100 ಮಹಿಳೆಯರಲ್ಲಿ 4 ಮಂದಿಯಷ್ಟೇ ಪವಿತ್ರರು: ಖ್ಯಾತ ಸಂತ ಪ್ರೇಮಾನಂದ ಮಹಾರಾಜ್ ವಿವಾದಾತ್ಮಕ ಹೇಳಿಕೆ
ವೃಂದಾವನ ಮೂಲದ ಆಧ್ಯಾತ್ಮಿಕ ಸಂತ ಪ್ರೇಮಾನಂದ ಮಹಾರಾಜ್ ಅವರು ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆಗಳು ವಿವಾದಕ್ಕೆ ಗುರಿಯಾಗಿದೆ. ಯುವತಿಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ವಿಡಿಯೋವೊಂದು ವೈರಲ್ ಆದ ನಂತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವ್ಯಾಪಕವಾಗಿ ಪ್ರಸಾರವಾದ ಈ ಕ್ಲಿಪ್‌ನಲ್ಲಿ ಅವರು ಇಂದಿನ ಕಾಲದಲ್ಲಿ ಪ್ರತಿ 100 ಮಹಿಳೆಯರಲ್ಲಿ ಎರಡರಿಂದ ನಾಲ್ಕು ಹುಡುಗಿಯರು ಮಾತ್ರ ಪರಿಶುದ್ಧರಾಗಿರುತ್ತಾರೆ ಎಂದು ಪ್ರೇಮಾನಂದ ಹೇಳಿದಾರೆ. ಇದು ಹೆಚ್ಚಿನವರು ಬೇರೆಯವರೊಂದಿಗೆ ಪ್ರಣಯ ಅಥವಾ ಲೈಂಗಿಕ ಸಂಬಂಧಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ವಿವಾದಾತ್ಮಕ ಕಾಮೆಂಟ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ. ಈ ಸಂತರು ಮಹಿಳೆಯರ ವಿರುದ್ಧ ಕೆಟ್ಟ ದೃಷ್ಟಿಕೋನಗಳನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವೈರಲ್ ವೀಡಿಯೊದಲ್ಲಿ ಪ್ರೇಮಾನಂದ್ ಅವರು ಇತ್ತೀಚಿನ ಆಧುನಿಕ ಸಂಬಂಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಾಲ್ಕು ಹುಡುಗಿಯರೊಂದಿಗೆ ಇರುವ ಯುವಕನೊಬ್ಬ ವ್ಯಭಿಚಾರದ ಅಭ್ಯಾಸ ಬೆಳೆಸಿಕೊಳ್ಳುತ್ತಾನೆ. ಅವನು ತನ್ನ ಹೆಂಡತಿಗೆ ನಿಷ್ಠನಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ನಾಲ್ಕು ಪುರುಷರೊಂದಿಗೆ ಸಂಬಂಧ ಹೊಂದಿರುವ ಮಹಿಳೆಗೆ "ಗಂಡನನ್ನು ಸ್ವೀಕರಿಸುವ ಧೈರ್ಯವಿಲ್ಲ" ಎಂದು ಅವರು ಹೇಳಿದ್ದಾರೆ. ಈಗೆಲ್ಲ 100ರಲ್ಲಿ ಎರಡು ಅಥವಾ ನಾಲ್ಕು ಹುಡುಗಿಯರು ಮಾತ್ರವೇ ಒಬ್ಬ ಪುರುಷನೊಂದಿಗೆ "ಶುದ್ಧ ಜೀವನ" ನಡೆಸುತ್ತಾರೆ ಎಂದು ಹೇಳಿದ್ದಾರೆ.

