Odisha Train Accident: ಪುನರ್‌ಸ್ಥಾಪನೆ ಕಾರ್ಯಕ್ಕಾಗಿ ಅಶ್ವಿನಿ ವೈಷ್ಣವ್‌ಗೆ ಪ್ರಧಾನಿ ಕರೆ
ನವದೆಹಲಿ, ಜೂನ್ 04: ಒಡಿಶಾದ ಬಾಲಾಸೋರ್ ಸರಣಿ ರೈಲು ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಕ್ತಾಗೊಂಡಿದೆ. ಅಲ್ಲಿ ಮರುಸ್ಥಾಪನೆ ಕಾರ್ಯ ಯೋಜನೆ ಕುರಿತ ಪ್ರಗತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.
ಶುಕ್ರವಾರ ಸಂಜೆ ಒಡಿಶಾ ಬಳಿ ಶತಮಾನತದಲ್ಲೇ ಅತ್ಯಂತ ಭೀಕರ ರೈಲು ದುರಂತ ನಡೆದಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅಶ್ವಿನಿ ವೈಷ್ಣವ್ ಅವರು ಪರಿಶೀಲಿಸಿದ್ದಾರೆ. ಎನ್‌ಡಿಆರ್ಎಫ್ ಸೇರಿದಂತೆ ಅಧಿಕಾರಿಗಳಿಗೆ ಅಗತ್ಯ ರಕ್ಷಣಾ ಕಾರ್ಯ ಮತ್ತು ಪರಿಹಾರ ಕುರಿತು ಸೂಚಿಸಿದ್ದಾರೆ. ಅಲ್ಲದೇ ಅಪಘಾತ ನಡೆದ ಸ್ಥಳದಲ್ಲಿ ಪುನಃಸ್ಥಾಪನೆ ಕಾರ್ಯದ ಅವಲೋಕನ ಸಹ ಮಾಡುತ್ತಿದ್ದಾರೆ.

ಯುದ್ಧೂಪಾದಿಯಲ್ಲಿ ರಕ್ಷಣಾ ಕಾರ್ಯ ನಡೆದಿದೆ. ಘಟನಾ ಸ್ಥಳದ ಪುನರ್ ಸ್ಥಾಪನೆ ಕಾರ್ಯ ಸಹ ಅದೆ ರೀತಿಯಲ್ಲಿ ನಡೆಯಲಿದೆ ಎಂದು ಇಂದು ಬೆಳಗ್ಗೆ ವೈಷ್ಣವ್ ಅವರು ಪ್ರತಿಕ್ರಿಯಿಸಿದ್ದಾರೆ. ಸಚಿವರಷ್ಟೇ ಅಲ್ಲದೇ ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಡಿಶಾದ ಬಾಲಸೋರ್‌ನಲ್ಲಿ ಅಪಘಾತದ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ, ಅಗತ್ಯೆ ಸೇವೆ, ಪರಿಹಾರ ಕಾರ್ಯಕ್ಕೆ ಸೂಚಿಸಿದ್ದರು.
ಈ ಸಂಬಂಧ ಟ್ವೀಟ್ ಮಾಡಿದ ಪ್ರಧಾನಮಂತ್ರಿಗಳು, ಒಡಿಶಾದಲ್ಲಿ ದುರಂತ ಸಂಭವಿಸಿದ ಸ್ಥಳದ ಪರಿಸ್ಥಿತಿ ಅವಲೋಕಿಸಿದ್ದೇನೆ. ಆದ ದುಃಖವನ್ನು ಪದಗಳಿಂದ ಹೇಳಲು ಸಾಧ್ಯವಿಲ್ಲ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಅಗತ್ಯ ನೆರವು ನೀಡಲು ನಾವು ಬದ್ಧರಾಗಿದ್ದೇವೆ. ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎಲ್ಲರನ್ನು ನಾನು ಶ್ಲಾಘಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದರು.
ಪ್ರಧಾನಮಂತ್ರಿ ಅವರೊಂದಿಗೆ ಉಪಸ್ಥಿತರಿದ್ದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗಾಯಾಳುಗಳನ್ನು ದಾಖಲಿಸಿದ್ದ ಬಾಲಸೋರ್‌ನ ಫಕೀರ್ ಮೋಹನ್ ಆಸ್ಪತ್ರೆಗೆ ಭೇಟಿ ನೀಡಿದರು. ಗಾಯಗೊಂಡ ಪ್ರಯಾಣಿಕರನ್ನು, ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು.

ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ?
ಇದೆಲ್ಲ ಘಟನೆ ಬಳಿಕ ಈ ಮಹಾ ದುರಂತ ನಡೆಯಲು ಕಾರಣ ಏನು ಎಂಬುದರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಯಾವ ಕಾರಣಕ್ಕೂ ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಅವರು ಹೇಳಿದರು. ಅಪಘಾತದ ಅವಲೋಕನಕ್ಕಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಸಹ ನಡೆಯಲಿದೆ.
ರೈಲು ದುರಂತ ಆಘಾತಕಾರಿ. ಅಪಘಾತದಲ್ಲಿ ಕಳೆದುಹೋದ ಜೀವಗಳನ್ನು ಮರಳಿ ತರಲು ಸಾಧ್ಯವಾಗದೇ ಇರಬಹುದು. ಆದರೆ ನೂರಾರು ಜೀವಗಳನ್ನ ಕಳೆದುಕೊಂಡು ದುಃಖದಲ್ಲಿರುವ ಸಂತ್ರಸ್ತರ ಕುಟುಂಬಗಳೊಂದಿಗೆ ನಾವಿದ್ದೇವೆ. ಸರ್ಕಾರವು ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಲು ಮತ್ತು ತಪ್ಪಿತಸ್ಥರು ಪತ್ತೆಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಈಗಾಗೇ ಪ್ರಧಾನಿ ತಿಳಿಸಿದ್ದಾರೆ.
ರೈಲು ಅಪಘಾತ ನಡೆದ ಬಳಿಕ ಈವರೆಗಿನ ಅಂಕಿ ಅಂಶಗಳ ಪ್ರಕಾರ, ಶುಕ್ರವಾರ ರಾತ್ರಿ ನಡೆದ ಅಪಘಾತದಲ್ಲಿ 288 ಜನರು ಸಾವನ್ನಪ್ಪಿದ್ದಾರೆ. 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ಮೂರು ಪ್ರತ್ಯೇಕ ಹಳಿಗಳ ಮೇಲೆ ರೈಲು ಬೋಗಿಗಳು ಚೆಲ್ಲಪಿಲ್ಲಿಯಾಗಿ ಬಿದ್ದಿವೆ. ಇದಕ್ಕೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ವೇಗವಾಗಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಅದರ ಬೋಗಿಗಳು ಎಲ್ಲೆಂದರಲ್ಲಿ ಉರಳಿ ಬಿದ್ದಿವೆ. ಅದರ ಪಕ್ಕ ಲೈನ್ ಮೂಲಕ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಉರಳಿದ್ದ ಬೋಗಿಗೆ ಹಾದಿದೆ.












Click it and Unblock the Notifications