ್' ಘೋಷಣೆ ಕೂಗಲು ಆರಂಭಿಸಿದರು. ಓವೈಸಿ ಉರ್ದುವಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು ಮತ್ತು ತೆಲಂಗಾಣ, ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಮತ್ತು ಪ್ಯಾಲೆಸ್ತೀನ್‌ಗೆ ಜೈಕಾರ ಕೂಗುವ ಮೂಲಕ ಪ್ರಮಾಣವಚನ ಮುಗಿಸಿದರು.
2019ರಲ್ಲಿ ಓವೈಸಿ ಪ್ರಮಾಣವಚನದ ಬಳಿಕ ಜೈಭೀಮ್, ಅಲ್ಲಾ ಓ ಅಕ್ಬರ್ ಮತ್ತು ಜೈ ಹಿಂದ್ ಎಂದು ಕೂಗಿದ್ದರು. ಈ ಬಾರಿ ಅವರು ಜೈ ಹಿಂದ್ ಘೋಷಣೆಯನ್ನು ಕೈಬಿಟ್ಟು, ಜೈ ಪ್ಯಾಲೆಸ್ತೀನ್ ಎಂದರು.
2024 ರ ಲೋಕಸಭೆ ಚುನಾವಣೆಯಲ್ಲಿ ಹೈದರಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರನ್ನು 3.3 ಲಕ್ಷ ಮತಗಳಿಂದ ಓವೈಸಿ ಸೋಲಿಸಿ, 5ನೇ ಬಾರಿಗೆ ಸಂಸದರಾಗಿದ್ದಾರೆ.
ಘೋಷಣೆ ಸಮರ್ಥಿಸಿಕೊಂಡ ಓವೈಸಿ
ಪ್ಯಾಲೆಸ್ತೀನ್ ಪರ ಘೋಷಣೆಯ ಬಗ್ಗೆ ವಿವಾದ ಭುಗಿಲೆದ್ದಂತೆ, ಆ ರೀತಿ ಘೋಷಣೆ ಕೂಗಬಾರದು ಎಂದು ಸಂವಿಧಾನದಲ್ಲಿ ಹೇಳಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.
ಅದರಲ್ಲೇನು ತಪ್ಪಿದೆ, ಸಂವಿಧಾನದಲ್ಲಿ ಅದಕ್ಕೆ ನಿಬಂಧನೆ ಎಲ್ಲಿದೆ ಹೇಳಿ? ಇತರರು ಹೇಳಿದ್ದನ್ನು ಸಹ ನೀವು ಕೇಳಬೇಕು. ನಾನು ಏನು ಹೇಳಬೇಕಿತ್ತೋ ಅದನ್ನು ಹೇಳಿದ್ದೇನೆ ಎಂದರು.
ಓವೈಸಿ ವಿರುದ್ಧ ಆಕ್ರೋಶ
ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು ಓವೈಸಿ ಘೋಷಣೆ ತಪ್ಪು ಮತ್ತು ಸಂವಿಧಾನದ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ ಮತ್ತೊಂದೆಡೆ ಸಂವಿಧಾನದ ವಿರುದ್ಧ ಘೋಷವಾಕ್ಯ ಮಾಡುತ್ತಿದ್ದು, ಓವೈಸಿಯ ಅಸಲಿ ಮುಖ ಹೊರಬಿದ್ದಿದೆ. ಪ್ರತಿದಿನ ದೇಶ ಹಾಗೂ ಸಂವಿಧಾನದ ವಿರುದ್ಧ ಕಿಡಿಕಾರುತ್ತಾರೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.
ಓವೈಸಿ ಅವರ ಘೋಷಣೆಗೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ನಾವು ಯಾವುದೇ ದೇಶವನ್ನು ಬೆಂಬಲಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ, ಆದರೆ ಯಾವುದೇ ದೇಶದ ಹೆಸರನ್ನು ಸದನದಲ್ಲಿ ತೆಗೆದುಕೊಳ್ಳುವುದು ಸರಿಯಲ್ಲ ಎಂದರು.
ಇಸ್ರೇಲ್ ಮತ್ತು ಗಾಜಾ ನಡುವೆ ಯುದ್ಧ ಪ್ರಾರಂಭವಾದಾಗ, ಪ್ಯಾಲೆಸ್ತೀನ್ ಪರಿಸ್ಥಿತಿಯು ಕೇವಲ ಮುಸ್ಲಿಮರಿಗೆ ಸಂಬಂಧಿಸಿದ ವಿಷಯವಲ್ಲ ಆದರೆ ಮಾನವೀಯತೆಯ ವಿಷಯವಾಗಿದೆ ಎಂದು ಓವೈಸಿ ಹೇಳಿದ್ದರು. ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುವನ್ನು ರಾಕ್ಷಸ ಎಂದು ಕರೆದಿದ್ದರು.
ಹಮಾಸ್ ವಿರುದ್ಧ ಇಸ್ರೇಲ್‌ನ ಯುದ್ಧವು ಜೂನ್‌ನಲ್ಲಿ ಎಂಟನೇ ತಿಂಗಳಿಗೆ ಕಾಲಿಟ್ಟಿದೆ. ಈ ಯುದ್ಧದಲ್ಲಿ ಸುಮಾರು 40,000 ಜನರು ಸಾವನ್ನಪ್ಪಿದ್ದು ಮತ್ತು ಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ.












Click it and Unblock the Notifications