ಹುಡುಗನ ತನ್ನ ಪತ್ನಿ ಜೊತೆ ತೃಪ್ತನಾಗಲ್ಲ
ಇಂದಿನ ಯುವಜನರ ಸ್ವಭಾವವನ್ನು ಉಲ್ಲೇಖಿಸಿರುವ ಮಹಾರಾಜ್ ಅವರು ನಾಲ್ಕು ಹುಡುಗಿಯರೊಂದಿಗೆ ಇರುವ ಹುಡುಗನು ತನ್ನ ಹೆಂಡತಿಯೊಂದಿಗೆ ಎಂದಿಗೂ ತೃಪ್ತನಾಗುವುದಿಲ್ಲ. ಏಕೆಂದರೆ ಅವನು ವ್ಯಭಿಚಾರದ ಕಡೆಗೆ ವಾಲುತ್ತಾನೆ. ಅದೇ ರೀತಿ ನಾಲ್ಕು ಪುರುಷರೊಂದಿಗೆ ಇರುವ ಹುಡುಗಿಗೆ ಗಂಡನನ್ನು ಸ್ವೀಕರಿಸಲು ಧೈರ್ಯ ಇರುವುದಿಲ್ಲ. ನನ್ನ ಪ್ರಕಾರ 100ರಲ್ಲಿ ಕೇವಲ ನಾಲ್ಕು ಹುಡುಗಿಯರಷ್ಟೇ ಪವಿತ್ರರಾಗಿರುತ್ತಾರೆ. ಅವರು ಧರ್ಮನಿಷ್ಠ ಜೀವನವನ್ನು ನಡೆಸುತ್ತಾರೆ ಮತ್ತು ಒಬ್ಬ ಪುರುಷನಿಗೆ ಸಮರ್ಪಿತರಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಹೇಳಿಕೆಗಳು ತೀವ್ರ ಟೀಕೆಗೆ ಗುರಿಯಾಗಿವೆ. ಇದನ್ನು ಹಲವರು "ಲಿಂಗತಾರತಮ್ಯ" ಮತ್ತು "ಮಹಿಳೆಯರಿಗೆ ತೀವ್ರವಾಗಿ ಹಾನಿಕಾರಕ" ಎಂದು ಕರೆದಿದ್ದಾರೆ. ಹಲವರು ಅವುಗಳನ್ನು ಕಥೆಗಾರ ಅನಿರುದ್ಧಾಚಾರ್ಯ ಒಳಗೊಂಡ ಇದೇ ರೀತಿಯ ವಿವಾದಕ್ಕೆ ಹೋಲಿಸಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು, ಇದು ಪ್ರತಿಭಟನೆಗಳಿಗೂ ಕಾರಣವಾಗಿತ್ತು. ಇದೀಗ ಪ್ರೇಮಾನಂದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಅಯೋಧ್ಯೆ ಮೂಲದ ಪ್ರಮುಖ ದರ್ಶಕರಾದ ಮಹಾಂತ ರಾಹು ದಾಸ್ ಅವರು ಈ ಹೇಳಿಕೆಗಳನ್ನು ಸ್ವಾಗತಿಸಿದ್ದಾರೆ. ಅವರು ಸತ್ಯವನ್ನೇ ಹೇಳಿದ್ದಾರೆ ಎಂದಿದ್ದಾರೆ. ಸಮಾಜದಲ್ಲಿ ಅಶ್ಲೀಲತೆ ಹೆಚ್ಚುತ್ತಿದೆ. ಸಮಾಜ ಅದನ್ನು ಸ್ವೀಕರಿಸುವುದಿಲ್ಲ ಎಂದು ಬೆಂಬಲ ಸೂಚಿಸಿದ್ದಾರೆ. ಅಯೋಧ್ಯೆ ಮೂಲದ ಮತ್ತೊಬ್ಬ ದರ್ಶಕ ಶಶಿಕಾಂತ ದಾಸ್, ಪ್ರೇಮಾನಂದ ಮಹಾರಾಜ್ ಒಬ್ಬ ಗೌರವಾನ್ವಿತ ಸಂತರಾಗಿದ್ದು, ಅವರು ಅಂತಹ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಬೇಕು. ಲಕ್ಷಾಂತರ ಜನರು ಪ್ರೇಮಾನಂದ ಮಹಾರಾಜರ ಮಾತುಗಳನ್ನು ಕೇಳುವುದರಿಂದ ಅಂತಹ ಹೇಳಿಕೆಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ ಎಂದೂ ಸಲಹೆ ನೀಡಿದ್ದಾರೆ.












Click it and Unblock the Notifications