
'ಯುಪಿಯಲ್ಲಿ ಬಿಜೆಪಿಯನ್ನು ಸೋಲಿಸಲು ಎಸ್‌ಪಿಗೆ ಮಾತ್ರ ಸಾಧ್ಯ' ಎಂದ ಅಖಿಲೇಶ್
ಲಕ್ನೋ, ಸೆಪ್ಟೆಂಬರ್ 28: ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಎಸ್‌ಪಿಗೆ ಮಾತ್ರ ಸಾಧ್ಯ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿರುವುದು ಆಶ್ಚರ್ಯ ಮೂಡಿಸಿದೆ. ಪಕ್ಷ ಗೆಲುವಿಗಾಗಿ ಕೆಲಸ ಮಾಡಿದೆ. ಆದರೆ "ಅಧಿಕಾರದಲ್ಲಿರುವ ಜನರು ಎಲ್ಲಾ ತಂತ್ರಗಳನ್ನು ಬಳಸಿದರು ಮತ್ತು ಆ ಯಂತ್ರವನ್ನು ದುರುಪಯೋಗಪಡಿಸಿಕೊಂಡರು. ಇದರಿಂದ ನಾವು ಯಶಸ್ವಿಯಾಗಲು ವಿಫಲರಾಗಿದ್ದೇವೆ" ಎಂದು ಅವರು ಹೇಳಿದ್ದಾರೆ.
'ಬಹುಜನ' ಶಕ್ತಿಗಳನ್ನು ಒಂದೇ ವೇದಿಕೆಯಲ್ಲಿ ತರಲು, ಪಕ್ಷದ ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅಖಿಲೇಶ್, "2019ರ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿಗಳು ಐತಿಹಾಸಿಕ ಫಲಿತಾಂಶಕ್ಕಾಗಿ ತೀವ್ರ ಪ್ರಯತ್ನ ನಡೆಸಿದ್ದರು. ರಾಮ್ ಮನೋಹರ ಲೋಹಿಯಾ ಮತ್ತು ಬಿ ಆರ್ ಅಂಬೇಡ್ಕರ್ ಅವರ ಕನಸನ್ನು ನನಸಾಗಿಸಲು ಪ್ರಯತ್ನಿಸಿದರು. 2022 ರಲ್ಲಿ (ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ), ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕಲು ಹೆಣಗಾಡುತ್ತಿರುವ ಎಲ್ಲರನ್ನೂ ತನ್ನೊಂದಿಗೆ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿತು. ಆದರೆ, ನಾವು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ನಾನು ಒಂದು ಮಾತನ್ನು ಹೇಳಬಲ್ಲೆ, 2019 ಮತ್ತು 2022 ರ ಪ್ರಯೋಗಗಳ ಹೊರತಾಗಿಯೂ, ನಮ್ಮ ನಾಯಕರು ಮತ್ತು ಕಾರ್ಯಕರ್ತರು ಕೆಲಸ ಮಾಡಿದ ರೀತಿ, ಯಶಸ್ಸು ಸಿಗದಿದ್ದರೂ ಬಿಜೆಪಿ ವಿರುದ್ಧ ಸ್ಪರ್ಧಿಸಿ ಅದನ್ನು ಸೋಲಿಸುವವರು ಯಾರಾದರೂ ಇದ್ದರೆ, ಅದು ಸಮಾಜವಾದಿ ಪಕ್ಷ" ಎಂದು ಯಾದವ್ ಹೇಳಿದ್ದಾರೆ.
ಸಮಾಜವಾದಿ ಪಕ್ಷವು 2019 ರ ಲೋಕಸಭಾ ಚುನಾವಣೆಯನ್ನು BSP ಯೊಂದಿಗೆ ಮತ್ತು 2022 ರ ವಿಧಾನಸಭಾ ಚುನಾವಣೆಯಲ್ಲಿ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ ಸೋತಿತು. ಪಕ್ಷದ ಸಮಾವೇಶದಲ್ಲಿ ನರೇಶ್ ಉತ್ತಮ್ ಪಟೇಲ್ ಅವರನ್ನು ಮತ್ತೊಮ್ಮೆ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನರೇಶ್ ಉತ್ತಮ್ ಅವರನ್ನು ಅಭಿನಂದಿಸಿದ ಯಾದವ್, ಮುಂದೆ ಬರುವ ಸವಾಲುಗಳನ್ನು ಒಟ್ಟಾಗಿ ಎದುರಿಸುತ್ತೇವೆ ಎಂದರು.
ಸಮಾಜವಾದಿ ಆಂದೋಲನವನ್ನು ಮುಂದಕ್ಕೆ ಕೊಂಡೊಯ್ಯಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಇದು ದೊಡ್ಡ ಹೋರಾಟವಾಗಿದೆ. ಸಮಾಜವನ್ನು ವಿಭಜಿಸಲು ಮುಂದಾಗಿರುವ ಶಕ್ತಿಗಳನ್ನು ತೊಡೆದುಹಾಕಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು. ಆಡಳಿತಾರೂಢ ಬಿಜೆಪಿ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಯಾದವ್, ಒಮ್ಮೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅದು ಜನರ ಒಳಿತಿಗಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.

ಈ ಬಾರಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ 403 ವಿಧಾನಸಭಾ ಸ್ಥಾನಗಳ ಪೈಕಿ ಅಧಿಕ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷವು ಪ್ರಚಂಡ ಗೆಲುವು ಸಾಧಿಸಿತು. ಬಿಜೆಪಿ 273 ಸ್ಥಾನ, ಸಮಾಜವಾದಿ ಪಕ್ಷದ ಮೈತ್ರಿ 124 ಸ್ಥಾನ ಮತ್ತು ಬಹುಜನ ಸಮಾಜ ಪಕ್ಷ 6 ಸ್ಥಾನ ಹಾಗೂ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು 7 ಸ್ಥಾನಗಳಲ್ಲಿ ಜಯಗಳಿಸಿವೆ.