Odisha Train Tragedy: ಕವಚ ವ್ಯವಸ್ಥೆ ಮಾತ್ರ ನಿಮ್ಮನ್ನು ರಕ್ಷಿಸುತ್ತದೆ, ಪ್ರಯಾಣಿಕರಲ್ಲ: ಕಾಂಗ್ರೆಸ್
ನವದೆಹಲಿ, ಜೂನ್ 05: ಒಡಿಶಾದ ಬಾಲಾಸೂರ್ ಬಳಿಯ ತ್ರಿವಳಿ ರೈಲು ದುರಂತಕ್ಕೆ ಸಂಬಂಧಿಸಿದಂತೆ ಭಾನುವಾರ ಕೇಂದ್ರ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿತು. ಅಫಘಾತ ಕುರಿತು ಆರಂಭ ಲಕ್ಷಣಗಳನ್ನು ಕಡೆಗಣಿಸಿದ್ದೆ ದುರಂತಕ್ಕ ಕಾರಣ ಎಂದ ಕಾಂಗ್ರೆಸ್ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆ ನೀಡುವಂತೆ ಒತ್ತಾಯಿಸಿದೆ.
ಕಾಂಗ್ರೆಸ್ ಪ್ರಧಾನ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಮತ್ತು ಶಕ್ತಿಸಿನ್ಹ್ ಗೋಹಿಲ್ ಅವರು ಒಡಿಶಾ ರೈಲಿನ ದುರಂತ ಪ್ರಸ್ತಾಪಿಸಿದರು. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂಬ ಕಾರಣಕ್ಕೆ ಶುಕ್ರವಾರದಿಂದ ಈವರೆಗೆ ಮೌನವಾಗಗಿದ್ದೇವು. ರೈಲ್ವೆ ಇಲಾಖೆ ಆಂತರಿಕ ವರದಿ, ಕಂಟ್ರೋಲರ್ ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ಮತ್ತು ಸಂಸದೀಯ ಸ್ಥಾಯಿ ಸಮಿತಿಯ ವರದಿ ಗಮನಿಸಲಾಗಿದೆ. ಕೂಡಲೇ ಅಶ್ವಿನಿ ವೈಷ್ಣವ್ ಅವರು ರಾಜೀನಾಮೆ ನೀಡಬೇಕು ಎಂದು ಹೇಳಿದರು.

ಕಳೆದ ಶುಕ್ರವಾರ ಸಂಜೆ ಒಡಿಶಾದ ಬಹನಾಗಾ ಬಜಾರ್ ನಿಲ್ದಾಣದ ಬಳಿ ನಿಂತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದ ಶಾಲಿಮಾರ್-ಚೆನ್ನೈ-ಕೋರೊಮಂಡಲ್ ಎಕ್ಸ್‌ಪ್ರೆಸ್‌ನ ರೈಲು ಬೋಗಿಗಳು ಹಳಿತಪ್ಪಿ ಪಕ್ಕದ ಟ್ರ್ಯಾಕ್‌ಗೆ ಬಿದ್ದವು. ಇದೆ ವೇಳೆ ಯಶವಂತಪುರ- ಹೌರಾ ಎಕ್ಸ್‌ಪ್ರೆಸ್ ರೈಲು ಸಹ ಬೋಗಿಗಳಿಗೆ ಡಿಕ್ಕಿ ಹೊಡೆದು ಅಫಘಾತ ಸಂಭವಿಸಿತು. ಅಪಘಾತದಲ್ಲಿ ಕನಿಷ್ಠ 288 ಜನರು ಸಾವನ್ನಪ್ಪಿದ್ದು, ಸುಮಾರು 1000ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ರಕ್ಷಣಾ ಕಾರ್ಯ ಪೂರ್ಣಗೊಂಡಿದೆ.
ನೈತಿಕ ಹೊಣೆ ಹೊತ್ತು ವೈಷ್ಣವ್ ರಾಜೀನಾಮೆ ನೀಡಲಿ
ಈ ಸಂಬಂಧ ಭಾನುವಾರ ಮಾನಾಡಿದ ಕಾಂಗ್ರೆಸ್ ವಕ್ತಾರರು, ಲಾಲ್ ಬಹದ್ದೂರ್ ಶಾಸ್ತ್ರಿ, ನಿತೀಶ್ ಕುಮಾರ್ ಮತ್ತು ಮಾಧವರಾವ್ ಸಿಂಧಿಯಾ ಅವರು ತಮ್ಮ ಮಂತ್ರಿಗಳಾಗಿದ್ದ ಅವಧಿಯಲ್ಲಿ ರೈಲು ಅಪಘಾತಗಳ ಸಂದರ್ಭದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದೇ ರೀತಿ ಅಶ್ವಿನಿ ವೈಷ್ಣವ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ದೇಶ ನಿರೀಕ್ಷಿಸುತ್ತದೆ ಎಂದು ಖೇರಾ ತಿಳಿಸಿದರು.
ದುರಂತ ನಡೆದ ಸ್ಥಳದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಘರ್ಷಣೆ ನಿರೋಧಕ 'ಕವಚ ವ್ಯವಸ್ಥೆ' ಆ ಮಾರ್ಗದಲ್ಲಿ ಇರಲಿಲ್ಲ. ಇದ್ದಿದ್ದರೆ ಅಪಘಾತ ಸಂವಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಸುತ್ತಲೂ ಕವಚವನ್ನು ರಚಿಸಿಇಕೊಂಡಿದ್ದಾರೆ. ಅದು ಅವರನ್ನು ರಕ್ಷಿಸುತ್ತದೆ ಹೊರತು ಇದು ದೇಶದ ಗಡಿಗಳನ್ನು ರಕ್ಷಿಸುವುದಿಲ್ಲ, ಆಮ್ಲಜನಕದ ಕೊರತೆಯಿಂದ ಸಾಯುವವರನ್ನು ರಕ್ಷಿಸುವುದಿಲ್ಲ, ರೈಲು ಪ್ರಯಾಣಿಕರನ್ನು ರಕ್ಷಿಸುವುದಿಲ್ಲ, ಅದು ನಿಮ್ಮ ಇಮೇಜ್ ಅನ್ನು ಮಾತ್ರ ರಕ್ಷಿಸುತ್ತದೆ. ಕವಚ ಇದ್ದಿದ್ದರೆ ನಿಮ್ಮನ್ನು ಸಹ ರಕ್ಷಿಸುತ್ತಿತ್ತು, ಜನ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಖೇರಾ ಲೇವಡಿ ಮಾಡಿದರು.

ಸಿಎಜಿ ವರದಿ ಪ್ರಕಾರ, 2017 ಮತ್ತು 2021ರ ಮಧ್ಯೆ ಒಟ್ಟು 1,127 ರೈಲುಗಳ ಹಳಿ ತಪ್ಪುವಿಕೆ ಪ್ರಕರಣಗಳು ಪತ್ತೆಯಾಗಿವೆ. ರೈಲ್ವೆ ಟ್ರ್ಯಾಕ್ ನವೀಕರಣಕ್ಕೆ, ಅಭಿವೃದ್ಧೀಗೆ ಬಜೆಟ್ ನಲ್ಲಿ ಪ್ರತಿ ವರ್ಷ ಆರ್ಥಿಕ ನೆರವು ಕಡಿಮೆಯಾಗುತ್ತಿದೆ. ಅಲ್ಲದೇ ಹಾಲಿ ಘೋಷಣೆಯಾಗಿರುವ ಬಜೆಟ್ ಸಹ ಬಳಕೆಯಾಗುತ್ತಿಲ್ಲ ಎಂದು ಕಾಂಗ್ರೆಸ್ ವಕ್ತಾರರು ಆರೋಪಿಸಿದರು.
ಇದೇ ರೀತಿಯ ಘಟನೆಗಳನ್ನು ತಪ್ಪಿಸಿದ ರೈಲ್ವೆ ಅಧಿಕಾರಿಯೊಬ್ಬರು ಕಳೆದ ಫೆ. 9ರಂದು ಆಂತರಿಕ ವರದಿ ನೀಡಿದ್ದನ್ನು ಖೇರಾ ಪ್ರಸ್ತಾಪಿಸಿದ್ದಾರೆ. ನೈಋತ್ಯ ರೈಲ್ವೆ ವಲಯದ ಪ್ರಧಾನ ಮುಖ್ಯ ಕಾರ್ಯ ನಿರ್ವಾಹಕ ವ್ಯವಸ್ಥಾಪಕರು ಎಕ್ಸ್‌ಪ್ರೆಸ್ ರೈಲಿನ ಸಿಗ್ನಲ್ ವೈಫಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಕವಚ ವ್ಯವಸ್ಥೆ ಎಂದರೇನು?
ದೇಶದಲ್ಲೇ ಇದುವರೆಗೂ ನಡೆಯದಂತಹ ರೈಲ್ವೆ ದುರಂತವೊಂದು ಘಟಿಸಿ ಆಗಿದೆ. ಅಪಘಾತ ನಡೆದ ಮಾರ್ಗದಲ್ಲಿ ಸ್ವದೇಶಿ ನಿರ್ಮಿತ ಕವಚ ವ್ಯವಸ್ಥೆ ಇದ್ದಿದ್ದರೆ ಈ ಅಪಘಾತ ತಪ್ಪಿಸಬಹುದಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಹಾಗಾದರೆ ಕವಚ ವ್ಯವಸ್ಥೆ ಎಂದರೇನು ಎಂದು ಇಲ್ಲಿ ತಿಳಿಯೋಣ.
* ಕವಚ ವ್ಯವಸ್ಥೆಯು ರೈಲುಗಳ ಮಧ್ಯೆ ಡಿಕ್ಕಿ ತಪ್ಪಿಸುವ ಒಂದು ವ್ಯವಸ್ಥೆಯಾಗಿದೆ.
* ಕೆಂಪು ಸಿಗ್ನಲ್ ದಾಟದಂತೆ ತಡೆಯುವ ವ್ಯವಸ್ಥೆ ಇದಾಗಿದ್ದು, ರೆಡ್ ಸಿಗ್ನಲ್ ಕಾಣುತ್ತಿದ್ದ ರೈಲು ಮುಂದೆ ಹೋಗದಂತೆ ಸ್ವಯಂ ಬ್ರೇಕ್ ಹಾಕುತ್ತದೆ.
* ರೈಲ್ವೆ ಕ್ರಾಸಿಂಗ್ ಗೇಟ್ ಸಮೀಪಿಸುತ್ತಿದ್ದಂತೆಯೇ ಜೋರಾಗಿ ವಿಷಲ್ ಶಬ್ದ ಹೊರ ಹಾಕಿ ಎಚ್ಚರಿಕೆ ಸಂದೇಶ ನೀಡುತ್ತದೆ.
* ಲೊಕೊ ಪೈಲಟ್‌ಗೆ ಓವರ್ ಸ್ಟೀಡಿಂಗ್ ತಪ್ಪಿಸಲು ನೆರವಾಗುತ್ತದೆ.
* ಒಟ್ಟಾರೆ ಸುರಕ್ಷಿತ ರೈಲ್ವೆ ಪ್ರಯಾಣವನ್ನು ಕವಚ ವ್ಯವಸ್ಥೆ ಖಾತ್ರಿಪಡಿಸುತ್ತದೆ.












Click it and Unblock the Notifications